ADVERTISEMENT

ಪಡಿತರ ವಿತರಣೆಗೆ ಮಳಿಗೆ ಸ್ಥಾಪನೆ: ಶಾಸಕ ತಾಕೀತು

​ಪ್ರಜಾವಾಣಿ ವಾರ್ತೆ
Published 14 ಜೂನ್ 2013, 9:12 IST
Last Updated 14 ಜೂನ್ 2013, 9:12 IST

ಕೆ.ಆರ್.ನಗರ: `ಮನೆಗಳಲ್ಲಿ ನ್ಯಾಯಬೆಲೆ ಅಂಗಡಿ ಹೊಂದಿರುವವರು ಕೂಡಲೇ ಮಳಿಗೆಗಳಲ್ಲಿ ತೆರೆಯಬೇಕು. ಇಲ್ಲದಿದ್ದಲ್ಲಿ ಅನುಮತಿ ರದ್ದು ಪಡಿಸಲಾಗುತ್ತದೆ' ಎಂದು ಶಾಸಕ ಸಾ.ರಾ.ಮಹೇಶ್ ಗುರುವಾರ ಎಚ್ಚರಿಕೆ ನೀಡಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಆಹಾರ ಇಲಾಖೆ ಅಧಿಕಾರಿ ಹನುಮಂತೇಗೌಡ ಮಾತನಾಡಿ, ತಾಲ್ಲೂಕಿನಲ್ಲಿ ಪಡಿತರ ಚೀಟಿ ಹೊಂದದವರಿಗೆ ಪಡಿತರ ಚೀಟಿ ನೀಡಲಾಗುತ್ತಿದೆ. ಈವರೆಗೆ ಎಪಿಎಲ್ ಕಾರ್ಡ್‌ನವರು ಬಿಪಿಎಲ್ ಕಾರ್ಡ್ ಮಾಡಿಸಲು ಸುಮಾರು 2ಸಾವಿರ ಜನರು ಅರ್ಜಿ ಸಲ್ಲಿಸಿದ್ದಾರೆ. ಮನೆಗಳಲ್ಲಿ ನ್ಯಾಯ ಬೆಲೆ ಅಂಗಡಿಗಳನ್ನು ಹೊಂದಿರುವವರಿಗೆ ನೋಟಿಸ್ ಜಾರಿ ಮಾಡಿ, ಮಳಿಗೆಗಳಲ್ಲಿ ತೆರೆಯುವಂತೆ ಸೂಚಿಸಲಾಗುವುದು ಎಂದರು.

ತಾಲ್ಲೂಕು ವೈದ್ಯಾಧಿಕಾರಿ ಡಾ.ಟಿ. ಶಿವಪ್ರಸಾದ್ ಮಾತನಾಡಿ, ತಾಲ್ಲೂಕಿನಲ್ಲಿ ಸುಮಾರು 100 ವೈದ್ಯರ ಕೊರತೆ ಇದೆ ಎಂದು ಮಾಹಿತಿ ನೀಡಿದರು. ಶಾಸಕ ಸಾ.ರಾ.ಮಹೇಶ್ ಮಾತನಾಡಿ, ತುರ್ತಾಗಿ ಅಗತ್ಯ ಇರುವ ಕಡೆ  ವೈದ್ಯರನ್ನು ಬಳಸಿಕೊಳ್ಳಿ. ವೈದ್ಯರ ಕೊರತೆ ವಿಷಯ ಸರ್ಕಾರದ ಗಮನದಲ್ಲಿಯೂ ಇದೆ ಎಂದ ಅವರು, ಸಾರ್ವಜನಿಕ ಆಸ್ಪತ್ರೆಗೆ ಬಂದ ರೋಗಿಗಳಿಂದ ಹೊರಗಿನಿಂದ ಔಷಧಿಗಳು ತರಿಸಿಕೊಳ್ಳಬಾರದು ಎಂದು ವೈದ್ಯರಿಗೆ ಸೂಚಿಸಿದರು.

ತಾಲ್ಲೂಕಿನ ವಿವಿಧ ಶಾಲೆಗಳಲ್ಲಿ ಕೊಠಡಿ ಮತ್ತು ಶೌಚಾಲಯ ಕಾಮಗಾರಿ ಎಸ್‌ಡಿಎಂಸಿನಿಂದಲೇ ಮಾಡಲಾಗಿದೆ. ಕಳಪೆ ಕಾಮಗಾರಿಯಾಗಿದ್ದರೆ ಆಯಾ ಶಾಲೆಯ ಮುಖ್ಯಶಿಕ್ಷಕರನ್ನು ಮತ್ತು ಎಸ್‌ಡಿಎಂಸಿ ಅಧ್ಯಕ್ಷರನ್ನು ಹೊಣೆಗಾರರನ್ನಾಗಿ ಮಾಡಿ ದೂರು ನೀಡಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಟಿ.ಜವರೇಗೌಡ ಅವರಿಗೆ ಶಾಸಕರು ತಾಕೀತು ಮಾಡಿದರು.

ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಡಾ. ಸೋಮಶೇಖರ್ ಮಾತನಾಡಿ, ತಾಲ್ಲೂಕಿನಲ್ಲಿ ಈಗಾಗಲೇ ಶೇ 20ರಷ್ಟು ಮಳೆ ಪ್ರಮಾಣ ಕೊರತೆಯಾಗಿದೆ. ಕಳೆದ ಬಾರಿ ಮಳೆ ಪ್ರಮಾಣ ಕಡಿಮೆಯಾಗಿರುವುದರಿಂದ ತಾಲ್ಲೂಕಿನಲ್ಲಿ ಸುಮಾರು ರೂ 11.7 ಕೋಟಿ ಬೆಳೆ ನಷ್ಟವಾಗಿತ್ತು.

ತಾಲ್ಲೂಕಿನಲ್ಲಿ 4 ರೈತರ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ. 3 ಆಕಸ್ಮಿಕ ಸಾವು ಪ್ರಕರಣ ದಾಖಲಾಗಿದೆ. ತಾಲ್ಲೂಕಿನಲ್ಲಿ ಈ ಬಾರಿ ಸುಮಾರು 10ಸಾವಿರ ಟನ್ ಗೊಬ್ಬರದ ಬೇಡಿಕೆ ಇದೆ ಎಂದು ಮಾಹಿತಿ ನೀಡಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಕವಿತಾ ರವಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಕಲ್ಪನಾ ಧನಂಜಯ್, ಪುಷ್ಪಲತಾ ರಮೇಶ್, ಸುಮಿತ್ರ ಗೋವಿಂದರಾಜು, ರಾಜಯ್ಯ, ತಹಶೀಲ್ದಾರ್ ಬಿ.ಎನ್.ವೀಣಾ, ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜು, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ಶಕುಂತಲ ರಮೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಸಾಧಿಕ್    ಖಾನ್, ಸದಸ್ಯರಾದ ಮೇಲೂರು ಕೃಷ್ಣೇಗೌಡ, ಹಾಡ್ಯ ಮಹದೇವಸ್ವಾಮಿ, ಪುರಸಭೆ ಸದಸ್ಯ ಉಮೇಶ್ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.