ADVERTISEMENT

ಪೈಲ್ವಾನರ ಬೆನ್ನು ತಟ್ಟಿದ ರಾಜನಾಥ ಸಿಂಗ್

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2011, 7:00 IST
Last Updated 4 ಫೆಬ್ರುವರಿ 2011, 7:00 IST

ನಂಜನಗೂಡು: ತಾಲ್ಲೂಕಿನ ಸುತ್ತೂರು ಜಾತ್ರಾ ಮಹೋತ್ಸವದ ಅಂಗವಾಗಿ ಗುರುವಾರ ನಡೆದ ನಾಡ ಕುಸ್ತಿ ಪಂದ್ಯಾವಳಿಯನ್ನು ಬಿಜೆಪಿ ರಾಷ್ಟ್ರೀಯ ಮಾಜಿ ಅಧ್ಯಕ್ಷ ಹಾಗೂ ಲೋಕಸಭಾ ಸದಸ್ಯ ರಾಜನಾಥ್‌ಸಿಂಗ್ ಗುರುವಾರ ಕುಸ್ತಿಪಟುಗಳ ಬೆನ್ನು ತಟ್ಟುವ ಮೂಲಕ ಉದ್ಘಾಟಿಸಿದರು.

ಕುಸ್ತಿ ಆಡುವುದರಿಂದ ಮನುಷ್ಯನ ಆರೋಗ್ಯ ಚೆನ್ನಾಗಿರುತ್ತದೆ. ಗ್ರಾಮೀಣ ಭಾಗದಲ್ಲಿ ಹೆಚ್ಚು ಜನರು ಕುಸ್ತಿ ಕ್ರೀಡೆಯನ್ನು ಇಷ್ಟಪಡುತ್ತಾರೆ. ಹಾಗಾಗಿ ಕುಸ್ತಿ ಕಲೆಯು ಇನ್ನೂ ಉಳಿದಿದೆ ಎಂದರೆ ಅದಕ್ಕೆ ಗ್ರಾಮೀಣ ಜನರ ಪ್ರೋತ್ಸಾಹವೇ ಕಾರಣ. ಭಾರತದಲ್ಲಿ ಕುಸ್ತಿಗೆ ರಾಜ-ಮಹಾರಾಜರ ಕಾಲದಲ್ಲಿ ಅತಿ ಹೆಚ್ಚು ಪ್ರೋತ್ಸಾಹ ನೀಡುತ್ತಿದ್ದರು. ಸ್ವತಹ ರಾಜರು ಕುಸ್ತಿ ಆಡುತ್ತಿದ್ದರು. ಪ್ರಸ್ತುತ ಈ ಕ್ರೀಡೆಗೆ ಹೆಚ್ಚಿನ ರೀತಿಯಲ್ಲಿ ಉತ್ತೇಜನ ದೊರುಕುತ್ತಿಲ್ಲ. ಸರ್ಕಾರ ಕುಸ್ತಿ ಕ್ರೀಡಾ ಪಟುಗಳಿಗೆ ಹೆಚ್ಚಿನ ನೆರವು ನೀಡುವ ಮೂಲಕ ಕುಸ್ತಿ ಕಲೆಗೆ ಜೀವ ತುಂಬ ಬೇಕಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಕುಸ್ತಿ ಪಟುಗಳು ಸಾಧನೆ ಮಾಡುವಂತಾಗಲಿ ಎಂದು ಅವರು ಆಶಿಸಿದರು.

ಬಳಿಕ ನಡೆದ ಕುಸ್ತಿ ಕಾಳಗದಲ್ಲಿ ಮೈಸೂರು, ಚಾಮರಾಜನಗರ, ಮಂಡ್ಯ ಜಿಲ್ಲೆ ಸೇರಿದಂತೆ ಹಲವು ಜಿಲ್ಲೆಯ ಕುಸ್ತಿ ಪಟುಗಳು ಪಾಲ್ಗೊಂಡಿದ್ದರು. ಮಲ್ಲರ ಯುದ್ಧ ನೋಡುಗರನ್ನು ಮನರಂಜಿಸಿತು. ಕುಸ್ತಿ ಪಟುಗಳು ಹಾಕುತ್ತಿದ್ದ ವಿವಿಧ ಪಟ್ಟುಗಳು ಅದರಲ್ಲೂ ಕಳಾವರ್‌ಜಂಗ್,  ದೋಬಿಶಾಟ್, ಹಂಟಿ ಹೊಡೆಯುವುದು ಮುಂತಾದ ಚಮತ್ಕಾರಗಳು ಜನರ ಮನಗೆದ್ದವು.

ಕುಸ್ತಿ ಪಂದ್ಯ ಉದ್ಘಾಟನೆಯಲ್ಲಿ ಸುತ್ತೂರು ಮಠದ ಶಿವರಾತ್ರಿದೇಶಿಕೇಂದ್ರ ಸ್ವಾಮೀಜಿ, ಅರಣ್ಯ ಸಚಿವ ಸಿ.ಎಚ್.ವಿಜಯಶಂಕರ್, ವಿಧಾನ ಪರಿಷತ್ ಸದಸ್ಯ ಗೊ.ಮಧುಸೂದನ್ ಉಪಸ್ಥಿತರಿದ್ದರು.ರೈತನ ಹಿತವೇ ದೇಶದ ಹಿತ: ‘ದೇಶದ ಬಹಳಷ್ಟು ಉತ್ಪನ್ನಗಳ ಉತ್ಪಾದಕ ಹಾಗೂ ಉಪಭೋಗಿ ರೈತನೇ ಆಗಿದ್ದು, ಅವನು ಚೆನ್ನಾಗಿದ್ದರೆ ದೇಶ ಸುಖವಾಗಿರುತ್ತದೆ’ ಎಂದು ಬಿಜೆಪಿಯ ಹಿರಿಯ ನಾಯಕ ರಾಜನಾಥಸಿಂಗ್ ಅಭಿಪ್ರಾಯಪಟ್ಟರು.

ನಂಜನಗೂಡು ತಾಲ್ಲೂಕಿನ ಸುತ್ತೂರಿನಲ್ಲಿ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ 44ನೇ ದನಗಳ ಪರಿಷೆಯ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರೈತ ವ್ಯವಸಾಯದ ಮೂಲಕ ಉತ್ಪಾದನೆ ಮಾಡಿದಾಗ ದೇಶದಲ್ಲಿ ಎಲ್ಲ ವ್ಯವಹಾರಿಕ ಚಟುವಟಿಕೆಗಳು ನಡೆಯುತ್ತವೆ. ಆಗ ದೇಶ ಕೂಡ ಚೆನ್ನಾಗಿರುತ್ತದೆ’ ಎಂದರು.
‘ಇಂದು ದೇಶದಲ್ಲಿ ಬೆಲೆ ಏರಿಕೆ, ರೂಪಾಯಿ ಅಪಮೌಲ್ಯದಂತಹ ಆರ್ಥಿಕ ಬಿಕ್ಕಟ್ಟು ಉಂಟಾಗಿದ್ದರೆ ಅದು ಸರ್ಕಾರಗಳು ಕೃಷಿಗೆ ಉತ್ತೇಜನ ನೀಡದಿರುವ ಪರಿಣಾಮ. ಹಿಂದಿನ ಹಲವು ಸರ್ಕಾರಗಳು ಕೃಷಿ ಕ್ಷೇತ್ರವನ್ನು ಕಡೆಗಣಿಸಿವೆ. ಪಕ್ಕದ ಚೀನಾ ಮುಂದುವರಿಯಲು ಕೃಷಿಗೆ ನೀಡಿರುವ ಉತ್ತೇಜನ ಕಾರಣ. ಚೀನಾ ಕೃಷಿಗೆ ಶೇ 85 ರಷ್ಟು ಸಬ್ಸಿಡಿ ನೀಡುತ್ತಾ ಬಂದಿದೆ. ನಮ್ಮ ದೇಶದಲ್ಲಿ ಅದು ಶೇ 25ನ್ನು ದಾಟಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಒಬ್ಬ ರಾಜಕಾರಿಣಿ ಅಗುವುದಕ್ಕೂ ಮುನ್ನ ನಾನು ಒಬ್ಬ ಸಾಮಾನ್ಯ ರೈತನ ಮಗ. ಹೀಗಾಗಿ ಕೃಷಿಯ ಬಿಕ್ಕಟ್ಟು, ಸಂಕಷ್ಟಗಳು ಅರ್ಥವಾಗುತ್ತವೆ. ಮೊದಲ ಬಾರಿಗೆ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಲು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಸಲಹೆ ನೀಡಿದ್ದೆ. ಹೀಗಾಗಿ ಕಳೆದ ಬಜೆಟ್‌ನಲ್ಲಿ ರೈತರಿಗೆ ಶೇ 3ರ ಬಡ್ಡಿ ದರದಲ್ಲಿ ಸಾಲ ನೀಡಿದರು. ಕೆಲವೇ ದಿನಗಳಲ್ಲಿ ಮಂಡನೆಯಾಗುವ ಬಜೆಟ್‌ನಲ್ಲಿ ಶೇ 1 ರ ಬಡ್ಡಿ ದರದಲ್ಲಿ ಸಾಲ ನೀಡುವ ವಿಶ್ವಾಸವಿದೆ’ ಎಂದು ತಿಳಿಸಿದರು.

 ‘ಫಾರ್ಮ ಇನ್‌ಕಮ್ ಇನ್‌ಸೂರೆನ್ಸ್ ಸ್ಕೀಮ್ ಎಂಬ ಹೊಸ ಯೋಜನೆಯನ್ನು ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳಲ್ಲಿ ಜಾರಿಗೆ ತರಲು ಯೋಚಿಸುತ್ತಿದ್ದೇವೆ. ರೈತನ ಬಳಿ ಇರುವ ಆಸ್ತಿಯ ಮೌಲ್ಯ ತೀರ್ಮಾನ ಮಾಡಿ, ತನ್ನ ಜಮೀನಿನಲ್ಲಿ ಬೆಳೆಯುವ ಬೆಳೆಯ ಮೌಲ್ಯ ನಿರ್ಧರಿಸಲಾಗುತ್ತದೆ. ಅತಿವೃಷ್ಟಿ, ಅನಾವೃಷ್ಟಿ ಸಂಭವಿಸಿದಾಗ ಆ ಮೌಲ್ಯದ ಆಧಾರದ ಮೇಲೆ ಪರಿಹಾರ ನೀಡಲಾಗುತ್ತದೆ’ ಎಂದರು.

  ‘ನಮ್ಮ ಸನಾತನ ಸಂಸ್ಕೃತಿಯ ಜೀವಾಳವಾಗಿರುವ ಖುಷಿ ಮತ್ತು ಕೃಷಿಗಳರೆಡು ಸುತ್ತೂರಿನಲ್ಲಿ ಮಿಳಿತಗೊಂಡಿವೆ. ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಇಲ್ಲಿ ಆಧ್ಯಾತ್ಮ ಹಾಗೂ ವ್ಯವಸಾಯಕ್ಕೆ ಉತ್ತೇಜನ ನೀಡಿರುವುದರಿಂದ ಧನಾತ್ಮಕ ಶಕ್ತಿಯ ಅನುಭೂತಿ ನನಗಾಗುತ್ತಿದೆ’ ಎಂದು ಹೇಳಿದರು.ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಅರಣ್ಯ ಸಚಿವ ಸಿ.ಎಚ್.ವಿಜಯಶಂಕರ್, ಶಾಸಕರಾದ ಗೋ.ಮಧುಸೂದನ್, ಪ್ರೊ.ಮಲ್ಲಿಕಾರ್ಜುನಪ್ಪ, ತೊಂಟದಾರ್ಯ, ಕರ್ನಾಟಕ ಮೃಗಾಲಯ ಪಾಧಿಕಾರದ ಅಧ್ಯಕ್ಷ ಎಂ.ನಂಜುಂಡಸ್ವಾಮಿ  ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.