ADVERTISEMENT

ಬಸ್ ಕೊರತೆ; ಪ್ರಯಾಣಿಕರ ಪರದಾಟ

ಚುನಾವಣಾ ಸೇವೆಗೆ ಕೆಎಸ್‌ಆರ್‌ಟಿಸಿ ಬಸ್ಸುಗಳ ನಿಯೋಜನೆ

​ಪ್ರಜಾವಾಣಿ ವಾರ್ತೆ
Published 12 ಮೇ 2018, 5:48 IST
Last Updated 12 ಮೇ 2018, 5:48 IST

ಮೈಸೂರು: ಚುನಾವಣಾ ಕಾರ್ಯಕ್ಕೆ ಬಸ್ಸುಗಳ ನಿಯೋಜನೆ ಮಾಡಿದ್ದರಿಂದ ಶುಕ್ರವಾರ ಕೆಎಸ್‌ಆರ್‌ಟಿಸಿ ಬಸ್ಸುಗಳು ವಿರಳ ಸಂಖ್ಯೆಯಲ್ಲಿ ಸಂಚರಿಸಿದವು. ಇದರಿಂದ ದೂರದ ಊರುಗಳಿಗೆ ತೆರಳುವ ಪ್ರಯಾಣಿಕರು ತೊಂದರೆ ಅನುಭವಿಸಿದರು.

ನಗರದ ಸಬ್‌ ಅರ್ಬನ್‌ ಬಸ್ ನಿಲ್ದಾಣದಲ್ಲಿ ಸಂಜೆಯಿಂದ ರಾತ್ರಿಯವ ರೆಗೂ ಪ್ರಯಾಣಿಕರು ಬಸ್ಸಿಗಾಗಿ ಕಾಯುತ್ತಿದ್ದ ದೃಶ್ಯ ಕಂಡುಬಂತು. ಮತದಾನಕ್ಕೆಂದು ಊರಿಗೆ ತೆರಳಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ನಿಲ್ದಾಣಕ್ಕೆ ಬಂದಿದ್ದರು.

ಪ್ರಯಾಣಿಕರು ಬಸ್ಸಿಗಾಗಿ ತುಂಬಾ ಹೊತ್ತು ಕಾಯಬೇಕಾಯಿತು. ಬಸ್ಸು ಬಂದಾಗ ಅದನ್ನೇರಲು ಪೈಪೋಟಿಯೇ ನಡೆಯಿತು. ಕೆಲವರು ಸೀಟು ಪಡೆಯುವ ಉದ್ದೇಶದಿಂದ ಕಿಟಕಿ ಮೂಲಕ ಬಸ್ಸು ಏರಿದರು.

ADVERTISEMENT

ಜಿಲ್ಲೆಯಲ್ಲಿ ಚುನಾವಣಾ ಕೆಲಸಕ್ಕೆ ಮತ್ತು ಮತಗಟ್ಟೆ ಸಿಬ್ಬಂದಿಯನ್ನು ಜಿಲ್ಲೆಯ ವಿವಿಧ ಮತಗಟ್ಟೆಗಳಿಗೆ ಕರೆದೊಯ್ಯಲು ಖಾಸಗಿ ವಾಹನಗಳಲ್ಲದೆ ಸುಮಾರು 400 ಕೆಎಸ್‌ಆರ್‌ಟಿ ಬಸ್ಸುಗಳನ್ನು ನಿಯೋಜಿಸಲಾಗಿದೆ. ಕೆಲವೊಂದು ಮಾರ್ಗಗಳಲ್ಲಿ ಸಂಚರಿಸುವ ಬಸ್ಸುಗಳನ್ನು ಚುನಾವಣೆ ಸೇವೆಗೆ ಬಳಸಲಾಗಿದೆ. ಇದರಿಂದ ಬಸ್ಸುಗಳ ಕೊರತೆಯ ಬಿಸಿ ಪ್ರಯಾಣಿಕರಿಗೆ ತಟ್ಟಿದೆ. ಮೈಸೂರು– ಬೆಂಗಳೂರು ಮಾರ್ಗ ಒಳಗೊಂಡಂತೆ ಅಧಿಕ ಸಂಖ್ಯೆಯ ಬಸ್ಸುಗಳ ಸೌಲಭ್ಯ ಇದ್ದ ಮಾರ್ಗಗಳಲ್ಲಿ ಮಾತ್ರ ಸೇವೆ ಕಡಿತಗೊಳಿಸಲಾಗಿದೆ. ಗ್ರಾಮೀಣ ಭಾಗಗಳಿಗೆ ಹೋಗುವ ಬಸ್ಸುಗಳನ್ನು ಚುನಾವಣೆ ಸೇವೆಗೆ ಬಳಸಿಕೊಂಡಿಲ್ಲ ಎಂದು ಕೆಎಸ್‌ಆರ್‌ಟಿಸಿ ಮೈಸೂರು ವಿಭಾಗೀಯ ನಿಯಂತ್ರಕ ಎಂ.ವಾಸು ತಿಳಿಸಿದರು.

ಮತದಾನಕ್ಕಾಗಿ ಊರಿಗೆ ಹೋಗುವವರು ಹೆಚ್ಚಿನ ಸಂಖ್ಯೆಯಲ್ಲಿ ಬಂದ ಕಾರಣ ಬಸ್ಸುಗಳ ಕೊರತೆ ಉಂಟಾಯಿತು. ಪರ್ಯಾಯ ವ್ಯವಸ್ಥೆ ಕಲ್ಪಿಸಿ ಸಮಸ್ಯೆಯನ್ನು ಬಗೆಹರಿಸಲಾಯಿತು. ಹುಣಸೂರು, ಪಿರಿಯಾಪಟ್ಟಣ, ಕೆ.ಆರ್‌.ನಗರ ಕಡೆಗೆ ಹೋಗುವ ಪ್ರಯಾಣಿಕರಿಗೆ ಯಾವುದೇ ತೊಂದರೆ ಆಗಿಲ್ಲ ಎಂದರು.

ನಗರ ಸಾರಿಗೆ ಬಸ್ ಬಳಕೆ: ದೂರದ ಊರುಗಳಿಗೆ ತೆರಳುವ ಪ್ರಯಾಣಿಕರಿಗೆ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ನಗರ ಸಾರಿಗೆ ಬಸ್ಸುಗಳನ್ನು ಗ್ರಾಮೀಣ ಭಾಗದ ಸೇವೆಗೆ ಬಳಸಲಾಯಿತು. ಸಂಜೆ ಬಳಿಕ ಮಳವಳ್ಳಿ, ಮಂಡ್ಯ, ಬೆಂಗಳೂರು ಕಡೆಗೆ ನಗರ ಸಾರಿಗೆಯ ಸುಮಾರು 25ರಿಂದ 30 ಬಸ್ಸುಗಳು ಸಂಚರಿಸಿದವು. ನಗರದಲ್ಲಿ ಪ್ರಯಾಣಿಕರ ಓಡಾಟಕ್ಕೆ ಯಾವುದೇ ತೊಂದರೆ ಉಂಟಾಗಿಲ್ಲ ಎಂದು ಮೈಸೂರು ನಗರ ಸಾರಿಗೆ ವಿಭಾಗೀಯ ನಿಯಂತ್ರಕ ಶ್ರೀನಿವಾಸ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.