ADVERTISEMENT

ಬಿಜೆಪಿ ಅಧಿಕಾರಕ್ಕೆ ಬಂದರೆ ಹೊಸ ಮರಳು ನೀತಿ

ಬಿಜೆಪಿ ಸಂಘಟನಾ ಸಮಾವೇಶದಲ್ಲಿ ಪಕ್ಷ ಸೇರಿದ ಎಸ್.ಶಂಕರ್‌

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2018, 12:21 IST
Last Updated 6 ಮಾರ್ಚ್ 2018, 12:21 IST
ತಿ.ನರಸೀಪುರದಲ್ಲಿ ಸೋಮವಾರ ನಡೆದ ಬಿಜೆಪಿ ಸಂಘಟನಾ ಸಮಾವೇಶದಲ್ಲಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಬಾವುಟ ನೀಡುವ ಮೂಲಕ ಎಸ್.ಶಂಕರ್ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡರು
ತಿ.ನರಸೀಪುರದಲ್ಲಿ ಸೋಮವಾರ ನಡೆದ ಬಿಜೆಪಿ ಸಂಘಟನಾ ಸಮಾವೇಶದಲ್ಲಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಬಾವುಟ ನೀಡುವ ಮೂಲಕ ಎಸ್.ಶಂಕರ್ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡರು   

ತಿ.ನರಸೀಪುರ: ‘ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾಗುತ್ತಿದ್ದಂತೆಯೇ ಸರಳವಾದ ಮರಳುನೀತಿ ರೂಪಿಸಲಾಗುವುದು. ಅಲ್ಲದೇ, ಸಣ್ಣಪುಟ್ಟ ಪ್ರಕರಣಗಳನ್ನು ಹಿಂತೆಗೆದು ಕೊಳ್ಳಲಾಗುವುದು’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದರು.

ಪಟ್ಟಣದಲ್ಲಿ ಸೋಮವಾರ ನಡೆದ ಬಿಜೆಪಿ ಸಂಘಟನಾ ಸಮಾವೇಶ ಹಾಗೂ ಎಸ್.ಶಂಕರ್ ಅವರ ಪಕ್ಷ ಸೇರ್ಪಡೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಇನ್ನೆರಡು ತಿಂಗಳಲ್ಲಿ ಮನೆಗೆ ಹೋಗುವವರ ಬಗ್ಗೆ ಪದೇ ಪದೇ ಮಾತ ನಾಡುವುದು ಬೇಡ. ಅವರು ಮರಳು ನೀತಿಯನ್ನೇ ಹಾಳುಮಾಡಿದ್ದಾರೆ. ವಿನಾ ಕಾರಣ ಜನರ ಮೇಲೆ ಕೇಸು ಹಾಕಿದ್ದಾರೆ. ಆದಷ್ಟು ಬೇಗ ಕರ್ನಾಟಕವನ್ನು ಕಾಂಗ್ರೆಸ್‌ಮುಕ್ತ ಮಾಡುತ್ತೇವೆ’ ಎಂದರು.

ADVERTISEMENT

‘ಕಾಂಗ್ರೆಸ್‌ ಪಕ್ಷ ದೇಶದ ಬಹುಪಾಲು ಕಡೆ ಹೇಳಹೆಸರಿಲ್ಲದಂತೆ ಅವನತಿನತ್ತ ಸಾಗಿದೆ. ಕರ್ನಾಟಕ ಮಾತ್ರ ಅವರಿಗೆ ನೆಲೆಯಾಗಿತ್ತು. ಈ ಬಾರಿ ಜನ ಬಿಜೆಪಿ ಮೇಲೆ ಹಾಗೂ ಮೋದಿ ಅವರ ಆಡಳಿತ ವೈಖರಿ ಮೇಲೆ ವಿಶ್ವಾಸವಿಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಓಡಾಡಲಿಕ್ಕೆ ಜಾಗವೇ ಇಲ್ಲದಂತೆ ಮಾಡುತ್ತೇವೆ’ ಎಂದು ಲೇವಡಿ ಮಾಡಿದರು.

‘ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಹಗುರವಾಗಿ ಮಾತನಾಡುವ ಸಿದ್ದರಾಮಯ್ಯ ತಿಳಿಗೇಡಿ, ಲಜ್ಜೆಗೇಡಿ. 14ನೇ ಹಣಕಾಸು ಯೋಜನೆಯ ಅನುದಾನ ₹ 2 ಲಕ್ಷ ಕೋಟಿ ಹಾಗೂ ಕೇಂದ್ರ ಸರ್ಕಾರ ನೀಡಿದ ₹ 1.5 ಲಕ್ಷ ಕೋಟಿ ಹಣ ಎಲ್ಲಿ ಎಂಬುದನ್ನು ಅವರು ಸ್ಪಷ್ಟಪಡಿಸಬೇಕು. ಸರ್ಕಾರದ ಖಜಾನೆಯನ್ನು ದಿವಾಳಿ ಮಾಡಿದ್ದಾರೆ’ ಎಂದು ಖಾರವಾಗಿ ಟೀಕಿಸಿದರು.

ಬಳಿಕ ಮಾತನಾಡಿದ ಎಸ್.ಶಂಕರ್‌, ‘ಹಲವು ವರ್ಷಗಳಿಂದ ಕಾಂಗ್ರೆಸ್ ಕಾರ್ಯಕರ್ತನಾಗಿ ದುಡಿದೆ. ಆದರೂ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು ನನ್ನನ್ನು ರಾಜಕೀಯವಾಗಿ ತುಳಿಯುತ್ತ ಬಂದರು. ಸ್ವಾಭಿಮಾನಕ್ಕೆ ಧಕ್ಕೆ ಬಂದ ಮೇಲೆ ತರಾತುರಿಯಲ್ಲಿ ಜೆಡಿಎಸ್‌ ಸೇರಿದೆ. ಆದರೆ, ಅಲ್ಲಿಯೂ ಅನ್ಯಾಯವಾಯಿತು. ಹಾಗಾಗಿ, ಹೊರಬಂದು ಬಿಜೆಪಿ ಸೇರಿದೆ’ ಎಂದರು.

ಸಂಸದ ಶ್ರೀರಾಮುಲು ಮಾತನಾಡಿದರು. ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಕೋಟೆ ಶಿವಣ್ಣ, ಮಾಜಿ ಸಚಿವ ಸಿ.ಪಿ.ಯೋಗೇಶ್ವರ್, ಛಲವಾದಿ ಮಹಾಸಭಾದ ಕೆ.ಶಿವರಾಂ, ಮುಖಂಡರಾದ ಮೇದಪ್ಪ, ಸಿ.ರಮೇಶ್, ಡಾ.ಭಾರತೀಶಂಕರ್, ಕಾ.ಪು.ಸಿದ್ಧಲಿಂಗಸ್ವಾಮಿ, ಚಾಮರಾಜನಗರ ರಾಮಚಂದ್ರ, ಕ್ಷೇತ್ರಾಧ್ಯಕ್ಷ ಪರಶಿವಮೂರ್ತಿ ಮಹದೇವಯ್ಯ, ಮಹೇಶ್ ಶಂಕರ್, ಮೂಗೂರು ಸಿದ್ದರಾಜು, ಅಪ್ಪಣ್ಣ, ಕೌಟಿಲ್ಯ ರಘು ಹಾಜರಿದ್ದರು.
***
ರಾಹುಲ್ ಗಾಂಧಿ ರಾಜ್ಯಕ್ಕೆ ಬಂದಷ್ಟು ಬಿಜೆಪಿಗೆ ಅನುಕೂಲ. ಅವರನ್ನು ಮೈಸೂರು, ಚಾಮರಾಜನಗರ ಜಿಲ್ಲೆಗೂ ಕರೆತನ್ನಿ ಕಮಲಕ್ಕೆ ಗೆಲುವು ತಂದುಕೊಡಿ.
– ಬಿ.ಎಸ್‌.ಯಡಿಯೂರಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ
***
ಸಚಿವ ಮಹಾದೇವಪ್ಪ ಎಷ್ಟೇ ಹಣ ತಂದು ಖರ್ಚು ಮಾಡಿದರೂ ಗೆಲ್ಲಲು ಸಾಧ್ಯವಿಲ್ಲ. ಅವರ ಪುತ್ರನ ಬದಲು ಅವರೇ ಚುನಾವಣೆ ಎದುರಿಸಲಿ; ನಾವೇನೆಂದು ತೋರಿಸುತ್ತೇವೆ.
 ಎಸ್‌.ಶಂಕರ್‌, ಬಿಜೆಪಿ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.