ADVERTISEMENT

ಮುಜರಾಯಿ ದೇವಸ್ಥಾನಕ್ಕೆ ಅನುದಾನ: ಗೋ. ಮಧುಸೂದನ್‌

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2014, 6:34 IST
Last Updated 14 ಮಾರ್ಚ್ 2014, 6:34 IST

ಮೈಸೂರು: ವಿಧಾನ ಪರಿಷತ್ತಿನ ದಕ್ಷಿಣ ಪದವೀಧರ ಕ್ಷೇತ್ರ ವ್ಯಾಪ್ತಿಯ ನಾಲ್ಕು ದೇವಾಲಯಗಳಿಗೆ ರಾಜ್ಯ ಸರ್ಕಾರ ಅನುದಾನ ಬಿಡುಗಡೆ ಮಾಡಿ ಆದೇಶ ಹೊರಡಿಸಿದೆ ಎಂದು ವಿಧಾನ ಪರಿಷತ್‌ ಸದಸ್ಯ ಗೋ. ಮಧುಸೂದನ್‌ ತಿಳಿಸಿದ್ದಾರೆ.

ಕ್ಷೇತ್ರ ವ್ಯಾಪ್ತಿಯ ಮೈಸೂರು, ಹಾಸನ, ಮಂಡ್ಯ ಹಾಗೂ ಚಾಮರಾಜನಗರ ಜಿಲ್ಲೆಯ ನಾಲ್ಕು ದೇವಾಲಯಗಳಿಗೆ ಸರ್ಕಾರ ₨ 10 ಲಕ್ಷ ಬಿಡುಗಡೆ ಮಾಡಿದೆ.

ಮೈಸೂರಿನ ಸಂತೆಪೇಟೆಯ ಪ್ರಸನ್ನ ನಂಜುಂಡೇಶ್ವರಸ್ವಾಮಿ ದೇವಸ್ಥಾನ, ಗುಂಡ್ಲುಪೇಟೆ ತಾಲ್ಲೂಕಿನ ಹುಲುಗನಮುರಡಿ ಗ್ರಾಮದ ವೆಂಕಟರಾಮಣಸ್ವಾಮಿ ದೇವಸ್ಥಾನ, ಪಾಂಡವಪುರ ತಾಲ್ಲೂಕಿನ ಕೋದಂಡರಾಮಸ್ವಾಮಿ ದೇವಾಲಯ ಹಾಗೂ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಆನೆಕನ್ನಂಬಾಡಿಯ ತ್ರಿಕೂಟಾಚಲ ದೇವಾಲಯಗಳಿಗೆ ಮುಜರಾಯಿ ಸಚಿವ ಪ್ರಕಾಶ್‌ ಹುಕ್ಕೇರಿ ಅವರು ತಲಾ ₨ 2.5 ಲಕ್ಷ ಅನುದಾನ ಬಿಡುಗಡೆ ಮಾಡಿ ಆದೇಶ ಹೊರಡಿಸಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಧಾನ ಪರಿಷತ್ತಿನ ದಕ್ಷಿಣ ಪದವೀಧರ ಕ್ಷೇತ್ರ ವ್ಯಾಪ್ತಿಯಲ್ಲಿ ಐತಿಹಾಸಿಕ ದೇವಾಲಯಗಳಿವೆ. ಈ ಪೈಕಿ ಕೆಲವು ದೇವಾಲಯಗಳು ಶಿಥಿಲಾವಸ್ಥೆ ತಲುಪಿವೆ. ಹೀಗಾಗಿ, ದೇವಾಲಯಗಳ ಅಭಿವೃದ್ಧಿಗೆ ಸೂಕ್ತ ಅನುದಾನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಫೆ. 15ರಂದು ಸಚಿವರಿಗೆ ಮನವಿ ಸಲ್ಲಿಸಲಾಗಿತ್ತು ಎಂದು ಶಾಸಕ ಗೋ. ಮಧುಸೂದನ್‌ ಹೇಳಿದ್ದಾರೆ.

‘ಕೈಗಾರಿಕೆಯಿಂದ ಜೀವವೈವಿಧ್ಯ ನಾಶ’
ಕೊಳ್ಳೇಗಾಲ: ‘ಕೈಗಾರಿಕಾ ಕ್ರಾಂತಿ ಮತ್ತು ಇತರೆ ಕಾರಣಗಳಿಂದ ಜೈವಿಕ ಸಂಪತ್ತು ನಶಿಸುತ್ತಿದೆ’ ಎಂದು ಉಪನ್ಯಾಸಕ ಜಿ.ಕೆ. ಕಾಂತರಾಜು ತಿಳಿಸಿದರು.

ತಾಲ್ಲೂಕಿನ ದೊಡ್ಡಿಂದುವಾಡಿ ಸರ್ಕಾರಿ ಪ್ರೌಢಶಾಲೆಯಲ್ಲಿ ರಾಜ್ಯ ವಿಜ್ಞಾನ ಪರಿಷತ್ತು ಜಿಲ್ಲಾ ಸಮಿತಿ ವತಿಯಿಂದ ‘ನಿಮ್ಮ ಬಳಿಗೆ ವಿಜ್ಞಾನ’ ಶೀರ್ಷಿಕೆಯಡಿ ಸೋಮವಾರ ಏರ್ಪಡಿಸಿದ್ದ ‘ಜೀವಿ ವೈವಿದರ್ಯತೆಯ ಸಂರಕ್ಷಣೆ ಅಗತ್ಯತೆ’ ಕುರಿತ ಮಾತನಾಡಿದರು.

ಭೂಮಿ ಮೇಲಿನ ಜೀವಗಳ ನಡುವಿನ ಸೂಕ್ಷ್ಮ ಸಂಬಂಧಗಳು ಈಚೆಗೆ ಹಾಳಾಗುತ್ತಿವೆ. ಅನೇಕ ಜೀವ ಪ್ರಭೇದಗಳು ವಿನಾಶದ ಅಂಚಿನಲ್ಲಿವೆ. ಇದರ ಪರಿಣಾಮ ಪರಿಸರದಲ್ಲಿ ಅಸಮತೋಲನ ಉಂಟಾಗಿದೆ ಎಂದರು.

ರಾಜ್ಯ ವಿಜ್ಞಾನ ಪರಿಷತ್‌ ಜಿಲ್ಲಾ ಸಮಿತಿ ಕಾರ್ಯದರ್ಶಿ ಬಿ.ಎನ್‌. ಶಿವಶಂಕರ್‌ ಮಾತನಾಡಿ, ವಿಜ್ಞಾನ ಮತ್ತು ವೈಜ್ಞಾನಿಕ ಮನೋಭಾವದ ಬಗ್ಗೆ ವಿವರಣೆ ನೀಡಿದರು.

ಪ್ರೌಢಶಾಲೆ ಮುಖ್ಯ ಶಿಕ್ಷಕ ಚಿನ್ನಸ್ವಾಮಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿಜ್ಞಾನ ಶಿಕ್ಷಕಿ ಚಂದ್ರಕಲಾ, ವೆಂಕಟಾಚಲ, ಜೋಸೆಫ್‌ ರವಿ, ಜಯಕುಮಾರ್‌, ಚಿಕ್ಕರಾಜು, ರಾಧಿಕಾ, ಮಹೇಶ್‌, ಕಿರಣ್‌ಕುಮಾರ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.