ADVERTISEMENT

ಮೈಸೂರಿಗೆ ಜೆ–ನರ್ಮ್‌ ಯೋಜನೆಯಡಿ 125 ಬಸ್‌: ಸಚಿವ

ವಿಜಯನಗರ ಬಸ್‌ ಘಟಕ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2013, 9:07 IST
Last Updated 25 ಸೆಪ್ಟೆಂಬರ್ 2013, 9:07 IST

ಮೈಸೂರು: ಕೇಂದ್ರ ಸರ್ಕಾರವು ಜೆ–ನರ್ಮ್‌ ಯೋಜನೆಯಡಿ ಕರ್ನಾಟಕಕ್ಕೆ 2,100 ಬಸ್ಸುಗಳನ್ನು ಒದಗಿಸುತ್ತಿದ್ದು, ಇದರಲ್ಲಿ 125 ಬಸ್ಸುಗಳನ್ನು ಮೈಸೂ ರಿಗೆ ನೀಡಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

ನಗರದಲ್ಲಿ ಮಂಗಳವಾರ ನಡೆದ 30 ನಗರ ಸಾರಿಗೆ ನೂತನ ಬಸ್ಸುಗಳಿಗೆ ಚಾಲನೆ ಮತ್ತು ವಿಜಯನಗರ ಕೆಎಸ್‌ ಆರ್‌ಟಿಸಿ ಬಸ್‌ ಘಟಕ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವಿಜಯನಗರ ಬಸ್‌ ಘಟಕವು ಮೈಸೂರಿನ ನಾಲ್ಕನೇ ಘಟಕ ವಾಗಿದೆ. ಈ ಘಟಕದಿಂದ ಈಗ 30 ಬಸ್ಸುಗಳಿಗೆ ಚಾಲನೆ ನೀಡಲಾಗಿದೆ.

ಪ್ರಸ್ತುತ ಮೈಸೂರಿನಿಂದ ಸುತ್ತಮುತ್ತಲಿನ 120 ಹಳ್ಳಿಗಳಿಗೆ ನಗರ ಸಾರಿಗೆ ಸೌಕರ್ಯ ಕಲ್ಪಿಸಲಾಗಿದೆ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಇನ್ನು ಹೆಚ್ಚು ಬಸ್ಸುಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುವುದು. ಈ ನಗರ ದಲ್ಲಿ ರೂ 200 ಕೋಟಿ ವೆಚ್ಚದಲ್ಲಿ (ಬಸ್ಸುಗಳ ಖರೀದಿ ಸೇರಿದಂತೆ) ಇನ್ನೂ ಮೂರು ಡಿಪೊಗಳನ್ನು ತರೆಯಲು ಉದ್ದೇಶಿಸಲಾಗಿದೆ. ರಾಜ್ಯದ 28 ನಗರ ಗಳ ನಡುವೆ ಅಂತರನಗರಿ ಬಸ್‌ ಸಂಚಾರ ವ್ಯವಸ್ಥೆ ಜಾರಿಗೊಳಿ ಸಲಾಗುತ್ತಿದೆ ಎಂದು ಹೇಳಿದರು.

ಮೈಸೂರಿನಲ್ಲಿ 167 ಬಸ್‌ ಶೆಲ್ಟರ್‌ ಮತ್ತು ಆರು ಬಸ್‌ ನಿಲ್ದಾಣಗಳಲ್ಲಿ ಜಾರಿಗೊಳಿಸಿರುವ ಇಂಟಲಿಜೆಂಟ್‌ ಟ್ರಾನ್ಸ್‌ಪೋರ್ಟ್‌ ಸಿಸ್ಟಂ ಯಶಸ್ವಿಯಾ ಗಿದ್ದು, ಬೆಂಗಳೂರು, ಹುಬ್ಬಳ್ಳಿ, ಧಾರವಾಡ ಮೊದಲಾದ ನಗರಗಳಲ್ಲಿ ಈ ವ್ಯವಸ್ಥೆಯನ್ನು ಅಳವಡಿಸಲಾ ಗುತ್ತಿದೆ.

ಹಾಪ್‌ ಆನ್‌ ಹಾಪ್‌ ಆಫ್‌ ಸಾರಿಗೆ ವ್ಯವಸ್ಥೆ: ದಸರಾ ನೋಡಲು ಪ್ರವಾಸಿಗರಿಗೆ ಮೈಸೂರಿನ ವಿವಿಧ ಸ್ಥಳಗಳಿಗೆ ತೆರಳಲು ಅನುಕೂಲವಾಗುವಂತೆ ಹಾಪ್‌ ಆನ್‌ ಹಾಪ್‌ ಆಫ್‌ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗುವುದು. ಈ ಯೋಜನೆಯಡಿ ನಗರದ 16 ಪ್ರೇಕ್ಷಣೀಯ ಸ್ಥಳಗಳಿಗೆ ತಲುಪಲು ಪ್ರತಿ 15 ನಿಮಿಷಕ್ಕೊಂದು ಬಸ್‌ ಸೌಕರ್ಯ ಕಲ್ಪಿಸಲಾಗುವುದು. ಪ್ರವಾಸಿಗರ ಪ್ರತಿಕ್ರಿಯೆ ಆಧರಿಸಿ ಈ ವ್ಯವಸ್ಥೆಯನ್ನು ದಸರಾ ನಂತರವೂ ಮುಂದುವರಿಸಲು ಕ್ರಮ ಕೈಗೊಳ್ಳಲಾ ಗುವುದು ಎಂದು ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸ ಪ್ರಸಾದ್‌ ಮಾತನಾಡಿ, ನಾಡಹಬ್ಬ ದಸರಾ ಮಹೋತ್ಸವಕ್ಕೆ ಮೈಸೂರಿಗೆ ಆಗಮಿಸಲು ಜನರಿಗೆ ಅನುಕೂಲ ಕಲ್ಪಿಸಲು ಕೆಎಸ್‌ಆರ್‌ಟಿಸಿ ನಾಡಿನ ವಿವಿಧೆಡೆಗಳಿಂದ ವಿಶೇಷ ಮತ್ತು ಹೆಚ್ಚುವರಿ ಬಸ್‌ ಸೌಲಭ್ಯ ಕಲ್ಪಿಸುತ್ತಿದೆ ಎಂದು ಹೇಳಿದರು.

ರಸ್ತೆ ಸಾರಿಗೆ ವ್ಯವಸ್ಥೆಯಲ್ಲಿ ಕೆಎಸ್‌ಆರ್‌ಟಿಸಿ ರಾಷ್ಟ್ರಮಟ್ಟದಲ್ಲಿ ಅತ್ಯತ್ತಮ ಸ್ಥಾನ ಗಳಿಸಿದೆ. ಖಾಸಗಿ ಸಂಸ್ಥೆ ಬಸ್ಸುಗಳ ದರ ಸಮರವನ್ನು ಸಮರ್ಥ ವಾಗಿ ಎದುರಿಸುತ್ತಾ ಲಾಭದಲ್ಲಿ ನಡೆಯುತ್ತಿದೆ ಎಂದರು.

ಶಾಸಕ ತನ್ವೀರ್ ಸೇಟ್‌ ಮಾತನಾಡಿ, ಕೆಎಸ್‌ಆರ್‌ಟಿಸಿಯಲ್ಲಿ ಅನುಕಂಪ ಆಧಾರದ ಉದ್ಯೋಗ ನೀಡುವಾಗ ವಿಳಂಬನೀತಿ ಧೋರಣೆ ಅನುಸರಿಸಲಾ ಗುತ್ತಿದೆ. ಸಚಿವರು ಇದನ್ನು ಸರಿಪಡಿಸಲು ಗಮನ ಹರಿಸಬೇಕು ಎಂದು ಮನವಿ ಮಾಡಿದರು.

ಕೆಎಸ್‌ಆರ್‌ಟಿ  ಆಡಳಿತ ಮತ್ತು ಸಿಬ್ಬಂದಿ ವಿಭಾಗದ ವ್ಯವಸ್ಥಾಪಕ ನಿರ್ದೇಶಕ ಎನ್‌. ಮಂಜುನಾಥ್‌ಪ್ರಸಾದ್‌ ಮಾತನಾಡಿ, ಈ ಬಸ್‌ ಘಟಕ ಆರಂಭಿಸಿದ್ದರಿಂದ ಕೂರ್ಗಳ್ಳಿ, ಇಲವಾಲ, ದಾಸನ ಕೊಪ್ಪಲು, ಬಸವನಪುರ, ಕೆಎಚ್‌ಬಿ ಕಾಲೊನಿ ಇತ್ಯಾದಿ ಬಡವಾಣೆಗಳಿಗೆ ತಲುಪುಲು ಅನುಕೂಲವಾಗಿದೆ ಎಂದು ತಿಳಿಸಿದರು.

ಶಾಸಕ ಜಿ.ಟಿ. ದೇವೇಗೌಡ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ವಾಸು, ಸೋಮಶೇಖರ್‌, ಮೇಯರ್‌ ಎನ್‌.ಎಂ. ರಾಜೇಶ್ವರಿ, ಉಪಮೇಯರ್‌ ಶೈಲೇಂದ್ರ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಂ. ಮಹಾದೇವು, ಹಿನಕಲ್‌ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್‌.ಪಿ. ರಾಕೇಶ್‌ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.