ADVERTISEMENT

ಮೈಸೂರು ವಿವಿ: ಸಿಂಡಿಕೇಟ್ ಸದಸ್ಯತ್ವ ವಜಾ ಕೋರಿ ಅರ್ಜಿ

​ಪ್ರಜಾವಾಣಿ ವಾರ್ತೆ
Published 10 ಜನವರಿ 2012, 9:50 IST
Last Updated 10 ಜನವರಿ 2012, 9:50 IST

ಬೆಂಗಳೂರು: ಮೈಸೂರು ವಿಶ್ವವಿದ್ಯಾಲಯದ ಸಿಂಡಿಕೇಟ್‌ಗೆ ಪ್ರೊ. ಸುಮಿತ್ರಾ ಬಾಯಿ ಹಾಗೂ ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಅವರನ್ನು ನಾಮನಿರ್ದೇಶಿತ ಸದಸ್ಯರನ್ನಾಗಿ ನೇಮಕ ಮಾಡಿರುವ ಆದೇಶದ ರದ್ದತಿಗೆ ಕೋರಿ   ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.

ಇವರಿಬ್ಬರು ಅವ್ಯವಹಾರಗಳಲ್ಲಿ ಭಾಗಿಯಾಗಿದ್ದಾರೆ ಎಂದು ದೂರಿ ಕೆ.ಪ್ರಸನ್ನ ಎನ್ನುವವರು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ದೂರಿದ್ದಾರೆ. ಈ ಕುರಿತು ಅರ್ಜಿದಾರರಿಂದಲೇ ಹೆಚ್ಚಿನ ಮಾಹಿತಿ ಬಯಸಿದ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಹಾಗೂ ನ್ಯಾಯಮೂರ್ತಿ ಬಿ.ವಿ.ನಾಗರತ್ನಾ ಅವರನ್ನು ಒಳಗೊಂಡ ವಿಭಾಗೀಯ ಪೀಠ, ಅವರ ಖುದ್ದು ಹಾಜರಿಗೆ ಆದೇಶಿಸಿದೆ.

ಅರ್ಜಿದಾರರ ಆರೋಪವೇನು?: `ಸುಮಿತ್ರಾ ಅವರು ಮೈಸೂರಿನ ಯುವರಾಜ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದ ವೇಳೆ ಹಣಕಾಸಿನ ವಿಚಾರವಾಗಿ ಅವ್ಯವಹಾರ ನಡೆಸಿರುವ ಆರೋಪ ಹೊತ್ತಿದ್ದಾರೆ. ಅದೇ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿದ್ದ ವೇಳೆ ಲೆಕ್ಕಪರಿಶೋಧನಾ ಇಲಾಖೆಯು ಅವರಿಂದ 15 ಲಕ್ಷ ರೂಪಾಯಿಗಳನ್ನು ವಸೂಲಿ ಮಾಡುವಂತೆ ಆದೇಶಿಸಿತ್ತು. ಇವರ ವಿರುದ್ಧ ಇನ್ನೂ ತನಿಖೆ ಬಾಕಿ ಇದೆ~ ಎನ್ನುವುದು ಅರ್ಜಿದಾರರ ಆರೋಪ.

`ಇವರು ಆ ಕಾಲೇಜಿನ ಪ್ರವೇಶ ಸಮಿತಿಯ ಸದಸ್ಯರೂ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಈ ಸಮಿತಿಯ ಸದಸ್ಯರೊಬ್ಬರ ಪುತ್ರರಿಗೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ಕಾಲೇಜಿಗೆ ಪ್ರವೇಶ ಪಡೆಯಲು ಅಗತ್ಯ ಇರುವ ಅಂಕಗಳನ್ನು ಶೇ 55ರಿಂದ 45ಕ್ಕೆ ಇಳಿಸಿದರು. ಅದೇ ರೀತಿ ಮರಿತಿಬ್ಬೇಗೌಡ ಅವರು ಅಕ್ರಮದಲ್ಲಿ ಭಾಗಿಯಾಗಿದ್ದಾರೆ~ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಇವರನ್ನು ಸದಸ್ಯರನ್ನಾಗಿ ನೇಮಕ ಮಾಡಿ 2011ರ ಫೆಬ್ರುವರಿ 4ರಂದು ಕುಲಾಧಿಪತಿಗಳೂ ಆಗಿರುವ ರಾಜ್ಯಪಾಲರು ಹೊರಡಿಸಿರುವ ಆದೇಶದ ರದ್ದತಿಗೆ ಅರ್ಜಿದಾರರು ಕೋರಿದ್ದಾರೆ. ವಿಚಾರಣೆ ಮುಂದೂಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.