ADVERTISEMENT

ರವಿಶಂಕರ ಗುರೂಜಿ ವಿರುದ್ಧ ಪ್ರತಿಭಟಿಸಿ: ವಿದ್ಯಾರ್ಥಿಗಳಿಗೆ ದೇವನೂರ ಕರೆ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2012, 6:35 IST
Last Updated 26 ಮಾರ್ಚ್ 2012, 6:35 IST

ಮೈಸೂರು: `ಸರ್ಕಾರಿ ಶಾಲೆಗಳಲ್ಲಿ ನಕ್ಸಲರು ತಯಾರಾಗುತ್ತಿದ್ದಾರೆ. ಆದ್ದರಿಂದ ಆ ಶಾಲೆಗಳನ್ನು ಮುಚ್ಚಿ ಖಾಸಗಿಯವರಿಗೆ ನೀಡಬೇಕು ಎಂದು ಆರ್ಟ್ ಆಫ್ ಲಿವಿಂಗ್‌ನ ರವಿಶಂಕರ ಗುರೂಜಿ ಹೇಳಿಕೆ ವಿರುದ್ಧ ವಿದ್ಯಾರ್ಥಿ ಸಮುದಾಯ ಪ್ರತಿಭಟನೆ ನಡೆಸಬೇಕು~ ಎಂದು ಸಾಹಿತಿ ದೇವನೂರ ಮಹಾದೇವ ಕರೆ ನೀಡಿದರು.

ಭಾನುವಾರ ಮಹಾರಾಣಿ ವಿಜ್ಞಾನ ಕಾಲೇಜಿನ ಲಲಿತಕಲಾ ಸಂಘದ ಕಲಾರಸಗ್ರಹಣ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, `ಈ ಹೇಳಿಕೆಯ ಹಿಂದೆ ಭಾರತೀಯ ಮಕ್ಕಳನ್ನು ವಿದ್ಯೆಯಿಂದ ವಂಚಿತರನ್ನಾಗಿ ಮಾಡುವ ಹುನ್ನಾರವಿದೆ~ ಎಂದು ಹೇಳಿದರು.

`ಖಾಸಗಿ ಮತ್ತು ಕಾರ್ಪೋರೆಟ್ ಸಂಸ್ಕೃತಿಯಿಂದ ದೇಶದಲ್ಲಿ ಬಡವ ಮತ್ತು ಶ್ರೀಮಂತರ ನಡುವೆ ವ್ಯತ್ಯಾಸ ಹೆಚ್ಚುತ್ತದೆ. ಆರ್ಥಿಕ ಮತ್ತು ಸಾಮಾಜಿಕ ತಾರತಮ್ಯಗಳಿಂದ ನಕ್ಸಲರು ಹುಟ್ಟುತ್ತಾರೆ ಎನ್ನುವುದು ಅವರಿಗೆ ಗೊತ್ತಿಲ್ಲವೆ. ಒಂದು ಕಡೆ ಸರ್ಕಾರ ಕನ್ನಡ ಪ್ರಾಥಮಿಕ ಶಾಲೆಗಳನ್ನು ಮುಚ್ಚಲು ಹೊರಟಿದೆ, ಇನ್ನೊಂದೆಡೆ ಧರ್ಮಗುರು ಎನಿಸಿಕೊಂಡವರು ಇಂತಹ ಹೇಳಿಕೆ ನೀಡುತ್ತಿರುವುದು ಖಂಡನೀಯ~ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಜ್ಞಾನ ವಿದ್ಯಾರ್ಥಿಗಳಿಗೆ ಮೆಚ್ಚುಗೆ:
`ಮಹಾರಾಣಿ ವಿಜ್ಞಾನ ಕಾಲೇಜಿನ ವಿದ್ಯಾರ್ಥಿನಿಯರು ಲಲಿತ ಕಲಾ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವುದು ಶ್ಲಾಘನೀಯ. ಬರೀ ಓದಿನಲ್ಲಿಯೇ ಕಳೆದುಹೋಗದೇ ವ್ಯಕ್ತಿತ್ವಕ್ಕೆ ಸಾಂಸ್ಕೃತಿಕ ಮೆರಗು ನೀಡುವ ಈ ಪ್ರಯತ್ನ ಉತ್ತಮವಾದದ್ದು. ಕಲೆ ಕಲಾ ಕಾಲೇಜುಗಳಿಗೆ ಮಾತ್ರ ಸೀಮಿತವಾಗಬಾರದು. ವಿಜ್ಞಾನ ಕಾಲೇಜಿನಲ್ಲಿಯೂ ಇರಬೇಕು. ಕಳೆದ ಹತ್ತು ವರ್ಷಗಳಿಂದ ಇಂತಹ ಒಂದು ಪ್ರಯೋಗ ಇಲ್ಲಿ ನಡೆದಿರುವುದು ಉಳಿದೆಲ್ಲ ಕಾಲೇಜುಗಳಿಗೂ ಅನುಕರಣೀಯ~ ಎಂದು ದೇವನೂರ ಮೆಚ್ಚುಗೆ ವ್ಯಕ್ತಪಡಿಸಿದರು.

`ನೀವು ಸದ್ಯ ಹುಟ್ಟಿರುವ ಮನೆ, ಜಾತಿ, ಧರ್ಮಗಳನ್ನು ಹೊರತುಪಡಿಸಿ ಉಳಿದ ಧರ್ಮ, ಜಾತಿ, ಸಮುದಾಯಗಳಲ್ಲಿ ಜನಿಸಿದಂತೆ ಕಲ್ಪಿಸಿಕೊಳ್ಳಲು ಪ್ರಾಮಾಣಿಕವಾಗಿ ಪ್ರಯತ್ನಿಸಿ. ಇದರಿಂದ ಪರಧರ್ಮ ಮತ್ತು ವಿಭಿನ್ನ ಪರಿಸ್ಥಿತಿಗಳಲ್ಲಿ ಇರುವ ಜನರ ಜೀವನ ಅರ್ಥವಾಗುತ್ತದೆ. ಜೊತೆಗೆ ಕಲ್ಪನಾಶಕ್ತಿ ನಿಮ್ಮಲ್ಲಿ ಬೆಳೆಯುತ್ತದೆ. ಇದರಿಂದ ನಿಮ್ಮಲ್ಲಿರುವ ಕಲಾವಿದ, ಸಂಗೀತಗಾರ, ರಂಗಕರ್ಮಿ ಮತ್ತಿತರ ಪ್ರತಿಭೆಗಳು ಹೊರಹೊಮ್ಮುತ್ತವೆ~ ಎಂದು ಸಲಹೆ ನೀಡಿದರು. ತದನಂತರ `ಕುಸುಮಬಾಲೆ~ ಕೃತಿಯ ಆಯ್ದ ಸಾಲುಗಳನ್ನು ಓದಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಪ್ರೊ.ಎಚ್.ಬಿ.ಮಲ್ಲಿಕಾರ್ಜುನಸ್ವಾಮಿ, `ಕಲೆ ಮತ್ತು ಕ್ರೀಡೆಯಲ್ಲಿ ಜಾತಿ, ಧರ್ಮ ತಾರತಮ್ಯಗಳಿಗೆ ಅವಕಾಶವೇ ಇಲ್ಲ. ಕಲೆಗೆ ಯಾವುದೇ ಸೀಮಾರೇಖೆ ಇಲ್ಲ. ವಿಜ್ಞಾನ ಮನೋಭಾವನೆಯೊಂದಿಗೆ ಕಲಾವಂತಿಕೆಯೂ ಸೇರಿದರೆ ಪರಿಪೂರ್ಣ ವ್ಯಕ್ತಿತ್ವ ನಿರ್ಮಾಣ ಸಾಧ್ಯ. ರವಿಶಂಕರ ಗುರೂಜಿಯವರು ನೀಡಿರುವ ಹೇಳಿಕೆ ಖಂಡನೀಯ~ ಎಂದು ಹೇಳಿದರು.

ಈ ಸಂದರ್ಭದಲ್ಲಿ ವಿಚಾರವಾದಿ ಡಾ.ರಾಜೇಂದ್ರ ಚೆನ್ನಿ, ಹಿರಿಯ ನೃತ್ಯಕಲಾವಿದೆ ವೈಜಯಂತಿ ಕಾಶಿ ಮತ್ತಿತರರು ಹಾಜರಿದ್ದರು. ರಂಗಕರ್ಮಿ ಶ್ರೀಕಂಠ ಗುಂಡಪ್ಪ ರಂಗಸಂದೇಶ ನೀಡಿದರು. ಇದೇ ಸಂದರ್ಭದಲ್ಲಿ ಚಿತ್ರಕಲಾ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.

ಕೂಚಿಪುಡಿ ನೃತ್ಯ ಕಲಾವಿದೆ ವೈಜಯಂತಿ ಕಾಶಿ ಕೂಚಿಪುಡಿ ಕಲೆಯ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದರು. ಲಲಿತ ಕಲಾ ಸಂಘದ ವಿದ್ಯಾರ್ಥಿಗಳು ಸಂಗ್ರಹಿಸಿದ್ದ ಉತ್ತಮ ಪೋಟೊಗಳ ಪ್ರದರ್ಶನ, ಪ್ರೊ.ಲೀಲಾ ಅಪ್ಪಾಜಿ ಅವರು ಸಂಗ್ರಹಿಸಿರುವ ಕನ್ನಡ ಕವಿಗಳ ಚಿತ್ರ ಪ್ರದರ್ಶನವನ್ನು ವಿದ್ಯಾರ್ಥಿಗಳು ವೀಕ್ಷಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.