ADVERTISEMENT

ರಸ್ತೆಗಳಲ್ಲಿ ಕಸದ ರಾಶಿ, ಪ್ಲಾಸ್ಟಿಕ್‌ ತ್ಯಾಜ್ಯ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2017, 5:23 IST
Last Updated 28 ನವೆಂಬರ್ 2017, 5:23 IST
ಮೈಸೂರು ವಿ.ವಿ ಕ್ರಾಫರ್ಡ್‌ ಭವನದ ಎದುರು ಕಸದ ರಾಶಿ
ಮೈಸೂರು ವಿ.ವಿ ಕ್ರಾಫರ್ಡ್‌ ಭವನದ ಎದುರು ಕಸದ ರಾಶಿ   

ಮೈಸೂರು: ಸ್ವಚ್ಛನಗರಿಯಲ್ಲಿ ಅಲ್ಲಲ್ಲಿ ಕಸದ ರಾಶಿ. ವಿಶ್ವವಿದ್ಯಾನಿಲಯದ ಕ್ರಾಫರ್ಡ್‌ ಭವನದ ಎದುರೇ ಗಲೀಜು. ಅಲ್ಲಲ್ಲಿ ಬಿದ್ದಿದ್ದ ಪ್ಲಾಸ್ಟಿಕ್‌, ನೀರಿನ ಬಾಟಲಿ, ಕಸ, ಕಡ್ಡಿ... ವೈಭವದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮುಗಿಸಿ ಆ ನೆನಪುಗಳ ಮೆರವಣಿಗೆಯಲ್ಲಿರುವ ಅರಮನೆಗಳ ನಗರಿಯ ಕೆಲವೆಡೆ ಸೋಮವಾರ ಕಂಡು ಬಂದ ಸ್ಥಿತಿ ಇದು.

ಮೂರು ದಿನಗಳ ಸಮ್ಮೇಳನಕ್ಕೆ ಸುಮಾರು 2 ಲಕ್ಷ ಜನ ಸಾಕ್ಷಿಯಾದರು. ಈ ಅವಧಿಯಲ್ಲಿ ಮಹಾರಾಜ ಕಾಲೇಜು ಮೈದಾನ, ವಿಶ್ವವಿದ್ಯಾನಿಲಯ ಸ್ಪೋರ್ಟ್ಸ್‌ ‍ಪೆವಿಲಿಯನ್‌, ಕ್ರಾಫರ್ಡ್‌ ಭವನದ ಸುತ್ತಮುತ್ತ ನೂರಾರು ವ್ಯಾಪಾರಿಗಳು ರಸ್ತೆ ಬದಿ ತಿಂಡಿತಿನಿಸು, ಬಟ್ಟೆ ಹಾಗೂ ಇತರ ವಸ್ತುಗಳ ಮಾರಾಟದಲ್ಲಿ ತೊಡಗಿದ್ದರು. ಇದರಿಂದ ಕಸದ ರಾಶಿ ನಿರ್ಮಾಣವಾಗಿದೆ. ಇದನ್ನು ಪಾಲಿಕೆ ಸಿಬ್ಬಂದಿ ಸ್ವಚ್ಛಗೊಳಿಸುವುದರಲ್ಲಿ ತೊಡಗಿದ್ದಾರೆ.

ಸಮ್ಮೇಳನಕ್ಕೆ ನಿರ್ಮಿಸಿದ್ದ ಪೆಂಡಾಲ್‌, ಭೋಜನಕ್ಕಾಗಿ ಹಾಕಲಾಗಿದ್ದ ಟೆಂಟ್‌, ಕುರ್ಚಿಗಳನ್ನು ಕಾರ್ಮಿಕರು ಲಾರಿಯಲ್ಲಿ ತುಂಬಿಸಿ ಸಾಗಿಸಿದರು. ಪುಸ್ತಕದ ಮಳಿಗೆಗಳನ್ನು ಬಿಚ್ಚುವುದರಲ್ಲಿ ನಿರತರಾಗಿದ್ದರು. ಫ್ಲೆಕ್ಸ್‌, ಬ್ಯಾನರ್‌, ಕಟೌಟ್‌ಗಳನ್ನು ತೆರವುಗೊಳಿಸಿದರು. ಕಂಬ ನಿಲ್ಲಿಸಲು ಅಲ್ಲಲ್ಲಿ ಗುಂಡಿ ತೋಡಿದ್ದರಿಂದ ಕ್ರೀಡಾಂಗಣಕ್ಕೆ ತುಸು ಧಕ್ಕೆ ಉಂಟಾಗಿದೆ.‌

ADVERTISEMENT

ಪ್ರವಾಸಿ ತಾಣಗಳಿಗೆ ಭೇಟಿ: ದೂರದೂರುಗಳಿಂದ ಸಮ್ಮೇಳನಕ್ಕೆ ಬಂದಿದ್ದ ಸಾಹಿತ್ಯಾಭಿಮಾನಿಗಳು ಸೋಮವಾರ ಕೂಡ ಪ್ರವಾಸದ ಮೊರೆ ಹೋದರು. ಅರಮನೆ, ಮೃಗಾಲಯ, ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.