ADVERTISEMENT

ವಿದ್ಯುತ್ ದರ ಪರಿಷ್ಕರಣಕ್ಕೆ ವ್ಯಾಪಕ ವಿರೋಧ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2011, 10:00 IST
Last Updated 15 ಸೆಪ್ಟೆಂಬರ್ 2011, 10:00 IST

ಮೈಸೂರು: ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗವು ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಯೋಜಿಸಿದ್ದ  2011-12ರ ಸಾಲಿನ ವಿದ್ಯುತ್ ದರ ಪರಿಷ್ಕರಣೆಯ ಅರ್ಜಿ ಕುರಿತು ಸಾರ್ವಜನಿಕ ವಿಚಾರಣೆಯ ಭಾಗವಹಿಸಿದ್ದ ಸಾರ್ವಜನಿಕರು, ಕೈಗಾರಿಕೋದ್ಯಮಿಗಳು, ರೈತರು ದರ ಹೆಚ್ಚಳ ಬೇಡ ಎಂದು ಒತ್ತಾಯಿಸಿದರು.

ಆಯೋಗದ ಅಧ್ಯಕ್ಷ ಶ್ರೀನಿವಾಸಮೂರ್ತಿ, ಸದಸ್ಯರಾದ ವಿಶ್ವನಾಥ ಹಿರೇಮಠ ಮತ್ತು ಕೆ. ಶ್ರೀನಿವಾಸರಾವ್ ಅವರಿಗೆ 18 ತಕರಾರು ಅರ್ಜಿಗಳನ್ನು ಸಲ್ಲಿಸಲಾಗಿತ್ತು. ದರ ಪರಿಷ್ಕರಣೆ ಬೇಡವೆಂದು ಬಹುತೇಕರ ಅಭಿಪ್ರಾಯವಾಗಿತ್ತು.

ಕಾಫಿ ಬೆಳೆಗಾರರಿಗೆ ಉಚಿತ ವಿದ್ಯುತ್
“ಕಾಫಿ ಬೆಳೆಗಾರರೆಲ್ಲರೂ ಶ್ರೀಮಂತರು ಎನ್ನುವ ತಪ್ಪು ಕಲ್ಪನೆ ಇದೆ. ಇದು ಸರಿಯಲ್ಲ. ಇವರಲ್ಲಿಯೂ ಸಣ್ಣ ಮತ್ತು ದೊಡ್ಡ ಹಿಡುವಳಿದಾರರು ಇದ್ದಾರೆ. ಆದ್ದರಿಂದ ಸಣ್ಣ ಬೆಳೆಗಾರರಿಗೆ ವಿದ್ಯುತ್ ಅನ್ನು ಉಚಿತವಾಗಿ ನೀಡಬೇಕು. ಅಡಿಕೆ, ತೆಂಗು ಮತ್ತಿತರ ತೋಟಗಾರಿಕೆ ಬೆಳೆಗಾರರಿಗೆ ಸಿಗುತ್ತಿರುವ ಸೌಲಭ್ಯ ನಮಗೇಕೆ ಇಲ್ಲ. ಈ ತಾರತಮ್ಯ ಸಲ್ಲದು~ ಎಂದು ದಕ್ಷಿಣ ಕೊಡಗಿನ ಸಿದ್ಧಾಪುರ ಭಾಗದ ಸಿ.ಎ. ಸುಬ್ಬಯ್ಯ ಹೇಳಿದರು.

ಸರ್ಕಾರಿ ಸಂಸ್ಥೆಗಳ ಬಾಕಿ

`ಮನೆಗಳು, ಖಾಸಗಿ ಸಂಸ್ಥೆಗಳು ವಿದ್ಯುತ್ ಬಿಲ್ ಪಾವತಿಸದಿದ್ದರೆ ಸಂಪರ್ಕ ಕಡಿತಗೊಳಿಸಲಾಗುತ್ತದೆ. ಆದರೆ ಸರ್ಕಾರದ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿಗಳಿಂದಲೇ ಹಣ ಬಾಕಿಯಿದ್ದು ಅವರ ಬಗ್ಗೆ ಏಕೆ ಮೃದು ಧೋರಣೆ ತೋರಲಾಗುತ್ತಿದೆ~ ಎಂದು ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ (ಕಾಸಿಯಾ) ಸುರೇಶಕುಮಾರ್ ಜೈನ್ ಪ್ರಶ್ನಿಸಿದರು.

`ಸರ್ಕಾರಿ ಉತ್ಪಾದನಾ ಸಂಸ್ಥೆಗಳಿಂದ ಕಡಿಮೆ ದರದಲ್ಲಿ ವಿದ್ಯುತ್ ಲಭ್ಯವಿದ್ದರೂ, ಖಾಸಗಿ ಸಂಸ್ಥೆಗಳಿಂದ ಹೆಚ್ಚಿನ ದರಕ್ಕೆ ಖರೀದಿಸುತ್ತಿರುವುದು ಏಕೆ~ ಎಂದು ಪ್ರಶ್ನಿಸಿದ ಅವರು, `ಪ್ರತಿ ತಿಂಗಳೂ ನಡೆಯುತ್ತಿದ್ದ ವಿದ್ಯುತ್ ಅದಾಲತ್ ನಿಂತುಹೋಗಿದೆ. ಕನ್ನಡದಲ್ಲಿ ಅರ್ಜಿಯನ್ನು ಏಕೆ ರೂಪಿಸುತ್ತಿಲ್ಲ. ಸಾಮಾನ್ಯ ಜನರು, ಗ್ರಾಮೀಣ ಜನರಿಗೂ ತಿಳಿಯುಂತಾಗಬೇಕು. ಪ್ರತಿವರ್ಷದ ಲೆಕ್ಕಪತ್ರದ ಬ್ಯಾಲೆನ್ಸ್ ಶೀಟ್ ನೀಡಬೇಕು~ ಎಂದು ಆಗ್ರಹಿಸಿದರು.

`ಗ್ರಾಹಕರಿಗೆ ಮಾಹಿತಿ ನೀಡಲು ಮೊಬೈಲ್‌ನ ಚುಟುಕು ಸಂದೇಶಗಳನ್ನು ಏಕೆ ಉಪಯೋಗಿಸಿಕೊಳ್ಳಬಾರದು. ಪವರ್ ಕಟ್, ಲೋಡ್‌ಶೆಡ್ಡಿಂಗ್ ಬಗ್ಗೆ ಗ್ರಾಹಕ ಪರಿಷತ್ ಮತ್ತು ಎಲ್ಲ ಕೈಗಾರಿಕೆಗಳಿಗೆ ಮೊದಲೇ ತಿಳಿಸಬೇಕು. ಈಗಾಗಲೇ ನಷ್ಟದಿಂದ ಬಳಲುತ್ತಿರುವ ಕೈಗಾರಿಕೆಗಳಿಗೆ ದರ ಪರಿಷ್ಕರಣೆಯಿಂದ ಮತ್ತಷ್ಟು ಹೊರೆಯಾಗುತ್ತದೆ. ಮೈಸೂರಿನಲ್ಲಿ 50 ಸಾವಿರ ಕೈಗಾರಿಕೆಗಳಲ್ಲಿ ಶೇ 40ರಷ್ಟು ಮಾತ್ರ ಉತ್ತಮವಾಗಿವೆ. ಶೇ 30ರಷ್ಟು ರೋಗಗ್ರಸ್ತವಾಗಿವೆ ಮತ್ತು ಉಳಿದ 30ರಷ್ಟು ಕೈಗಾರಿಕೆಗಳು ಮುಚ್ಚಿಹೋಗಿವೆ~ ಎಂದು ಹೇಳಿದರು.

ಗ್ರಾಹಕರ ಪರಿಷತ್‌ನ ಮಹೇಶ್ ಅವರು, `ಕಡಿಮೆ ಬಳಕೆಗೆ ಕಡಿಮೆ ದರ ಮತ್ತು ಹೆಚ್ಚು ಬಳಕೆಗೆ ಹೆಚ್ಚು ದರ ಎಂಬ ನಿಯಮವನ್ನು ರೂಪಿಸಿ ಜಾರಿಗೊಳಿಸಬೇಕು. ಇದರಿಂದ ಯಾರಿಗೂ ಅನ್ಯಾಯವಾಗುವುದಿಲ್ಲ~ ಎಂದು ಸಲಹೆ ನೀಡಿದರು.

ವಿಲೀನಗೊಳಿಸಿ:`ಕೆಇಬಿಯನ್ನು ಮೂರು ವಿಭಾಗಗಳಲ್ಲ ವಿಭಜಿಸಿದ್ದು ಅಲ್ಲದೇ, ವಿದ್ಯುತ್ ಸರಬರಾಜಿಗೆ ಐದು ಕಂಪೆನಿಗಳನ್ನು ಮಾಡಿರುವುದು ಇಲಾಖೆಯ ಮೇಲೆ ಆರ್ಥಿಕ ಹೊರೆ ಹೆಚ್ಚಿಸಿದೆ. ನಿರ್ವಹಣೆ ಮತ್ತು ಆಡಳಿತಾತ್ಮಕ ವೆಚ್ಚಗಳು ವಿಪರೀತವಾಗಿವೆ. ಇವುಗಳನ್ನು ತಗ್ಗಿಸಲು ಸಂಸ್ಥೆಯ ಮರುವಿನ್ಯಾಸ ಮತ್ತು ವಿಲೀನಗೊಳಿಸುವ ಪ್ರಕ್ರಿಯೆಗೆ ಚಾಲನೆ ನೀಡಬೇಕು~ ಎಂದು ಮೈಸೂರು ಕೈಗಾರಿಕೆ ಸಂಘದ ರವೀಂದ್ರ ಪ್ರಭು ಸಲಹೆ ನೀಡಿದರು.

ಸಭೆಯಲ್ಲಿ ಭಾಗವಹಿಸಿದ್ದ ಏಕೈಕ ಮಹಿಳಾ ಪ್ರತಿನಿಧಿ ಸುನೀತಾ ರಂಗನಾಥ, `ವಿದ್ಯುತ್ ಕಳವು ಪ್ರಕರಣಗಳನ್ನು ತಡೆಯಿರಿ. ಅಲ್ಲದೇ ಹಲವಾರು ಆಸ್ಪತ್ರೆಗಳಲ್ಲಿ ಹೈಟೆಕ್ ಮತ್ತು ಪಂಚತಾರಾ ಚಿಕಿತ್ಸೆ ನೀಡಲಾಗುತ್ತಿದ್ದು. ಇಂತಹ ಆಸ್ಪತ್ರೆಗಳ ಮೇಲೆ ನಿಗಾವಹಿಸಿ, ಹೆಚ್ಚುವರಿ ಶುಲ್ಕ ವಿಧಿಸಬೇಕು. ಸಾಮಾನ್ಯ ಗ್ರಾಹಕನ ಮೇಲೆ ಹೆಚ್ಚಿನ ಹೊರೆ ಬೇಡ~ ಎಂದು ಆಗ್ರಹಿಸಿದರು.

ಬೀದಿದೀಪಗಳ ಸೂಕ್ತ ನಿರ್ವಹಣೆಗೆ ಸೂಚನೆ
`ನಗರದಲ್ಲಿ ಬೀದಿದೀಪದ ಕಂಬಗಳನ್ನು ಹಾಕಲು ನಿರ್ದಿಷ್ಟವಾದ ಮಾನದಂಡಗಳಿವೆ. ಅವುಗಳನ್ನು ಪಾಲಿಸದೇ ಮಹಾನಗರ ಪಾಲಿಕೆಯ ಪ್ರತಿನಿಧಿಗಳು ತಮಗೆ ತಿಳಿದಂತೆ ಹಾಕಿಸುತ್ತಿದ್ದಾರೆ. ಈ ಬಗ್ಗೆ  ಸೆಸ್ಕ್ ನಿಗಾ ವಹಿಸಬೇಕು. ಹಗಲು ಹೊತ್ತಿನಲ್ಲಿಯೇ ದೀಪಗಳು ಉರಿದು ವಿದ್ಯುತ್ ಪೋಲಾಗುವುದನ್ನು ತಪ್ಪಿಸಲು ಟೈಮರ್ ಸ್ವಿಚ್‌ಗಳನ್ನು ಅಳವಡಿಸಬೇಕು~ ಎಂದು ಕೆಇಆರ್‌ಸಿ ಅಧ್ಯಕ್ಷ ಶ್ರೀನಿವಾಸಮೂರ್ತಿಯವರು ಕ್ಯಾಪ್ಟನ್ ಹುಸೇನ್ ಅವರ ಅಹವಾಲನ್ನು ಅವಲೋಕಿಸಿದ ನಂತರ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.