ತಿ.ನರಸೀಪುರ: ತ್ರಿವೇಣಿ ಸಂಗಮ ಕ್ಷೇತ್ರವಾದ ತಿರಮಕೂಡಲು ನರಸೀಪುರದ ಪ್ರಸಿದ್ಧ ಗುಂಜಾ ನರಸಿಂಹಸ್ವಾಮಿ ಬ್ರಹ್ಮರಥೋತ್ಸವು ಶುಕ್ರವಾರ ಸಡಗರದಿಂದ ನೆರವೇರಿತು.
ಶುಕ್ರವಾರ ಮಧ್ಯಾಹ್ನ ತಹಶೀಲ್ದಾರ್ ಟಿ. ಜವರೇಗೌಡ ಉತ್ಸವಕ್ಕೆ ಚಾಲನೆ ನೀಡಿದರು. ನಂತರ ಆರಂಭವಾದ ರಥೋತ್ಸವ ದೇವಾಲಯದ ಮುಂಭಾಗದಿಂದ ವಿಶ್ವಕರ್ಮ ರಸ್ತೆ, ಪ್ರಾಥಮಿಕ ಶಾಲಾ ರಸ್ತೆಯ ಮೂಲಕ ತೇರಿನ ಬೀದಿಗೆ ಆಗಮಿಸಿತು. ಮಧ್ಯಾಹ್ನ 3ಗಂಟೆಗೆ ವೇಳೆಗೆ ಸ್ವಸ್ಥಾನ ತಲುಪಿತು.
ಇದಕ್ಕೂ ಮುನ್ನ ಬೆಳಿಗ್ಗೆ ದೇವಾಲಯದಲ್ಲಿ ಗುಂಜಾನರಸಿಂಹಸ್ವಾಮಿಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಲಾಯಿತು. 11ಗಂಟೆ ವೇಳೆಗೆ ದೇವಾಲಯದ ಉತ್ಸವ ಮೂರ್ತಿಯನ್ನು ಪಟ್ಟಣದ ರಥ ಸಾಗುವ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಲಾಯಿತು. ಮೆರವಣಿಗೆ ವೇಳೆ ಭಕ್ತರು ಆಯೋಜಿಸಿದ್ದ ವಿವಿಧ ಸ್ಥಳಗಳಲ್ಲಿ ಮಂಟಪ ಉತ್ಸವ ನಡೆಸಿ ಜನರು ಭಕ್ತ ಭಾವಗಳೊಂದಿಗೆ ದೇವರಿಗೆ ಪೂಜೆ ಸಲ್ಲಿಸಿದರು.
ಪಾನಕ ವಿತರಣೆ: ಪಟ್ಟಣದ ವಿವಿಧ ಸಂಘಟನೆಗಳು, ವ್ಯಾಪಾರಿಗಳು, ಪಟ್ಟಣ ಪಂಚಾಯಿತಿ ಹಾಗೂ ಸಹಕಾರಿ ಬ್ಯಾಂಕ್ ವತಿಯಿಂದ ಪಟ್ಟಣದ ವಿವಿಧ ರಸ್ತೆಗಳಲ್ಲಿ ರಥೋತ್ಸವಕ್ಕೆ ಬಂದ ಭಕ್ತರಿಗೆ ನೀರು, ಮಜ್ಜಿಗೆ, ಪಾನಕ, ಕೋಸಂಬರಿ, ಪಂಚಾಮೃತ, ಸಕ್ಕರೆ ಹಾಗೂ ಪ್ರಸಾದ ವಿತರಿಸಲಾಯಿತು.
ಮಾಜಿ ಶಾಸಕ ಸಿ. ರಮೇಶ್, ಪಟ್ಟಣ ಪಂಚಾಯಿತಿ ಅಧ್ಯಕ್ಷ ಎನ್.ಎಸ್. ಬಸವರಾಜು, ಉಪಾಧ್ಯಕ್ಷ ಮಲ್ಲಿಕಾರ್ಜುನ, ಮಾಜಿ ಅಧ್ಯಕ್ಷ ಬಸವಣ್ಣ ಇತರರು ಪಾಲ್ಗೊಂಡಿದ್ದರು.
ಏ.7ರಂದು ಡೋಲೋತ್ಸವ, ಶಯನೋತ್ಸವ, 8ರಂದು ಅವಭೃತ ಸ್ನಾನ ಹಾಗೂ 9ರಂದು ಮಹಾಭಿಷೇಕ, ಹನುಮಂತೋತ್ಸವದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳ್ಳಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.