ADVERTISEMENT

ವ್ಯವಹಾರ ಜ್ಞಾನಕ್ಕಿಂತ ಕಾನೂನು ಹೆಚ್ಚಲ್ಲ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2012, 10:40 IST
Last Updated 11 ಏಪ್ರಿಲ್ 2012, 10:40 IST

ನಂಜನಗೂಡು: ಕಾನೂನು ರೂಪು ಗೊಳ್ಳುವುದೇ ವ್ಯವಹಾರ ಜ್ಞಾನದಿಂದ. ಆದ್ದರಿಂದ ಕಾನೂನು ವ್ಯವಹಾರ ಜ್ಞಾನಕ್ಕಿಂತ ಹೆಚ್ಚಿನದೇನಲ್ಲ. ನ್ಯಾಯಾಲಯ ನೀಡುವ ತೀರ್ಪುಗಳಲ್ಲಿ ವ್ಯವಹಾರ ಜ್ಞಾನ ಇರುವುದು ಅವಶ್ಯಕ ಎಂದು ರಾಜ್ಯ ಹೈಕೋರ್ಟ್ ನ್ಯಾಯಾಧೀಶ ಎ.ಎಸ್.ಪಚ್ಛಾಪುರೆ ಅಭಿಪ್ರಾಯಪಟ್ಟರು.

ಶಿವರಾತ್ರೀಶ್ವರ ಧಾರ್ಮಿಕ ದತ್ತಿ ವತಿಯಿಂದ ಸುತ್ತೂರಿನಲ್ಲಿ ಜೆಎಸ್‌ಎಸ್ ಶಿಕ್ಷಣ ಸಂಸ್ಥೆಗಳ ನೌಕರರಿಗೆ ಐದು ದಿನಗಳ ಕಾಲ ಏರ್ಪಡಿಸಿರುವ ವ್ಯಕ್ತಿತ್ವ ವಿಕಸನ ಶಿಬಿರವನ್ನು ಈಚೆಗೆ ಅವರು ಉದ್ಘಾಟಿಸಿ ಮಾತನಾಡಿದರು.

ಮನುಷ್ಯ ಭಾವನೆಯಲ್ಲಿ ಅರಿಷಡ್‌ವರ್ಗಗಳು ತುಂಬಿ ತುಳುಕಾಡುತ್ತವೆ. ಬಹುತೇಕ ನ್ಯಾಯಾಲಯಗಳ ಎಲ್ಲ ಪ್ರಕರಣಗಳಲ್ಲೂ ಇದನ್ನೇ ಕಾಣುತ್ತೇವೆ ಎಂದು ಹೇಳಿದರು.

ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಮಾಡುವ ಕೆಲಸವನ್ನು ಎಷ್ಟು ಪ್ರೀತಿಯಿಂದ ಮಾಡುತ್ತೇವೆ ಎನ್ನುವುದು ಮುಖ್ಯ. ನಮ್ಮ ಬದುಕಿನ ರೀತಿ, ನೀತಿಗಳನ್ನು ಸುಧಾರಿಸಿಕೊಂಡರೆ ಅಷ್ಟರ ಮಟ್ಟಿಗೆ ಸಮಾಜಕ್ಕೆ ಕೊಡುಗೆ ನೀಡಿದಂತಯೇ ಆಗುತ್ತದೆ. ಬದುಕು ಕೇವಲ ವೃತ್ತಿ ಜೀವನಕ್ಕೆ ಸೀಮಿತವಲ್ಲ ಎಂಬುದನ್ನು ಅರಿತುಕೊಳ್ಳಬೇಕು ಎಂದು ನುಡಿದರು.

ವಿಜಾಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ಮನಸ್ಸನ್ನು ಸಿಕ್ಕ ಸಿಕ್ಕ  ಕಡೆ ಹರಿಯ ಬಿಡಬಾರದು. ಅದು ಮಾಡುವ ಕಾರ್ಯದಿಂದ ತನಗೆ ಮತ್ತು ಇತರರಿಗೆ ತೊಂದರೆಯಾಗಬಾರದು. ನನಗೇ ಎಲ್ಲ ಗೊತ್ತು ಎಂದು ಭಾವಿಸುವುದರಿಂದ ಕಲಿಕೆ ಸಾಧ್ಯವಾಗದು ಎಂದರು. 

ಜಲಸಂಪನ್ಮೂಲ ಇಲಾಖೆ ಪ್ರಧಾನ ಕಾರ್ಯದರ್ಶಿ ಪಿ.ಎನ್. ಶ್ರೀನಿವಾಸಚಾರಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೃಷಿ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ. ಬಾಬುರಾವ್ ಮುಡಬಿ ಮಾತನಾಡಿದರು. ಚನ್ನಗಿರಿ ನ್ಯಾಯಾಧೀಶ ಹನ್ನುಗೋಡ ಪಾಟೀಲ್, ತುಳಸಿ ಮುಡಬಿ ಇದ್ದರು. ಪ್ರಾಂಶುಪಾಲ ಎಸ್.ಜಿ. ಶಶಿಧರಕುಮಾರ್ ಸ್ವಾಗತಿಸಿದರು. ಪ್ರಾಧ್ಯಾಪಕ ಡಾ.ಪುರುಷೋತ್ತಮ ಶಾಸ್ತ್ರಿ ನಿರೂಪಿಸಿದರು. ಕೆ.ಎಲ್.ಬಸಪ್ಪ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.