ADVERTISEMENT

ಸರ್ಕಾರದ ಸಾಧನೆ ತೃಪ್ತಿ ತಂದಿದೆ: ಶ್ರೀನಿವಾಸಪ್ರಸಾದ್‌

​ಪ್ರಜಾವಾಣಿ ವಾರ್ತೆ
Published 14 ಮೇ 2014, 6:41 IST
Last Updated 14 ಮೇ 2014, 6:41 IST
ಮೈಸೂರಿನ ಸರ್ಕಾರಿ ಅತಿಥಿಗೃಹದ ಆವರಣದಲ್ಲಿರುವ ಸಂಸದರ ಕಚೇರಿ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ‘ಸರ್ಕಾರಕ್ಕೆ ಒಂದು ವರ್ಷ ಸಂಭ್ರಮಾಚರಣೆ’ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸ ಪ್ರಸಾದ್‌ ಕಾರ್ಯಕರ್ತರಿಗೆ ಸಿಹಿ ಹಂಚಿದರು. ಎಂ. ಶಿವಣ್ಣ, ಕೆ.ಆರ್‌. ಮೋಹನಕುಮಾರ್‌, ಎಚ್‌.ಎ. ವೆಂಕಟೇಶ್‌, ಸಿ. ಬಸವೇಗೌಡ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಕೂರ್ಗಳ್ಳಿ ಎಂ. ಮಹದೇವು, ಕಾಂಗ್ರೆಸ್‌ ನಗರ ಘಟಕ ಅಧ್ಯಕ್ಷ ಸಿ. ದಾಸೇಗೌಡ ಇತರರು ಇದ್ದಾರೆ.
ಮೈಸೂರಿನ ಸರ್ಕಾರಿ ಅತಿಥಿಗೃಹದ ಆವರಣದಲ್ಲಿರುವ ಸಂಸದರ ಕಚೇರಿ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ‘ಸರ್ಕಾರಕ್ಕೆ ಒಂದು ವರ್ಷ ಸಂಭ್ರಮಾಚರಣೆ’ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸ ಪ್ರಸಾದ್‌ ಕಾರ್ಯಕರ್ತರಿಗೆ ಸಿಹಿ ಹಂಚಿದರು. ಎಂ. ಶಿವಣ್ಣ, ಕೆ.ಆರ್‌. ಮೋಹನಕುಮಾರ್‌, ಎಚ್‌.ಎ. ವೆಂಕಟೇಶ್‌, ಸಿ. ಬಸವೇಗೌಡ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಕೂರ್ಗಳ್ಳಿ ಎಂ. ಮಹದೇವು, ಕಾಂಗ್ರೆಸ್‌ ನಗರ ಘಟಕ ಅಧ್ಯಕ್ಷ ಸಿ. ದಾಸೇಗೌಡ ಇತರರು ಇದ್ದಾರೆ.   

ಮೈಸೂರು:  ‘ಮುಂದಿನ ನಾಲ್ಕು ವರ್ಷಗಳ ಕಾಲ ರಾಜ್ಯದಲ್ಲಿ ಕಾಂಗ್ರೆಸ್‌ ಸ್ಥಿರ ಸರ್ಕಾರ ನೀಡಲಿದೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಅವಧಿ ಪೂರ್ಣಗೊಳಿಸಲಿದ್ದಾರೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸ ಪ್ರಸಾದ್‌ ವಿಶ್ವಾಸ ವ್ಯಕ್ತಪಡಿಸಿದರು.

ನಗರದ ಸರ್ಕಾರಿ ಅತಿಥಿಗೃಹದ ಆವರಣದಲ್ಲಿರುವ ಸಂಸದರ ಕಚೇರಿ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ‘ಸರ್ಕಾರಕ್ಕೆ ಒಂದು ವರ್ಷ ಸಂಭ್ರಮಾಚರಣೆ’ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ಜನರ ನಿರೀಕ್ಷೆಗೆ ತಕ್ಕಂತೆ ಸರ್ಕಾರ ಕೆಲಸ ಮಾಡಿದೆ. ಪ್ರಣಾಳಿಕೆಯಲ್ಲಿ ನೀಡಿದ ಬಹುತೇಕ ಭರವಸೆಗಳನ್ನು ಈಡೇರಿಸಿದೆ. ಸಿದ್ದರಾಮಯ್ಯ ಅವರ ಸಾಧನೆ ತೃಪ್ತಿ ತಂದಿದೆ. ಇದೀಗ ಲೋಕಸಭಾ ಚುನಾವಣಾ ಫಲಿತಾಂಶ ಬರಲಿದ್ದು, ರಾಜ್ಯದಲ್ಲಿ ಕಾಂಗ್ರೆಸ್‌ ಹೆಚ್ಚಿನ ಸ್ಥಾನಗಳನ್ನು ಗಳಿಸಲಿದೆ. ಮೈಸೂರು–ಕೊಡಗು ಕ್ಷೇತ್ರದಲ್ಲಿ ಎದುರಾಳಿ ಬಿಜೆಪಿಯನ್ನು ಮಣಿಸಿ ವಿಶ್ವನಾಥ್‌ ಮರು ಆಯ್ಕೆ ಆಗಲಿದ್ದಾರೆ. ಇದರಲ್ಲಿ ಅನುಮಾನ ಬೇಡ’ ಎಂದು ಹೇಳಿದರು.

‘ಸಚಿವ ಸಂಪುಟ ವಿಸ್ತರಣೆ ಮುಖ್ಯಮಂತ್ರಿಗೆ ಬಿಟ್ಟ ವಿಚಾರ. ಚುನಾವಣಾ ಫಲಿತಾಂಶದ ಬಂದ ಬಳಿಕ ಮುಖ್ಯಮಂತ್ರಿ ಹೈಕಮಾಂಡ್‌ ಜತೆ ಚರ್ಚಿಸಿ ಸಂಪುಟ ವಿಸ್ತರಣೆ ಮಾಡಲಿದ್ದಾರೆ. ಚುನಾವಣೆ ಬಳಿಕ ಸರ್ಕಾರದಲ್ಲಿ ಬದಲಾವಣೆ ಆಗುತ್ತದೆ ಎಂಬುದು ಸುಳ್ಳು. ಹೆದರುವುದು, ಮಾನಸಿಕವಾಗಿ ಕುಗ್ಗುವ ಪ್ರಶ್ನೆಯೇ ಇಲ್ಲ. ನಾವು ಮತ್ತೆ ಪಕ್ಷ ಸಂಘಟನೆ ಮಾಡುವ ಜವಾಬ್ದಾರಿಯನ್ನು ಪ್ರತಿಯೊಬ್ಬರೂ ಹೊರಬೇಕು’ ಎಂದು ಹೇಳಿದರು.

‘ಸರ್ಕಾರದಲ್ಲಿ ಪ್ರತಿಯೊಂದು ಇಲಾಖೆ ಚೆನ್ನಾಗಿ ಕೆಲಸ ಮಾಡಿದೆ. ಇಲಾಖಾವಾರು ಸಾಧನಾ ಪಟ್ಟಿ ನೀಡುವಂತೆ ಮುಖ್ಯಮಂತ್ರಿ ಕೇಳಿದ್ದಾರೆ. ಅದನ್ನು ನೀಡಲಾಗುವುದು. ಮೇ 19ರ ಒಳಗೆ ಪಟ್ಟಿಯನ್ನು ನೀಡಲಾಗುವುದು. ಐದು ವರ್ಷಗಳ ಕಾಲ ಆಡಳಿತ ನಡೆಸಿದ ಬಿಜೆಪಿ ಸರ್ಕಾರ ಮಾಡದ ಸಾಧನೆಯನ್ನು ಕಾಂಗ್ರೆಸ್‌ ಹತ್ತು ತಿಂಗಳಲ್ಲಿಯೇ ಮಾಡಿ ಮುಗಿಸಿದೆ’ ಎಂದು ತಿಳಿಸಿದರು.

‘ಕಡುಬಡವರಿಗೆ 1 ರೂಪಾಯಿಗೆ 1 ಕೆಜಿ ಅಕ್ಕಿ, ಹಾಲು ಉತ್ಪಾದಕರಿಗೆ ಸಹಾಯಧನ, ಮನಸ್ವಿನಿ, ಸಾಲ ಮನ್ನಾ ಮಾಡಲಾಗಿದೆ. ಆದರೆ, ಬಿಜೆಪಿ ಸರ್ಕಾರ ಜನರಿಗೆ ಉಪಯೋಗ ಆಗುವಂತಹ ಕಾರ್ಯಕ್ರಮ ಮಾಡಲಿಲ್ಲ. ಆಗಾಗ್ಗೆ ಮುಖ್ಯಮಂತ್ರಿ ಬದಲಾದರು. ಇಬ್ಬರಿಗೆ ಉಪ ಮುಖ್ಯಮಂತ್ರಿ ಹುದ್ದೆ ನೀಡಲಾಗಿತ್ತು. ಒಬ್ಬೊಬ್ಬರು ಹೆಚ್ಚು ಖಾತೆಯನ್ನು ತಮ್ಮ ಬಳಿ ಇಟ್ಟುಕೊಂಡಿದ್ದರಿಂದ ನಿರೀಕ್ಷೆಯಷ್ಟು ಕೆಲಸ ಬಿಜೆಪಿ ಅವಧಿಯಲ್ಲಿ ಸಾಧ್ಯವಾಗಲಿಲ್ಲ. ವಿರೋಧ ಪಕ್ಷಕ್ಕೆ ಸರ್ಕಾರದ ಬಗ್ಗೆ ಹೇಳಲು ಏನೂ ಇಲ್ಲ. ಅಲ್ಲಲ್ಲಿ ಕುಂಟು ನೆಪ ಹೇಳಿ ಸರ್ಕಾರದ ಕಾಲೆಳೆಯುವ ಪ್ರಯತ್ನ ಆಗಾಗ್ಗೆ ನಡೆಯುತ್ತಿದೆ’ ಎಂದು ಹೇಳಿದರು.

ನಗರ ಕಾಂಗ್ರೆಸ್‌ ಘಟಕ ಅಧ್ಯಕ್ಷ ಸಿ. ದಾಸೇಗೌಡ ಮಾತನಾಡಿ, ‘ಮುಖ್ಯಮಂತ್ರಿ ಸಿದ್ದರಾಮಯ್ಯ ಜನಪರ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಇದರಿಂದ ಬಡ ಜನರು ಮತ್ತು ಸಾಮಾನ್ಯ ಜನರಿಗೆ ಅನುಕೂಲಕರವಾಗಿದೆ. ಚುನಾವಣಾ ಸಮೀಕ್ಷೆ ಕುರಿತು ಮಾಧ್ಯಮದಲ್ಲಿ ಪ್ರಕಟವಾಗುತ್ತಿರುವ ಫಲಿತಾಂಶವನ್ನು ಜನರು ನಂಬಬಾರದು. ಈ ಹಿಂದೆ ನಡೆದ ಸಮೀಕ್ಷೆಗಳು ಸುಳ್ಳಾಗಿವೆ’ ಎಂದು ಹೇಳಿದರು.

ಮಾಜಿ ಶಾಸಕರಾದ ಎಂ. ಸತ್ಯನಾರಾಯಣ, ಮುಕ್ತರುನ್ನೀಸಾ ಬೇಗಂ, ಕೆಪಿಸಿಸಿ ಸದಸ್ಯ ರಾಮಸ್ವಾಮಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಕೂರ್ಗಳ್ಳಿ ಎಂ. ಮಹದೇವು, ಮಾಜಿ ಮೇಯರ್‌ಗಳಾದ ಆರಿಫ್‌ ಹುಸೇನ್‌, ಎಂ. ಪುರುಷೋತ್ತಮ, ಟಿ.ಬಿ. ಚಿಕ್ಕಣ್ಣ, ಎಂಸಿಡಿಸಿಸಿ ಬ್ಯಾಂಕ್‌ ಮಾಜಿ ಅಧ್ಯಕ್ಷ ಸಿ. ಬಸವೇಗೌಡ, ಕಾಂಗ್ರೆಸ್‌ ಮುಖಂಡರಾದ ಕೆ.ಆರ್‌. ಮೋಹನ್‌ಕುಮಾರ್‌, ವಕ್ತಾರ ಎಚ್.ಎ. ವೆಂಕಟೇಶ್‌ ಇದ್ದರು.

ಕಾರ್ಯಕ್ರಮಕ್ಕೂ ಮುನ್ನ ಸಚಿವ ಪ್ರಸಾದ್‌ ಅವರು ಸರ್ಕಾರ ಪೂರೈಸಿದ ಹಿನ್ನೆಲೆಯಲ್ಲಿ ಗಿಡಕ್ಕೆ ನೀರೆರೆದರು. ನೆರೆದಿದ್ದ ಕಾಂಗ್ರೆಸ್‌ ಕಾರ್ಯಕರ್ತರಿಗೆ ಸಿಹಿ ಹಂಚಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.