ADVERTISEMENT

ಸ್ವಾತಂತ್ರ್ಯಯೋಧರ ಸಂಖ್ಯೆ ಇಳಿಮುಖ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2012, 5:50 IST
Last Updated 16 ಆಗಸ್ಟ್ 2012, 5:50 IST

ಮೈಸೂರು: ನಗರದಲ್ಲಿ ಸ್ವಾತಂತ್ರ್ಯಯೋಧರ ಸಂಖ್ಯೆ 120 ರಿಂದ 30ಕ್ಕೆ ಇಳಿದಿದೆ. ಅದರಲ್ಲಿ ಅರ್ಧದಷ್ಟು ಜನರಿಗೆ ಬಹಳ ವಯಸ್ಸಾಗಿದ್ದು, ಓಡಾಡಲೂ ಕಷ್ಟವಿದೆ. ಆದ್ದರಿಂದ ಇಂದಿನ ಪೀಳಿಗೆಯ ಮಕ್ಕಳಿಗೆ ಸ್ವಾತಂತ್ರ್ಯ ಹೋರಾಟದ ಅರಿವು ಮೂಡಿಸುವ ಜವಾಬ್ದಾರಿ ಯುವಜನತೆ ಮೇಲಿದೆ ಎಂದು ಸ್ವಾತಂತ್ರ್ಯ ಹೋರಾಟಗಾರ ವೈ.ಸಿ. ರೇವಣ್ಣ ಹೇಳಿದರು.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಬುಧವಾರ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಧ್ವಜಾರೋಹಣ ಮಾಡಿದ ಅವರು, `ಪ್ರತಿಯೊಂದು ಶಾಲೆಗೂ ಹೋಗಿ ಮಕ್ಕಳಿಗೆ ಗಾಂಧೀಜಿ, ಸ್ವಾತಂತ್ರ್ಯ ಹೋರಾಟ, ಕ್ರಾಂತಿಗಳ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದೇವೆ. ಆದರೆ, ನಿರೀಕ್ಷಿತ ಪ್ರಮಾಣದಲ್ಲಿ ಗುರಿ ಸಾಧಿಸಲು ಇಂದಿನ ವಿದ್ಯಾವಂತರ ನೆರವು ಅಗತ್ಯವಿದೆ~ ಎಂದು ಹೇಳಿದರು.

ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮ ಪಾತ್ರ ಸ್ಮರಿಸಿದ ರೇವಣ್ಣ, `ನಾವು ಚಿಕ್ಕವರಾಗಿದ್ದಾಗ, ಚರಕ ಗುರುತು ಇದ್ದ ತ್ರಿವರ್ಣ ಧ್ವಜ ಎಲ್ಲರ ಮನೆ ಮೇಲೂ ಹಾರಾಡುತ್ತಿದ್ದವು. ಚರಕ ಏಕೆ ಎಂಬ ಕುತೂಹಲ ನಮ್ಮಲ್ಲಿತ್ತು. ಆ ಮನೆಗಳ ಹಿರಿಯರನ್ನು ಹೋಗಿ ಕೇಳಿದಾಗ ಅದರ ಬಗ್ಗೆ ಹೇಳುತ್ತಿದ್ದರು ಮತ್ತು ತಿಂಡಿ, ತಿನಿಸು ಕೊಡುತ್ತಿದ್ದರು. ತಿನಿಸಿನ ಆಸೆಗೆ ಪ್ರತಿದಿನವೂ ಅವರ ಬಳಿ ಹೋಗುತ್ತಿದ್ದೆವು. ಅವರೂ ದಿನಾಲೂ ನಮಗೆ ತಿನಿಸು ಕೊಡುವ ಜೊತೆಗೆ ದೇಶಭಕ್ತಿ, ಸ್ವಾತಂತ್ರ್ಯ ಹೋರಾಟದ ಅರಿವು ಮೂಡಿಸುತ್ತಿದ್ದರು~ ಎಂದರು.

`ಆಗ ನಾವು ಪ್ರತಿಭಟನೆ, ಸತ್ಯಾಗ್ರಹ ಆರಂಭಿಸಿದಾಗ ಬ್ರಿಟಿಷ್ ಪೊಲೀಸರು ನಮ್ಮನ್ನು ಮನಬಂದಂತೆ ಥಳಿಸುತ್ತಿದ್ದರು. ನಮ್ಮವರೇ ಪೊಲೀಸ್ ಪಡೆಯಲ್ಲಿದ್ದು ನಮ್ಮನ್ನು ಹೊಡೆಯುತ್ತಿದ್ದರು. ನಮ್ಮನ್ನು ಬಂಧಿಸಿ ಮಡಿಕೆರೆ ಅಥವಾ ಹೆಗ್ಗಡದೇವನಕೋಟೆಯ ಕಾಡಿನಲ್ಲಿ ಬಿಟ್ಟು ಬರುತ್ತಿದ್ದರು. ಅಲ್ಲಿಂದ ಮನೆಗೆ ಮರಳಿ ಬರಲು ದಿನಗಳೇ ಕಳೆದುಹೋಗುತ್ತಿದ್ದವು. ಆಗ ದಟ್ಟ ಅರಣ್ಯಗಳಲ್ಲಿ ಕಾಲ್ನಡಿಗೆಯಲ್ಲಿಯೇ ಬರಬೇಕಿತ್ತು~ ಎಂದು ನೆನಪಿಸಿಕೊಂಡರು.

`ಕ್ವಿಟ್ ಇಂಡಿಯಾ ಚಳುವಳಿಯ ದಿನಾಚರಣೆಯನ್ನೂ ಸ್ವಾತಂತ್ರ್ಯೋತ್ಸವದಷ್ಟೇ ಮಹತ್ವದಿಂದ ಆಚರಿಸಬೇಕು. ಏಕೆಂದರೆ ಸ್ವಾತಂತ್ರ್ಯ ಹೋರಾಟದ ಪ್ರಮುಖ ಘಟ್ಟವದು. ಸಚಿವ ರಾಮದಾಸ್ ಸೇರಿದಂತೆ ಹಲವರಿಗೆ ಈ ಬಗ್ಗೆ ಹೇಳಿದರೂ ಯಾರೂ ಈ ಬಗ್ಗೆ ಕ್ರಮ ಕೈಗೊಂಡಿಲ್ಲ~ ಎಂದು ಬೇಸರ ವ್ಯಕ್ತಪಡಿಸಿದರು.

`ಭ್ರಷ್ಟಾಚಾರದ ವಿರುದ್ಧದ ದೊಡ್ಡ ಹೋರಾಟಗಳ ಏನಾಗುತ್ತಿವೆ ಎನ್ನುವುದನ್ನು ನಾವು ನೋಡುತ್ತಿದ್ದೇವೆ. ಲಂಚ ತೆಗೆದುಕೊಳ್ಳುವುದಕ್ಕಿಂತಲೂ ಲಂಚ ಕೊಡುವುದು ದೊಡ್ಡ ಅಪರಾಧ. ಕೊಡುವುದನ್ನು ಮೊದಲು ನಿಲ್ಲಿಸುವ ಧೈರ್ಯ ತೋರಬೇಕು. ಆಗ ಭ್ರಷ್ಟಾಚಾರ ತನ್ನಿಂದ ತಾನೇ ಕಡಿಮೆಯಾಗುತ್ತದೆ~ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ವಿವಿಯ ಕುಲಪತಿ ಪ್ರೊ. ಕೆ.ಎಸ್. ರಂಗಪ್ಪ, `ಪ್ರಜಾಪ್ರಭುತ್ವ ಮತ್ತು ಸ್ವಾತಂತ್ರ್ಯವನ್ನು ಅತಿಯಾಗಿ ಬಳಕೆಯಾಯಿತು ಎಂದು ಅನಿಸುತ್ತಿದೆ. ಯಾವುದೇ ಒಂದು ವಿಷಯ ಅತಿಯಾದರೆ ಒಳ್ಳೆಯದಲ್ಲ.

ಹಿತಮಿತವಾಗಿ ಶಿಸ್ತುಬದ್ಧವಾದರೆ ದೇಶಕ್ಕೆ ಒಳ್ಳೆಯದು. ಹಿರಿಯರ ಹೋರಾಟ, ತ್ಯಾಗಗಳು ನಮಗೆ ಸ್ವಾತಂತ್ರ್ಯ ತಂದುಕೊಟ್ಟಿವೆ. ಅದನ್ನು ಉಳಿಸಿಕೊಳ್ಳಬೇಕು. ರಾಷ್ಟ್ರ ಉಳಿದರೇ ನಾವೆಲ್ಲ ಉಳಿಯುತ್ತೇವೆ~ ಎಂದು ನುಡಿದರು.

ಕರಾಮುವಿವಿಯ ನಿವೃತ್ತ ಕುಲಸಚಿವ ಪ್ರೊ. ಕೃಷ್ಣೇಗೌಡ, ನಿವೃತ್ತ ಉಪ ಕುಲಸಚಿವ ವಿವೇಕಾನಂದ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಕುಲಸಚಿವ ಪ್ರೊ. ಬಿ.ಎಸ್. ವಿಶ್ವನಾಥ್ ಮತ್ತಿತರ ಅಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.