ADVERTISEMENT

ಹರಿಗೋಲಿನಲ್ಲಿ ಬಂದು ಜಲಾಶಯಕ್ಕೆ ಮುತ್ತಿಗೆ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2012, 19:30 IST
Last Updated 2 ಅಕ್ಟೋಬರ್ 2012, 19:30 IST
ಹರಿಗೋಲಿನಲ್ಲಿ ಬಂದು ಜಲಾಶಯಕ್ಕೆ ಮುತ್ತಿಗೆ
ಹರಿಗೋಲಿನಲ್ಲಿ ಬಂದು ಜಲಾಶಯಕ್ಕೆ ಮುತ್ತಿಗೆ   

ಎಚ್.ಡಿ.ಕೋಟೆ: ತಮಿಳುನಾಡಿಗೆ ನೀರು ಬಿಡುವುದನ್ನು ವಿರೋಧಿಸಿ ಕಬಿನಿ ಕಾವಲು ಪಡೆಯ ಸದಸ್ಯರು ಮಂಗಳವಾರ ಹರಿಗೋಲು ಮೂಲಕ ಬಂದು ಜಲಾಶಯಕ್ಕೆ ಮುತ್ತಿಗೆ ಹಾಕಿದರು. ಜಲಾಶಯದ ಸುತ್ತ ವಿಧಿಸಿರುವ  ನಿಷೇಧಾಜ್ಞೆ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಪೊಲೀಸರು ಎಲ್ಲರನ್ನೂ ಬಂಧಿಸಿದರು.

30 ಜನರು 5 ಹರಿಗೋಲುಗಳಲ್ಲಿ ಕಬಿನಿ ಹಿನ್ನೀರಿನಲ್ಲಿ ನಿರಂತರ ಮೂರು ತಾಸು ಪ್ರಯಾಣ ಮಾಡಿ ಜಲಾಶಯ ತಲುಪಿದರು.  ಜಲಾಶಯದ ಹಿನ್ನೀರು ಬಳಿಯ ಕೆಂಪೇಗೌಡನಹುಂಡಿ ಗ್ರಾಮದಿಂದ ತೆಪ್ಪಗಳ ರ‌್ಯಾಲಿ ಆರಂಭಿಸಿದ ಹೋರಾಟಗಾರರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಜಲಾಶಯ ಆವರಣದಲ್ಲಿ ಧರಣಿಗೆ ಮುಂದಾದ ಕಬಿನಿ ಕಾವಲು ಪಡೆ ಸದಸ್ಯರನ್ನು ಪೊಲೀಸರು ಸುತ್ತುವರಿದರು. ನಿಷೇಧಾಜ್ಞೆ ನಡುವೆಯೂ ಜಲಾಶಯದತ್ತ  ಘೋಷಣೆಗಳನ್ನು ಕೂಗುತ್ತ ಪ್ರತಿಭಟನಾಕಾರರು ಸಾಗಿದರು. 

ತಮಿಳುನಾಡಿಗೆ ಬಿಡುತ್ತಿರುವ ನೀರನ್ನು ಸ್ಥಗಿತಗೊಳಿಸಲು ಅಗತ್ಯವಾದ ಕ್ರಮಗಳನ್ನು ರಾಜ್ಯ ಸರ್ಕಾರ ಈ ಕೂಡಲೇ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಸ್ಥಳಕ್ಕೆ ಬಂದ ತಹಶೀಲ್ದಾರ್ ಶಿವಕುಮಾರಸ್ವಾಮಿ ಮನವಿ ಪಡೆದರು.

ನಿಷೇಧಾಜ್ಞೆ ಉಲ್ಲಂಘಿಸಿ ಪ್ರತಿಭಟನೆ ನಡೆಸಿದ ಕಬಿನಿ ಕಾವಲು ಪಡೆಯ ಚೌಡಹಳ್ಳಿ ಜವರಯ್ಯ, ಡಿ.ಎಂ.  ಗೋವಿಂದೇಗೌಡ, ಅಕ್ಬರ್ ಪಾಷಾ, ಹೋ.ಕೆ. ಮಹೇಂದ್ರ, ಬಿದರಹಳ್ಳಿ ಚಂದ್ರಶೇಖರ್, ವೇದಮೂರ್ತಿ, ದೊಡ್ಡಲಿಂಗನಾಯಕ, ಕನ್ನಡ ಪರ ಹೋರಾಟಗಾರ ಸೋಗಹಳ್ಳಿ ತುಂಗ, ಸ್ವಾಮಿ, ಸುರೇಶ್ ಸೇರಿದಂತೆ ಎಲ್ಲ 30 ಮಂದಿಯನ್ನೂ ಪೊಲೀಸರು ಬಂಧಿಸಿದರು. ಸಂಜೆ ವೇಳೆಗೆ ಜಾಮೀನು ಮೇಲೆ ಬಿಡುಗಡೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.