ಬನ್ನೂರು: ಪಟ್ಟಣದ ಸಮೀಪ ಇರುವ ಹೆಗ್ಗೂರು ಗ್ರಾಮದ ಇತಿಹಾಸ ಪ್ರಸಿದ್ಧ ಮತ್ತಿತಾಳೇಶ್ವರ ದೇವರ ರಥೋತ್ಸವ ಮಹಾಶಿವರಾತ್ರಿ ದಿನವಾದ ಬುಧವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವೈಭವಯುತವಾಗಿ ನೆರವೇರಿತು.ಹೂವು ಮತ್ತು ಬಗೆ ಬಗೆ ಪತಾಕೆಗಳಿಂದ ಅಲಂಕರಿಸಿದ ರಥದಲ್ಲಿ ಮತ್ತಿತಾಳೇಶ್ವರ ಮೂರ್ತಿಯನ್ನು ಇರಿಸಲಾಗಿತ್ತು. ಭಕ್ತರು ರಥವನ್ನು ದೇವಾಲಯದ ಸುತ್ತ ಮಂಗಳ ವಾದ್ಯಗಳ ನಿನಾದದೊಂದಿಗೆ ಪ್ರದಕ್ಷಿಣೆ ಹಾಕಿಸಿದರು. ನಂತರ ದೇವಾಲಯ ರಥದ ಮುಂಭಾಗದಲ್ಲಿ ಹೋಮವನ್ನು ನಡೆಸಿದರು.
ಇಲ್ಲಿಗೆ ಬಂದು ಪೂಜೆ ಸಲ್ಲಿಸಿದರೆ ಸರ್ಪ ದೋಷ ನಿವಾರಣೆ ಹಾಗೂ ಅನೇಕ ರೋಗಗಳು ವಾಸಿಯಾಗುತ್ತವೆ ಎನ್ನುವ ನಂಬಿಕೆ ಜನರಲ್ಲಿ ಇದೆ. ಹೀಗಾಗಿ ಪ್ರತಿ ಗುರುವಾರ ಹಾಗೂ ಭಾನುವಾರ ಹೆಚ್ಚಿನ ಜನರು ಆಗಮಿಸಿ ಪೂಜೆ ಸಲ್ಲಿಸುತ್ತಾರೆ. ಆದರೆ ಮಹಾಶಿವರಾತ್ರಿಯ ದಿನ ನಡೆಯುವ ಪ್ರಸಿದ್ಧ ರಥೋತ್ಸವದಲ್ಲಿ ಪಾಲ್ಗೊಳ್ಳಲು ಮುಂಜಾನೆಯಿಂದಲೇ ಸುತ್ತಮುತ್ತಲಿನ ಪ್ರದೇಶಗಳಿಂದ ಸಾವಿರಾರು ಭಕ್ತರು ಸೇರಿದ್ದರು. ರಥದ ಚಕ್ರಕ್ಕೆ ತಡಗೋಲು ಕೊಡುವ ವ್ಯಕ್ತಿಗೆ ಇದೇ ಸಂದರ್ಭದಲ್ಲಿ ಗಾಯವಾಯಿತು. ರಥೋತ್ಸವ ಸಾಗುವ ಮಧ್ಯಭಾಗದ ತಿರುವಿನ ಬಳಿ ಚಕ್ರಕ್ಕೆ ತಡೆಗೋಲು ನೀಡುತ್ತಿದ್ದಾಗ ಚಕ್ರಕ್ಕೆ ತಲೆ ತಾಗಿ ಸಣ್ಣದಾಗಿ ಗಾಯವಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.