ADVERTISEMENT

‘ಎರಡೂ ಪಕ್ಷಗಳಿಗೆ ತಕ್ಕ ಪಾಠ’

ಜಾಫರ್‌ ಷರೀಪ್‌ಗೆ ಜೆಡಿಎಸ್‌ ಸ್ವಾಗತ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2014, 10:23 IST
Last Updated 23 ಮಾರ್ಚ್ 2014, 10:23 IST

ವಿರಾಜಪೇಟೆ: ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದ ಜೆಡಿಎಸ್‌ ಪಕ್ಷದ ಅಭ್ಯರ್ಥಿಯಾಗಿ ಅನುಭವಿ ರಾಜಕಾರಣಿ, ಹಿರಿಯ ನಾಯಕ ಜಾಫರ್‌ ಷರೀಫ್‌ ಸ್ಪರ್ಧಿಸುವುದು ಬಹುತೇಕ ಖಚಿತ ಎಂದು ಪಕ್ಷದ ಜಿಲ್ಲಾ ವಕ್ತಾರ ಹಾಗೂ ಕಾನೂನು ಸಲಹಾ ವಿಭಾಗದ ಅಧ್ಯಕ್ಷರಾದ ಎಂ.ಟಿ. ಕಾರ್ಯಪ್ಪ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಹಾಗೂ ಕಾಂಗ್ರೆಸ್‌ ಆಡಳಿತದಲ್ಲಿ ಕೊಡಗಿನ ಅಭಿವೃದ್ಧಿ ಶೂನ್ಯ ಆಗಿದೆ. ಈ ಬಾರಿಯ ಚುನಾವಣೆಯಲ್ಲಿ ಕೊಡಗಿನ ಜನತೆ ಈ ಎರಡು ಪಕ್ಷಗಳನ್ನು ತಿರಸ್ಕರಿಸುವ ಮೂಲಕ ತಕ್ಕ ಪಾಠ ಕಲಿಸಲಿದ್ದಾರೆ. ಕೊಡಗಿಗೆ ಮಾರಕವಾದ ಹೈಟೆನ್ಸೆನ್‌ ಮಾರ್ಗ ಹಾಗೂ ಪಶ್ಚಿಮ ಘಟ್ಟ ಸೂಕ್ಷ್ಮ ಪರಿಸರ ತಾಣ ರದ್ದುಪಡಿಸುವ ವಿಚಾರದಲ್ಲಿ ಈ ಎರಡೂ ಪಕ್ಷಗಳು ಸಂಪೂರ್ಣ ವಿಫಲಗೊಂಡಿದೆ. ಈ ಎರಡು ಯೋಜನೆಗಳು ಜಾರಿಗೊಳ್ಳದಂತೆ ವಿಧಾನ ಪರಿಷತ್‌ ಸದಸ್ಯ ಎಂ.ಸಿ. ನಾಣಯ್ಯ ಮಾತ್ರ ಹೋರಾಡುತ್ತಿದ್ದಾರೆ ಎಂದರು.

ಜೆಡಿಎಸ್‌ ಪಕ್ಷದ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಕೋಳೇರ ದಯಾ ಚಂಗಪ್ಪ ಮಾತನಾಡಿ, ಈ ಬಾರಿಯ ಚುನಾವಣೆಯಲ್ಲಿ ರೈತರು, ಅಲ್ಪ ಸಂಖ್ಯಾತರು ಹಾಗೂ ಹಿಂದುಳಿದ ವರ್ಗದವರು ಜೆಡಿಎಸ್‌ ಬಗ್ಗೆ ಪಲವು ತೋರುತ್ತಿದ್ದಾರೆ. ಕೊಡಗಿನ ಎಲ್ಲಾ ವರ್ಗದ ಜನತೆ ಕ್ಷೇತ್ರದಲ್ಲಿ ಜಾಫರ್‌ ಷರೀಫ್‌ ಸ್ಪರ್ಧೆಗೆ ಮುಕ್ತವಾಗಿ ಸ್ವಾಗತಿಸಿದ್ದಾರೆ. ಜೆಡಿಎಸ್‌ ನಾಯಕ ಎಚ್‌.ಡಿ. ಕುಮಾರಸ್ವಾಮಿ ಮೇಲೆ ಕೊಡಗಿನ ಜನತೆಗೆ ಪೂರ್ಣ ವಿಶ್ವಾಸವಿದೆ ಎಂದು ಹೇಳಿದರು.

ಜೆಡಿಎಸ್‌ನ ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ಆರ್. ಸುರೇಶ್‌, ಎಸ್‌.ಎಚ್‌. ಮೊಹ್ನಿನುದ್ದಿನ್‌ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.