ಮೈಸೂರು: ಮಾಜಿ ಮುಖ್ಯಮಂತ್ರಿ ದಿವಂಗತ ಎಸ್.ಎಂ.ಕೃಷ್ಣ ಅವರ ಹೆಸರಿನಲ್ಲಿ ಸ್ಥಾಪಿಸಿರುವ ‘ದಿವ್ಯಚೇತನ ಎಸ್.ಎಂ.ಕೃಷ್ಣ ದತ್ತಿನಿಧಿ’ ಡಿಡಿಯನ್ನು ಶಾಸಕರಾದ ಕೆ.ಎಂ.ಉದಯ್ ಮತ್ತು ದಿನೇಶ್ ಗೂಳಿಗೌಡ ಅವರು ಶನಿವಾರ ಶ್ರೀರಾಮಕೃಷ್ಣ ಆಶ್ರಮದಲ್ಲಿ ಹಸ್ತಾಂತರಿಸಿದರು.
ಮೈಸೂರು ವಿಶ್ವವಿದ್ಯಾಲಯದಲ್ಲಿ ಪ್ರಥಮ ಸ್ಥಾನ ಪಡೆದ ಇಬ್ಬರು ವಿದ್ಯಾರ್ಥಿಗಳಿಗೆ ಚಿನ್ನದ ಪದಕ ನೀಡಲು ₹ 10 ಲಕ್ಷ ಹಾಗೂ ನಗರದ ಶ್ರೀರಾಮಕೃಷ್ಣ ಆಶ್ರಮದಲ್ಲಿ ವ್ಯಾಸಂಗ ಮಾಡುವವರಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗೆ ಚಿನ್ನದ ಪದಕ ಕೊಡಲು ₹ 5 ಲಕ್ಷ ದತ್ತಿ ನಿಧಿಯ ಡಿಡಿಯನ್ನು ಹಸ್ತಾಂತರಿಸಿದರು.
ಶ್ರೀರಾಮಕೃಷ್ಣ ಆಶ್ರಮದ ಸ್ವಾಮಿ ಮುಕ್ತಿದಾನಂದ ಹಾಗೂ ವಿ.ವಿಯ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಡಿಡಿ ಸ್ವೀಕರಿಸಿದರು.
ಈ ವೇಳೆ ಮಾತನಾಡಿದ ಉದಯ್, ‘ಕೃಷ್ಣ ಅವರು ಮಂಡ್ಯ ಜಿಲ್ಲೆ ಜೊತೆಗೆ ಇಡೀ ನಾಡಿಗೆ ಸಾಕಷ್ಟು ಕೊಡುಗೆಗಳನ್ನು ಕೊಟ್ಟಿದ್ದಾರೆ. ಅವರ ಜೀವನಶೈಲಿ, ಕಾರ್ಯವೈಖರಿ ಮುಂದಿನ ಪೀಳಿಗೆಗೆ ದಾರಿದೀಪವಾಗಬೇಕು. ಈ ನಿಟ್ಟಿನಲ್ಲಿ ಅವರ ಹೆಸರು ಶಾಶ್ವತವಾಗಿ ಉಳಿಯಲೆಂಬ ಕಾರಣದಿಂದ ದತ್ತಿ ನಿಧಿ ಸ್ಥಾಪಿಸಲಾಗಿದೆ’ ಎಂದು ತಿಳಿಸಿದರು.
‘ಕೃಷ್ಣ ಅವರು ಬದುಕಿನುದ್ದಕ್ಕೂ ಶಿಸ್ತು ಮೈಗೂಡಿಸಿಕೊಂಡಿದ್ದರು. ರಾಮಕೃಷ್ಣ ಆಶ್ರಮದಲ್ಲಿ ವಿದ್ಯಾರ್ಥಿಯಾಗಿದ್ದಾಗ ಕಲಿತ ಶಿಸ್ತು ಅವರನ್ನು ಮೇರು ವ್ಯಕ್ತಿಯನ್ನಾಗಿ ರೂಪಿಸಿತು. ಅವರ ಸಾಧನೆ, ಕಾರ್ಯಕ್ಷಮತೆ ವಿದ್ಯಾರ್ಥಿಗಳಿಗೆ ಆದರ್ಶವಾದುದು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅವರು ಸ್ಪೂರ್ತಿದಾಯಕವಾಗಲಿ, ಅವರ ಹೆಸರು ಚಿರಸ್ಮರಣೀಯವಾಗಲೆಂದು ದತ್ತಿ ನಿಧಿ ಸ್ಥಾಪಿಸಿ ಸಾಧಕರನ್ನು ಗುರುತಿಸಿ ಸನ್ಮಾನಿಸುವ ಕಾರ್ಯಕ್ಕೆ ಮುನ್ನುಡಿ ಬರೆಯಲಾಗಿದೆ’ ಎಂದು ದಿನೇಶ್ ಗೂಳಿಗೌಡ ಹೇಳಿದರು.
ವಿಧಾನಪರಿಷತ್ ಮಾಜಿ ಸದಸ್ಯ ಡಿ.ಮಾದೇಗೌಡ, ಕೆಪಿಸಿಸಿ ವಕ್ತಾರ ಎಚ್.ಎ.ವೆಂಕಟೇಶ್, ಮುಖಂಡರಾದ ವಿಕ್ರಾಂತ್ ದೇವೇಗೌಡ, ಓಂಕಾರ್, ಸತ್ಯಾನಂದ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.