ADVERTISEMENT

ಮೈಸೂರು : ₹12.30 ಕೋಟಿ ದಂಡದ ಮೊತ್ತ ಪಾವತಿ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2023, 13:29 IST
Last Updated 13 ಫೆಬ್ರುವರಿ 2023, 13:29 IST
   

ಮೈಸೂರು: ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ಶೇ 50ರಷ್ಟು ರಿಯಾಯಿತಿ ನೀಡಿದ 9 ದಿನಗಳಲ್ಲಿ ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ₹ 12.30 ಕೋಟಿ ದಂಡದ ಮೊತ್ತವನ್ನು ಸಾರ್ವಜನಿಕರು ಪಾವತಿಸಿದ್ದಾರೆ.

ರಾಜ್ಯ ಸರ್ಕಾರದ ಆದೇಶದ ಅನ್ವಯ ಸಂಚಾರ ಇ-ಚಲನ್‌ಗಳ ದಂಡದ ಮೊತ್ತವನ್ನು ರಿಯಾಯಿತಿಯಲ್ಲಿ ಪಾವತಿಸಿಕೊಳ್ಳುವ ಕಾರ್ಯಕ್ಕೆ ಫೆ.3ರಿಂದ ಫೆ.11ರವರೆಗೆ ಅವಕಾಶ ನೀಡಲಾಗಿತ್ತು. ಸಂಚಾರ ಇ-ಚಲನ್‌ನ ಒಟ್ಟು 4,98,265 ಪ್ರಕರಣಗಳನ್ನು ಸಾರ್ವಜನಿಕರು ಇತ್ಯರ್ಥಪಡಿಸಿಕೊಂಡಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಮಾಹಿತಿ ನೀಡಿದ್ದಾರೆ.

ಸಾರ್ವಜನಿಕರು ಸಂಚಾರ ಪೊಲೀಸ್ ಠಾಣೆಗೆ ಬಂದು ಅಥವಾ ಆನ್‌ಲೈನ್‌ನಲ್ಲಿ ದಂಡ ಪಾವತಿಸಿದ್ದಾರೆ. ದೇವರಾಜ, ಕೃಷ್ಣರಾಜ, ವಿವಿ ಪುರಂ, ಸಿದ್ದಾರ್ಥ ನಗರ, ನರಸಿಂಹರಾಜ ಸಂಚಾರ ಠಾಣೆ, ನಗರ ಸಂಚಾರ ಎಸಿಪಿ ಕಚೇರಿ, ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿನ ಆಟೊಮೇಷನ್‌ ಕೇಂದ್ರಗಳಲ್ಲಿ ಮುಂಜಾನೆಯಿಂದ ರಾತ್ರಿ 11ರವರೆಗೆ ಅವಕಾಶ ನೀಡಲಾಗಿತ್ತು. ಕೊನೆಯ ದಿನವಾದ ಫೆ.11ರಂದಿ ಅತಿ ಹೆಚ್ಚಿನ ದಂಡದ ಮೊತ್ತ ಪಾವತಿಯಾಗಿದೆ.

ADVERTISEMENT

ಈ ಅವಧಿಯಲ್ಲಿ ₹ 71.74 ಕೋಟಿ ದಂಡ ಸಂಗ್ರಹಿಸುವ ಉದ್ದೇಶವನ್ನು ನಗರ ಪೊಲೀಸರು ಹೊಂದಿದ್ದರು. ಆದರೆ, ಅವರ ನಿರೀಕ್ಷೆಗೆ ತಕ್ಕಂತೆ ಪಾವತಿಯಾಗಿಲ್ಲ. ಸಾರ್ವಜನಿಕರು ಇನ್ಮುಂದೆ, ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ಪೂರ್ಣ ದಂಡವನ್ನೇ ಪಾವತಿಸಬೇಕಾಗುತ್ತದೆ. ಇನ್ನೂ ₹ 118 ಕೋಟಿ ದಂಡ ಪಾವತಿಸುವುದು ಬಾಕಿ ಇದೆ ಎಂದು ಮೂಲಗಳು ಮಾಹಿತಿ ನೀಡಿವೆ.

ವಿಲೇವಾರಿಯಾದ ಪ್ರಕರಣಗಳ ವಿವರ

ದಿನಾಂಕ;ಪ್ರಕರಣ;ಪಾವತಿಯಾದ ದಂಡ (₹ಗಳಲ್ಲಿ)

ಫೆ.3;1,644;3,40,000

ಫೆ.4;22,691;48,27,050

ಫೆ.5;13,854;29,28,900

ಫೆ.6;30,639;64,48,400

ಫೆ.7;32,251;67,52,000

ಫೆ.8;39,128;80,58,400

ಫೆ.9;60,109;1,22,54,150

ಫೆ.10;1,06,677;2,18,83,750

ಫೆ.11;1,91,272;5,95,66,000

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.