ADVERTISEMENT

ಕಬಿನಿ ಜಲಾಶಯದಿಂದ 12,500 ಕ್ಯುಸೆಕ್‌ ನೀರು ಹೊರಕ್ಕೆ

ಜಲಾಶಯಕ್ಕೆ ನೀರಿನ ಒಳಹರಿವು ಹೆಚ್ಚಳ; ಜನರು ಎಚ್ಚರಿಕೆ ವಹಿಸಲು ಮನವಿ

​ಪ್ರಜಾವಾಣಿ ವಾರ್ತೆ
Published 16 ಜುಲೈ 2021, 6:37 IST
Last Updated 16 ಜುಲೈ 2021, 6:37 IST
ಎಚ್.ಡಿ.ಕೋಟೆ ತಾಲ್ಲೂಕಿನ ಕಬಿನಿ ಜಲಾಶಯದಿಂದ 12,500 ಕ್ಯುಸೆಕ್‌ ನೀರನ್ನು ಹೊರಬಿಡಲಾಗಿದೆ
ಎಚ್.ಡಿ.ಕೋಟೆ ತಾಲ್ಲೂಕಿನ ಕಬಿನಿ ಜಲಾಶಯದಿಂದ 12,500 ಕ್ಯುಸೆಕ್‌ ನೀರನ್ನು ಹೊರಬಿಡಲಾಗಿದೆ   

ಎಚ್.ಡಿ.ಕೋಟೆ: ತಾಲ್ಲೂಕಿನ ಬೀಚನಹಳ್ಳಿ ಗ್ರಾಮದಲ್ಲಿರುವ ಕಬಿನಿ ಜಲಾಶಯಕ್ಕೆ ನೀರಿನ ಒಳಹರಿವು ಹೆಚ್ಚಾಗಿದ್ದು, ಇದೇ ಮೊದಲ ಬಾರಿಗೆ 12,500 ಕ್ಯುಸೆಕ್‌ ನೀರನ್ನು ಹೊರಬಿಡಲಾಗಿದೆ.

ಜಲಾಶಯದ ನೀರಿನ ಮಟ್ಟ 2,284 ಅಡಿ ಇದ್ದು, 2,280 ಅಡಿಯಷ್ಟು ಭರ್ತಿಯಾಗಿದೆ. ಗರಿಷ್ಠ ಮಟ್ಟ ತಲುಪಲು ಕೇವಲ 4 ಅಡಿ ಬಾಕಿ ಇದೆ. ಒಳಹರಿವು 18 ಸಾವಿರ ಕ್ಯುಸೆಕ್‌ ಇದ್ದು, ಶುಕ್ರವಾರ ಬೆಳಿಗ್ಗೆ ವೇಳೆಗೆ ಜಲಾಶಯ ಭರ್ತಿಯಾಗುವ ನಿರೀಕ್ಷೆ ಇದೆ.

ಕೇರಳದಲ್ಲಿ ಮುಂದಿನ 5 ದಿನಗಳವರೆಗೆ ಧಾರಾಕಾರ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ. ಹೀಗಾಗಿ, ಜಲಾಶಯದ ಹೊರಹರಿವು ಮತ್ತಷ್ಟು ಹೆಚ್ಚಲಿದ್ದು, ನದಿ ಪಾತ್ರದ ಜನರು ಸೂಕ್ತ ಸ್ಥಳಗಳಿಗೆ ತೆರಳಬೇಕು ಎಂದು ತಹಶೀಲ್ದಾರ್‌ ಎಸ್.ಎನ್.ನರಗುಂದ ಗುರುವಾರ ಮನವಿ ಮಾಡಿದ್ದಾರೆ.

ADVERTISEMENT

ಈ ಸಂಬಂಧ ಮುನ್ನೆಚ್ಚರಿಕೆ ಕ್ರಮ ವಹಿಸುವಂತೆ ಕಂದಾಯ ಅಧಿಕಾರಿಗಳು, ಗ್ರಾಮ ಲೆಕ್ಕಿಗರು, ಗ್ರಾಮ ಸಹಾಯಕರು, ಎಚ್.ಡಿ.ಕೋಟೆ ಮತ್ತು ಸರಗೂರು ತಾಲ್ಲೂಕು ಪಂಚಾಯಿತಿಯ ಇಒಗಳಿಗೆ, ಪೊಲೀಸ್‌ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಕಬಿನಿ ಜಲಾಶಯದ ಎಇಇ ಜನಾರ್ದನ್‌ ಮಾತನಾಡಿ, ‘4 ಕ್ರಸ್ಟ್‌ ಗೇಟ್‌ ಮೂಲಕ ನೀರನ್ನು ಹರಿಸಲಾಗುತ್ತಿದೆ. ನದಿ ಪಾತ್ರದ ಜನರು ಎಚ್ಚರಿಕೆ ವಹಿಸಬೇಕು’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.