ADVERTISEMENT

ನಕಲಿ ದಾಖಲೆ ಸೃಷ್ಟಿಸಿ ₹14 ಕೋಟಿ ಸಾಲ!

ನಾಲ್ವರ ವಿರುದ್ಧ ಪ್ರಕರಣ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2022, 14:32 IST
Last Updated 9 ನವೆಂಬರ್ 2022, 14:32 IST
ಮೈಸೂರಿನ ವಿಶ್ವೇಶ್ವರ ನಗರದ 2ನೇ ಹಂತದಲ್ಲಿರುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ (ಮುಡಾ) ಸೇರಿದ ಆಸ್ತಿ
ಮೈಸೂರಿನ ವಿಶ್ವೇಶ್ವರ ನಗರದ 2ನೇ ಹಂತದಲ್ಲಿರುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ (ಮುಡಾ) ಸೇರಿದ ಆಸ್ತಿ   

ಮೈಸೂರು: ‘ಇಲ್ಲಿನ ವಿಶ್ವೇಶ್ವರ ನಗರದ 2ನೇ ಹಂತದಲ್ಲಿರುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ (ಮುಡಾ) ಸೇರಿದ ಆಸ್ತಿಗೆ ನಕಲಿ ದಾಖಲೆ ಸೃಷ್ಟಿಸಿ, ಬ್ಯಾಂಕ್‌ನಲ್ಲಿ ಅಡವಿಟ್ಟು ನಾಲ್ವರು ಬಿಲ್ಡರ್‌ಗಳು ಸಾಲ ಪಡೆದಿದ್ದಾರೆ’ ಎಂದು ಮುಡಾ 1ನೇ ವಲಯದ ವಿಶೇಷ ತಹಶೀಲ್ದಾರ್‌ ಮಂಜುನಾಥ್‌ ಆರ್‌. ವಿದ್ಯಾರಣ್ಯಪುರಂ ಪೊಲೀಸ್‌ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

‘ಆರ್‌ಜೆಡಿಜೆ ಪ್ರಾಪರ್ಟಿಸ್‌ ಪಾಲುದಾರರಾದ ಎಲ್‌.ಜಗದೀಶ್‌, ಶಶಿ, ಎಂ.ನಂಜಪ್ಪ, ಲಕ್ಷ್ಮೇಗೌಡ ಸೇರಿಕೊಂಡು, ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಬ್ಯಾಂಕ್‌ ಆಫ್‌ ಬರೋಡಾದ ಹಾಸನ ಶಾಖೆಯಲ್ಲಿ ಅಡಮಾನವಿಟ್ಟು, ಸಾಲ ಪಡೆದಿದ್ದಾರೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಬಯಲಿಗೆ ಬಂದಿದ್ದು ಹೇಗೆ: 36/ಎಗೆ ನಂಬರಿನ 200x285 ಅಡಿ ವಿಸ್ತೀರ್ಣದ ಮುಡಾಕ್ಕೆ ಸೇರಿದ ನಿವೇಶನವನ್ನು ಯಾರಿಗೂ ಮಂಜೂರು ಮಾಡಿರಲಿಲ್ಲ. ಈ ವಿಚಾರ ತಿಳಿದ ನಾಲ್ವರು ನಕಲಿ ದಾಖಲೆ ಸೃಷ್ಟಿಸಿ ಬ್ಯಾಂಕ್‌ನಿಂದ ₹14 ಕೋಟಿ ಸಾಲ ಪಡೆದಿದ್ದರು. ಆರ್‌ಜೆಡಿಜೆ ಪಾಲುದಾರ ಎಂ.ನಂಜಪ್ಪ ಎಂಬುವರು ಸ್ನೇಹಿತನ ಮಗ ಹೇಮಂತರಾಜು ಅವರಿಗೆ ದಾನಪತ್ರ ಮಾಡಿಕೊಟ್ಟಿದ್ದರು. ಈ ಬಗ್ಗೆ ಮಾಹಿತಿ ಹಕ್ಕು ಕಾರ್ಯಕರ್ತ ಬಿ.ಎನ್‌.ನಾಗೇಂದ್ರ ದಾಖಲೆಗಳ ಸಮೇತ ಮುಡಾ ಆಯುಕ್ತ ಜಿ.ಟಿ.ದಿನೇಶ್‌ಕುಮಾರ್‌ ಅವರಿಗೆ ದೂರು ನೀಡಿದ್ದರು. ನಂತರ ಮುಡಾ ಕಾರ್ಯದರ್ಶಿ ವೆಂಕಟರಾಜು ದಾಖಲೆ ಪರಿಶೀಲಿಸಿದ ವೇಳೆ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದೆ.

ADVERTISEMENT

‘ಮುಡಾದ ಕೆಲವು ಸಿಬ್ಬಂದಿ ನಕಲಿ ಕ್ರಯಪತ್ರ ಸೃಷ್ಟಿಗೆ ಸಹಕರಿಸಿದ್ದಾರೆ. ಮೈಸೂರಿನ ಆಸ್ತಿಗೆ ಹಾಸನದಲ್ಲಿರುವ ಬ್ಯಾಂಕ್‌ ಶಾಖೆಯಲ್ಲಿ ಸಾಲ ಕೊಟ್ಟಿದ್ದು ಹೇಗೆ? 2013ರಲ್ಲೇ ದೂರು ಕೊಟ್ಟಿದ್ದರೂ, ಅಧಿಕಾರಿಗಳು ಏಕೆ ಕ್ರಮ ಕೈಗೊಳ್ಳಲಿಲ್ಲ’ ಎಂದು ದೂರುದಾರರೂ ಆಗಿರುವ ಆರ್‌ಟಿಐ ಕಾರ್ಯಕರ್ತಬಿ.ಎನ್‌. ನಾಗೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.