ADVERTISEMENT

ಚಾಮರಾಜನಗರಕ್ಕೆ 145 ಸಿಲಿಂಡರ್ ತಲುಪಿಸಿದ್ದೇವೆ: ‍ಪ್ರತಾ‍ಪ‍ ಸಿಂಹ

​ಪ್ರಜಾವಾಣಿ ವಾರ್ತೆ
Published 3 ಮೇ 2021, 8:26 IST
Last Updated 3 ಮೇ 2021, 8:26 IST
ಮೈಸೂರು ಸಂಸದ ಪ್ರತಾಪ ಸಿಂಹ
ಮೈಸೂರು ಸಂಸದ ಪ್ರತಾಪ ಸಿಂಹ   

ಮೈಸೂರು: ‘ಭಾನುವಾರ ರಾತ್ರಿಯಿಂದ ಸೋಮವಾರ ಬೆಳಗಿನವರೆಗೆ ಚಾಮರಾಜನಗರಕ್ಕೆ ಮೈಸೂರಿನಿಂದ ಸುಮಾರು 145 ಆಕ್ಸಿಜನ್‌ ಸಿಲಿಂಡರ್‌ಗಳನ್ನು ತಲುಪಿಸಿದ್ದೇವೆ. ಆದರೂ ಪರಿಸ್ಥಿತಿ ನಿಭಾಯಿಸುವಲ್ಲಿ ಲೋಪ ಉಂಟಾಗಿ ಇಷ್ಟೊಂದು ಜನರು ಪ್ರಾಣ ಕಳೆದುಕೊಂಡಿರುವುದು ನಿಜಕ್ಕೂ ದುರ್ದೈವದ ಸಂಗತಿ. ಚಾಮರಾಜನಗರ ಜಿಲ್ಲಾಡಳಿತ ಇನ್ನಷ್ಟು ಜಾಗರೂಕತೆ ವಹಿಸಬೇಕಾಗಿತ್ತು’ ಎಂದು ಮೈಸೂರು ಸಂಸದ ಪ್ರತಾಪ ಸಿಂಹ ಹೇಳಿದ್ದಾರೆ.

’ಚಾಮರಾಜನಗರದಲ್ಲಿ ಆಕ್ಸಿಜನ್ ಕೊರತೆ ಉಂಟಾಗಿದ್ದು, ಬಳ್ಳಾರಿಯಿಂದ ಪೂರೈಕೆಯಾಗುವುದು ಸ್ವಲ್ಪ ತಡವಾಗುತ್ತದೆ. ಆದ್ದರಿಂದ ಮೈಸೂರಿನಿಂದ ತುರ್ತಾಗಿ ಒಂದಷ್ಟು ಅಕ್ಸಿಜನ್‌ ಸಿಲಿಂಡರ್‌ಗಳು ಬೇಕು ಎಂಬ ಮಾಹಿತಿಯನ್ನು ಭಾನುವಾರ ರಾತ್ರಿ ಮಾಧ್ಯಮದವರು ನನ್ನ ಗಮನಕ್ಕೆ ತಂದರು’ ಎಂದು ತಿಳಿಸಿದರು.

‘ನಾನು ತಕ್ಷಣ ಚಾಮರಾಜನಗರ ಜಿಲ್ಲಾಧಿಕಾರಿಗೆ ಕರೆ ಮಾಡಿದರೂ ಅವರ ಸಂಪರ್ಕ ಸಾಧ್ಯವಾಗಲಿಲ್ಲ. ಆ ಬಳಿಕ ರಾತ್ರಿ 11.30ರ ವೇಳೆಗೆ ಅವರು ಕರೆ ಮಾಡಿ ಆಕ್ಸಿಜನ್‌ ಕೊರತೆಯ ಬಗ್ಗೆ ತಿಳಿಸಿದರು. ನಾನು ಕೂಡಲೇ ಮೈಸೂರು ಅಸಿಸ್ಟೆಂಟ್‌ ಡ್ರಗ್‌ ಕಂಟ್ರೋಲರ್‌ ಅವರನ್ನು ಸಂಪರ್ಕಿಸಿ ತುರ್ತಾಗಿ 50 ಸಿಲಿಂಡರ್‌ಗಳನ್ನು ಕಳುಹಿಸಿಕೊಡುವಂತೆ ಸೂಚಿಸಿದೆ. ರಾತ್ರಿಯೇ 15 ಸಿಲಿಂಡರ್‌ಗಳನ್ನು ಕಳುಹಿಸಿದ್ದು, ಆ ಬಳಿಕ ಬೆಳಗಿನ ಜಾವದವರೆಗೆ 145 ಸಿಲಿಂಡರ್‌ಗಳನ್ನು ಕಳುಹಿಸಿಕೊಟ್ಟಿದ್ದೇವೆ’ ಎಂದು ವಿವರಿಸಿದರು.

ADVERTISEMENT

‘ಚಾಮರಾಜನಗರದಲ್ಲಿ ಸಂಭವಿಸಿದ್ದ ಅದೇ ಘಟನೆ ಎರಡು ದಿನಗಳ ಹಿಂದೆ ಮೈಸೂರಿನಲ್ಲಿ ನಿರ್ಮಾಣವಾಗುವ ಆತಂಕ ಎದುರಾಗಿತ್ತು. ಆದರೆ ಜಿಲ್ಲಾ ಉಸ್ತುವಾರಿ ಸಚಿವರು ತಕ್ಷಣ ಕ್ರಮವಹಿಸಿದ್ದರಿಂದ ಸಮಸ್ಯೆ ಬಗೆಹರಿದಿತ್ತು. ಬೇರೆ ಜಿಲ್ಲೆಗಳಲ್ಲಿ ಇಂತಹ ಘಟನೆ ಸಂಭವಿಸದಂತೆ ಎಚ್ಚರವಹಿಸಬೇಕು. ಆಯಾ ಜಿಲ್ಲಾ ಉಸ್ತುವಾರಿ ಸಚಿವರು ಈ ಬಗ್ಗೆ ಸರ್ಕಾರದ ಗಮನಕ್ಕೆ ತಂದು ಅಗತ್ಯವಿರುವಷ್ಟು ಆಕ್ಸಿಜನ್‌ ಸಿಲಿಂಡರ್‌ಗಳನ್ನು ತರಿಸಿ ಇಟ್ಟುಕೊಳ್ಳಬೇಕು’ ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.