ADVERTISEMENT

ಮೈಸೂರ್ ಲಯನ್ಸ್‌ ಶಾಲೆಗೆ ₹15 ಲಕ್ಷ: ಶಾಸಕ ತನ್ವೀರ್‌ ಸೇಠ್

​ಪ್ರಜಾವಾಣಿ ವಾರ್ತೆ
Published 18 ಜನವರಿ 2025, 13:53 IST
Last Updated 18 ಜನವರಿ 2025, 13:53 IST
ಮೈಸೂರಿನ ಜಗನ್ಮೋಹನ ಅರಮನೆ ಸಭಾಂಗಣದಲ್ಲಿ ಶುಕ್ರವಾರ ನಡೆದ ಮೈಸೂರ್ ಲಯನ್ಸ್‌ ಶಾಲೆಯ ವಾರ್ಷಿಕೋತ್ಸವವನ್ನು ಶಾಸಕ ತನ್ವೀರ್‌ ಸೇಠ್ ಉದ್ಘಾಟಿಸಿದರು
ಮೈಸೂರಿನ ಜಗನ್ಮೋಹನ ಅರಮನೆ ಸಭಾಂಗಣದಲ್ಲಿ ಶುಕ್ರವಾರ ನಡೆದ ಮೈಸೂರ್ ಲಯನ್ಸ್‌ ಶಾಲೆಯ ವಾರ್ಷಿಕೋತ್ಸವವನ್ನು ಶಾಸಕ ತನ್ವೀರ್‌ ಸೇಠ್ ಉದ್ಘಾಟಿಸಿದರು   

ಮೈಸೂರು: ‘ಇಲ್ಲಿನ ಬನ್ನಿಮಂಟಪದಲ್ಲಿರುವ ಮೈಸೂರ್ ಲಯನ್ಸ್‌ ಶಾಲೆಯ ಅಭಿವೃದ್ಧಿಗೆ ಹಾಗೂ ಶೌಚಾಲಯಗಳ ನಿರ್ಮಾಣಕ್ಕೆ ಶಾಸಕರ ನಿಧಿಯಿಂದ ₹15 ಲಕ್ಷ ಒದಗಿಸುತ್ತೇನೆ’ ಎಂದು ಶಾಸಕ ತನ್ವೀರ್‌ ಸೇಠ್ ಭರವಸೆ ನೀಡಿದರು.

ನಗರದ ಜಗನ್ಮೋಹನ ಅರಮನೆ ಸಭಾಂಗಣದಲ್ಲಿ ಶನಿವಾರ ನಡೆದ ಮೈಸೂರ್ ಲಯನ್ಸ್ ಶಾಲೆಯ 43ನೇ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಲಯನ್ಸ್‌ ಸೇವಾ ಮನೋಭಾವದ ಸಂಸ್ಥೆಯಾಗಿ ಹಲವು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದೆ. ಈ ಸಂಸ್ಥೆಯಲ್ಲಿ ನಾನೂ ಸದಸ್ಯನಾಗಿರುವುದು ಹೆಮ್ಮೆಯ ವಿಷಯ. ಶಾಲೆ ನಡೆಸುವುದು ಸುಲಭವಲ್ಲ. ಹೀಗಿರುವಾಗ, ಲಯನ್ಸ್‌ ಶಾಲೆಯು 43 ವರ್ಷಗಳಿಂದ ತುಂಬಾ ಕಡಿಮೆ ಶುಲ್ಕದಲ್ಲಿ ಉತ್ತಮ ವಿದ್ಯಾಭ್ಯಾಸ ನೀಡುತ್ತಿದೆ. ನಾನು ಪ್ರತಿನಿಧಿಸುವ ನರಸಿಂಹರಾಜ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಈ ಶಾಲೆ ಕಳೆದ ಸಾಲಿನ ಎಸ್‌ಎಸ್ಎಲ್‌ಸಿ ಪರೀಕ್ಷೆಯಲ್ಲಿ ಶೇ 100ರಷ್ಟು ಫಲಿತಾಂಶ ಗಳಿಸಿದೆ. ಇದು ಅಭಿನಂದನಾರ್ಹ’ ಎಂದರು.

ADVERTISEMENT

‘ಸಂಸ್ಥೆಯ ಖಜಾಂಚಿ ಲೋಕೇಶ್ ಪತ್ನಿ ಲೀನಾ ಸವಿನೆನಪಿನಲ್ಲಿ ಕಳೆದ ಸಾಲಿನಿಂದ ಎಲ್ಲಾ ತರಗತಿಯ ಟಾಪರ್‌ಗಳಿಗೆ ನಗದು ಹಾಗೂ ಪಾರಿತೋಷಕ ನೀಡಿ ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ’ ಎಂದು ಹೇಳಿದರು.

ಡಿಡಿಪಿಐ ಎಸ್.ಟಿ. ಜವರೇಗೌಡ, ಉತ್ತರ ವಲಯ ಬಿಇಒ ರೇವಣ್ಣ, ಸಂಸ್ಥೆಯ ಅಧ್ಯಕ್ಷ ಶಿವಕುಮಾರ್, ಕಾರ್ಯದರ್ಶಿ ಸಿ.ಮೋಹನ್ ಕುಮಾರ್, ಖಜಾಂಚಿ ಜೆ. ಲೋಕೇಶ್, ಲಯನ್ಸ್ ಕ್ಲಬ್ ಆಫ್ ಮೈಸೂರ್ ಅಧ್ಯಕ್ಷ ಬಿ.ಶಿವಣ್ಣ, ಪ್ರಾಂತೀಯ ಅಧ್ಯಕ್ಷ ಬಿ.ಎಲ್. ಗಿರೀಶ್, ಶಾಲೆಯ ಮುಖ್ಯ ಶಿಕ್ಷಕಿ ಹೇಮಾವತಿ ಉಪಸ್ಥಿತರಿದ್ದರು.

ನಂತರ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.