ಎಚ್.ಡಿ.ಕೋಟೆ: ಎಚ್.ಡಿ.ಕೋಟೆ ಮತ್ತು ಸರಗೂರು ತಾಲ್ಲೂಕು ಕಾಳಿದಾಸ ಕುರುಬ ಜನಾಂಗದ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸ್ಥಾನಕ್ಕೆ ಎರಡು ಬಣಗಳ ನಡುವೆ ಪೈಪೋಟಿ ನಡೆಯಿತು.
ಹಾಲಿ ಅಧ್ಯಕ್ಷ ಮೊಳೆಯೂರು ಆನಂದ ಅವರು ಸಂಘದ ಕಾರ್ಯ ಚಟುವಟಿಕೆಗಳನ್ನು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ ಎಂದು ಆರೋಪಿಸಿ ಸಂಘದ ಉಪಾಧ್ಯಕ್ಷ ವೀರೇಗೌಡ, ಕಾರ್ಯದರ್ಶಿ ಚಿಕ್ಕಣ್ಣ, ಜಿಲ್ಲಾಧ್ಯಕ್ಷ ಶಿವಪ್ಪ ಕೋಟೆ ನೇತೃತ್ವದಲ್ಲಿ ಕನಕ ಭವನದಲ್ಲಿ ಮಂಗಳವಾರ ವಿಶೇಷ ಸರ್ವ ಸದಸ್ಯರ ಸಭೆಯನ್ನು ಕರೆದಿದ್ದರು.
ಎರಡು ಗುಂಪುಗಳ ನಡುವೆ ಘರ್ಷಣೆ ಉಂಟಾಗಬಹುದು ಎಂಬ ಉದ್ದೇಶದಿಂದ ನೂರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿತ್ತು.
‘ವಿಶೇಷ ಸಭೆ ನಡೆಸಬಾರದು’ ಎಂದು ಮೊಳೆಯೂರು ಆನಂದ ಅವರು ಭವನಕ್ಕೆ ಬೀಗ ಹಾಕಿದ್ದರು.
ಭವನದ ಮುಂಭಾಗ ವಿಶೇಷ ಸಭೆ ನಡೆಸಲು ಅವಕಾಶ ಮಾಡಿಕೊಡುವಂತೆ ಉಪಾಧ್ಯಕ್ಷ ವೀರೇಗೌಡ ಅವರ ಬಣವು ಡಿವೈಎಸ್ಪಿ ಗೋಪಾಲಕೃಷ್ಣ ಅವರಿಗೆ ಮನವಿ ಮಾಡಿತ್ತು.
ಮಹಾಸಭೆಯನ್ನು ಕನಕ ಭವನದ ರಸ್ತೆ ಬದಿಯಲ್ಲಿ ಪ್ರಾರಂಭಿಸಲಾಯಿತು. ಕಾರ್ಯದರ್ಶಿ ಚಿಕ್ಕಣ್ಣ ಸಭೆಯ ನಡವಳಿಯನ್ನು ಓದಲು ಮುಂದಾದಾಗ ಮೊಳೆಯೂರು ಆನಂದ್ ಬಣವು ಸಭೆ ನಡೆಸಲು ಅಡ್ಡಿಪಡಿಸಿತು. ಆದರೂ ಸಭೆಯನ್ನು ನಡೆಸಿ, ‘ಮೊಳೆಯೂರು ಆನಂದ ಅವರು ಯಾವುದೇ ಸಭೆಗಳನ್ನು ನಡೆಸದೆ ಸಂಘದ ಲೆಕ್ಕಾಚಾರಗಳನ್ನು ಕೊಟ್ಟಿಲ್ಲ. ಸರ್ಕಾರದ ಅನುದಾನ ಹಾಗೂ ಭವನದ ಆದಾಯವನ್ನು ದುರುಪಯೋಗ ಮಾಡಿಕೊಂಡಿದ್ದು, ಅಧ್ಯಕ್ಷ ಸ್ಥಾನದಿಂದ ವಜಾ ಮಾಡಲಾಗುವುದು’ ಎಂದು ಘೋಷಿಸಿದರು.
‘ನೂತನ ಅಧ್ಯಕ್ಷರಾಗಿ ಕೆ.ಎಸ್. ಮಾಲೇಗೌಡ ಅವರನ್ನು ಆಯ್ಕೆ ಮಾಡಲಾಗಿದೆ’ ಎಂದು ಘೋಷಣೆ ಮಾಡಿದರು.
ಮೊಳೆಯೂರು ಆನಂದ ಮಾತನಾಡಿ, ‘ಈ ದಿನ ನಡೆದಿರುವ ಸರ್ವ ಸದಸ್ಯರ ಸಭೆ ಅನುರ್ಜಿತವಾಗಿದೆ. ತಮಗೆ ಬೇಕಾದ ಸದಸ್ಯರಿಗೆ ಆಹ್ವಾನ ನೀಡಿ ಸಭೆ ನಡೆಸಿದ್ದಾರೆ. ಇದು ಸಂಘದ ನಿಯಮಾವಳಿಗೆ ವಿರುದ್ಧವಾಗಿದೆ’ ಎಂದರು.
ಪ್ರಧಾನ ಕಾರ್ಯದರ್ಶಿ ಶಿರಮಹಳ್ಳಿ ಚಿಕ್ಕಣ್ಣ, ಖಜಾಂಚಿ ಶಿಂಡೇನಹಳ್ಳಿ ಯತೀಶ್ ಕುಮಾರ್, ನಾಗೇಗೌಡ, ಕುಮಾರೇಗೌಡ, ರಾಜೇಗೌಡ, ಬೈಪಾಸ್ ಮಂಜುನಾಥ್, ಶಿವಮಲ್ಲಪ್ಪ, ಮಹದೇವ್, ಕುಮಾರ್, ಬೀರೇಗೌಡ, ಮಹದೇವ್, ಚನ್ನೇಗೌಡ, ಚಂದ್ರೇಗೌಡ, ಸ್ವಾಮಿಗೌಡ, ರಾಜೇಗೌಡ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.