ADVERTISEMENT

ಚೆಸ್‌: ವಿವೇಕ್‌ ಭಾಸ್ಕರ್, ಅಂಕಿತ್ ಚಾಂಪಿಯನ್ಸ್‌

​ಪ್ರಜಾವಾಣಿ ವಾರ್ತೆ
Published 9 ಜನವರಿ 2025, 0:33 IST
Last Updated 9 ಜನವರಿ 2025, 0:33 IST
<div class="paragraphs"><p>ಮೈಸೂರು ಜಿಲ್ಲಾ ಕಿವುಡರ ಸಂಘ ಆಯೋಜಿಸಿದ್ದ ಶ್ರವಣದೋಷವುಳ್ಳವರ 25ನೇ ರಾಷ್ಟ್ರೀಯ ಚೆಸ್ ಚಾಂಪಿಯನ್‌ಷಿಪ್‌ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಪಡೆದ ವಿವೇಕ್ ಭಾಸ್ಕರ್ ವಾಟ್ಪಡೆ (ಮಹಾರಾಷ್ಟ್ರ), ಕೆ. ಯಶಸ್ವೀ (ಕರ್ನಾಟಕ), ಅಂಕಿತ್ ಗಂಗೂಲಿ (ಪಶ್ಚಿಮ ಬಂಗಾಳ) ಹಾಗೂ ವೈ.ಎಸ್. ಶ್ರೇಯ (ಕರ್ನಾಟಕ). </p></div>

ಮೈಸೂರು ಜಿಲ್ಲಾ ಕಿವುಡರ ಸಂಘ ಆಯೋಜಿಸಿದ್ದ ಶ್ರವಣದೋಷವುಳ್ಳವರ 25ನೇ ರಾಷ್ಟ್ರೀಯ ಚೆಸ್ ಚಾಂಪಿಯನ್‌ಷಿಪ್‌ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಪಡೆದ ವಿವೇಕ್ ಭಾಸ್ಕರ್ ವಾಟ್ಪಡೆ (ಮಹಾರಾಷ್ಟ್ರ), ಕೆ. ಯಶಸ್ವೀ (ಕರ್ನಾಟಕ), ಅಂಕಿತ್ ಗಂಗೂಲಿ (ಪಶ್ಚಿಮ ಬಂಗಾಳ) ಹಾಗೂ ವೈ.ಎಸ್. ಶ್ರೇಯ (ಕರ್ನಾಟಕ).

   

ಪ್ರಜಾವಾಣಿ ಚಿತ್ರ/ಅನೂಪ್ ರಾಘ.ಟಿ.

ಮೈಸೂರು: ಮಹಾರಾಷ್ಟ್ರದ ವಿವೇಕ್‌ ಭಾಸ್ಕರ್ ವಾಟಪಾಡೆ ಇಲ್ಲಿನ ನಿತ್ಯಾನಂದ ಕಲ್ಯಾಣ ಮಂಟಪದಲ್ಲಿ ನಡೆದ ಶ್ರವಣದೋಷವುಳ್ಳವರ 25ನೇ ರಾಷ್ಟ್ರೀಯ ಚೆಸ್‌ ಚಾಂಪಿಯನ್‌ಷಿಪ್‌ನ ಮುಕ್ತ ವಿಭಾಗದಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿದರು. ಜೂನಿಯರ್‌ ವಿಭಾಗದಲ್ಲಿ ಪಶ್ಚಿಮ ಬಂಗಾಳದ ಅಂಕಿತ್‌ ಗಂಗೂಲಿ ಪ್ರಶಸ್ತಿ ತಮ್ಮದಾಗಿಸಿಕೊಂಡರು.

ADVERTISEMENT

ಒಂಬತ್ತು ಸುತ್ತುಗಳ ಹಣಾಹಣಿಯಲ್ಲಿ ವಿವೇಕ್ ಭಾಸ್ಕರ್ ಎಂಟು ಅಂಕಗಳೊಂದಿಗೆ ಅಗ್ರ ಸ್ಥಾನಕ್ಕೇರಿದರು. ಬುಧವಾರ ಮಧ್ಯಾಹ್ನ ನಡೆದ ಅಂತಿಮ ಸುತ್ತಿನ ಸ್ಪರ್ಧೆಯಲ್ಲಿ ಆಂಧ್ರಪ್ರದೇಶದ ನಾಗವೆಂಕಟ ಶ್ರೀರಾಮ್‌ ಎದುರು ಕಪ್ಪು ಕಾಯಿಗಳೊಂದಿಗೆ ಕಣಕ್ಕೆ ಇಳಿದಿದ್ದ ಅವರು ಜಯಗಳಿಸಿ ಚಾಂಪಿಯನ್‌ ಪಟ್ಟ ಖಾತ್ರಿಪಡಿಸಿಕೊಂಡರು. ಪ್ರಶಸ್ತಿಯೊಟ್ಟಿಗೆ ₹25 ಸಾವಿರ ನಗದು ಬಹುಮಾನ ತಮ್ಮದಾಗಿಸಿಕೊಂಡರು.

25 ವರ್ಷ ವಯಸ್ಸಿನ ವಿವೇಕ್‌, ಕಳೆದ ಡಿಸೆಂಬರ್‌ನಲ್ಲಿ ಮಲೇಷ್ಯಾದ ಕೌಲಾಲಂಪುರದಲ್ಲಿ ನಡೆದಿದ್ದ 10ನೇ ಏಷ್ಯಾ ಫೆಸಿಫಿಕ್‌ ಶ್ರವಣದೋಷವುಳ್ಳವರ ಕ್ರೀಡಾಕೂಟದ ಚೆಸ್‌ ವಿಭಾಗದಲ್ಲಿ ಮಿಶ್ರ ರ್‍ಯಾಪಿಡ್‌ ಸ್ಪರ್ಧೆಯಲ್ಲಿ ಭಾರತಕ್ಕೆ ಕಂಚಿನ ಪದಕ ತಂದುಕೊಟ್ಟಿದ್ದರು.

ಮುಕ್ತ ವಿಭಾಗದಲ್ಲಿ ಮಹಾರಾಷ್ಟ್ರದವರೇ ಆದ ದೇವೇಂದ್ರ ಶ್ರೀಹರಿ ವೈದ್ಯ 7.5 ಅಂಕಗಳೊಂದಿಗೆ ರನ್ನರ್ ಅಪ್ ಆದರು. ಅಂತಿಮ ಸುತ್ತಿನಲ್ಲಿ ಅವರು ಒಡಿಶಾದ ನಿಪುಣ್‌ ಆದಿತ್ಯ ಮೊಹಾಂತಿ ಎದುರು ಡ್ರಾ ಮಾಡಿಕೊಂಡರು.

ಯಶಸ್ವಿಗೆ ಪ್ರಶಸ್ತಿ:


ಮುಕ್ತ ವಿಭಾಗದಲ್ಲಿ ಪುರುಷರಿಗೆ ಸ್ಪರ್ಧೆ ಒಡ್ಡಿದ್ದ ಮಹಿಳಾ ಪಟುಗಳಿಗೆ ಪ್ರತ್ಯೇಕವಾಗಿ ಪ್ರಶಸ್ತಿ ನೀಡಲಾಯಿತು. ಒಟ್ಟು 6.5 ಅಂಕಗಳೊಂದಿಗೆ ಕರ್ನಾಟಕದ ಕೆ. ಯಶಸ್ವಿ ಮೊದಲ ಸ್ಥಾನ ಪಡೆದು ₹25 ಸಾವಿರ ನಗದು ಜೊತೆ ಟ್ರೋಫಿ ಎತ್ತಿ ಹಿಡಿದರು. ಕರ್ನಾಟಕದವರೇ ಆದ ಅಂಬಿಕಾ ಮಸಗಿ (6 ಅಂಕ) ದ್ವಿತೀಯ ಹಾಗೂ ಪಂಜಾಬ್‌ನ ಮಲ್ಲಿಕಾ ಹಂಡ ತೃತೀಯ ಸ್ಥಾನ ಪಡೆದರು.

ಜೂನಿಯರ್ ವಿಭಾಗದಲ್ಲಿ (18 ವರ್ಷ ಒಳಗಿನವರು) ಪಶ್ಚಿಮ ಬಂಗಾಳದ ಅಂಕಿತ್‌ ಗಂಗೂಲಿ ಚಾಂಪಿಯನ್ ಕಿರೀಟ ಧರಿಸಿದರು. ಏಳು ಸುತ್ತುಗಳ ಹಣಾಹಣಿಯಲ್ಲಿ ಎಲ್ಲ ಪಂದ್ಯಗಳನ್ನೂ ಗೆದ್ದು ಅಮೋಘ ಸಾಧನೆ ದಾಖಲಿಸಿದರು.

ಜೂನಿಯರ್‌ ಬಾಲಕರ ವಿಭಾಗದಲ್ಲಿ ಪುದುಚೇರಿಯ ಎ.ರೋಷನ್‌ ( 5 ಅಂಕ) ದ್ವಿತೀಯ ಹಾಗೂ ಕರ್ನಾಟಕದ ಎಸ್.ಅನುಭವ್ ( 5 ಅಂಕ ) ತೃತೀಯ ಸ್ಥಾನ ಪಡೆದರು.

ಜೂನಿಯರ್‌ ವಿಭಾಗದ ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ನೀಡಿದ ಕರ್ನಾಟಕದ ವೈ.ಎಸ್. ಶ್ರೇಯಾ 6 ಅಂಕಗಳೊಂದಿಗೆ ಬಾಲಕಿಯರ ವಿಭಾಗದಲ್ಲಿ ಮೊದಲ ಸ್ಥಾನ ತಮ್ಮದಾಗಿಸಿಕೊಂಡರು. ಕೇರಳದ ನಿಖಿತಾ ಸುಸಾನ್ ಮ್ಯಾಥ್ಯು (4.5 ಅಂಕ) ಎರಡನೇ ಮತ್ತು ಹರಿಯಾಣದ ಛಾವಿ ಸಿಂಗ್‌ (4 ಅಂಕ) ಮೂರನೇ ಸ್ಥಾನ ಪಡೆದರು.

ಮೈಸೂರು ಜಿಲ್ಲಾ ಕಿವುಡರ ಸಂಘವು ಚಾಂಪಿಯನ್‌ಷಿಪ್‌ನ ಆತಿಥ್ಯ ವಹಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.