ADVERTISEMENT

ಮೈಸೂರು ಮಹಾನಗರ ಪಾಲಿಕೆಯ ಮೇಯರ್‌ ‘ಮೈತ್ರಿ’: 3 ಪಕ್ಷಗಳ ಆಂತರಿಕ ಬೇಗುದಿ ಬೀದಿಗೆ

ಪಕ್ಷದೊಳಗಿನ ಭಿನ್ನಮತ ಪರಾಕಾಷ್ಠೆಗೆ

ಡಿ.ಬಿ, ನಾಗರಾಜ
Published 28 ಫೆಬ್ರುವರಿ 2021, 5:13 IST
Last Updated 28 ಫೆಬ್ರುವರಿ 2021, 5:13 IST

ಮೈಸೂರು: ಭಾರಿ ಕುತೂಹಲ ಕೆರಳಿಸಿದ್ದ ಮೈಸೂರು ಮಹಾನಗರ ಪಾಲಿಕೆಯಲ್ಲಿನ ‘ಮೈತ್ರಿ’; ಮೇಯರ್‌–ಉಪ ಮೇಯರ್‌ ಆಯ್ಕೆಯ ಬೆನ್ನಿಗೆ ಮೂರು ಪಕ್ಷದೊಳಗಿನ ಆಂತರಿಕ ಬೇಗುದಿಯನ್ನು ಪರಾಕಾಷ್ಠೆಗೆ ಕೊಂಡೊಯ್ದಿದೆ.

ಆಯಾ ಪಕ್ಷದೊಳಗೆ ಸೀಮಿತವಾಗಿದ್ದ ಬಣ ರಾಜಕಾರಣ, ಆಂತರಿಕ ಬೇಗುದಿ ಇದೀಗ ಬೀದಿಗೆ ಬಿದ್ದಿದೆ. ವರಿಷ್ಠರ ಅಂಗಳವನ್ನು ತಲುಪಿದ್ದರೂ; ಭಿನ್ನಮತದ ಆಸ್ಫೋಟ ಶಮನಗೊಳ್ಳುವ ಲಕ್ಷಣ ಗೋಚರಿಸುತ್ತಿಲ್ಲ. ದಿನದಿಂದ ದಿನಕ್ಕೆ ಆರೋಪ–ಪ್ರತ್ಯಾರೋಪ ತೀವ್ರ ಸ್ವರೂಪ ಪಡೆದಿವೆ.

ಹಾಲಿ ಶಾಸಕರ ವಿರುದ್ಧವೇ ಶಿಸ್ತು ಕ್ರಮ ತೆಗೆದುಕೊಳ್ಳಬೇಕು; ಪಕ್ಷದಿಂದ ಉಚ್ಚಾಟಿಸಬೇಕು ಎಂಬುದು ಕಾಂಗ್ರೆಸ್‌– ಜೆಡಿಎಸ್‌ನ ಎರಡನೇ ಹಂತದ ನಾಯಕರು, ಸ್ಥಳೀಯ ಸಂಸ್ಥೆಗಳ ಚುನಾಯಿತ ಜನಪ್ರತಿನಿಧಿಗಳಿಂದಲೇ ಪ್ರಬಲ ಹಕ್ಕೊತ್ತಾಯವಾಗಿ ಮೊಳಗುತ್ತಿದೆ. ಕಾಂಗ್ರೆಸ್‌ ಹೈಕಮಾಂಡ್‌ಗೆ ಈ ಬೇಡಿಕೆ ನುಂಗಲಾರದ ಬಿಸಿ ತುಪ್ಪವಾದರೆ, ಜೆಡಿಎಸ್ ಪಾಲಿಗೆ ವರದಾನವಾಗಿದೆ.

ADVERTISEMENT

ಕಾಂಗ್ರೆಸ್‌–ಜೆಡಿಎಸ್‌ನ ಮುಸ್ಲಿಂ ಸಮುದಾಯದ ಮುಖಂಡರು, ಪಾಲಿಕೆ ಸದಸ್ಯರ ನಡುವೆ ಪರಸ್ಪರ ಆರೋಪ–ಪ್ರತ್ಯಾರೋಪ ನಡೆದಿದೆ. ನಾಯಕರನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ಪರಸ್ಪರ ಕೆಸರೆರಚುಕೊಳ್ಳುತ್ತಿದ್ದಾರೆ.

ದಾಳವಾದ ತನ್ವೀರ್‌: ಶಾಸಕ ಜಮೀರ್‌ ಅಹಮದ್‌ ಜೆಡಿಎಸ್‌, ಎಚ್‌.ಡಿ.ಕುಮಾರಸ್ವಾಮಿ ಸಖ್ಯ ತೊರೆದು, ಕಾಂಗ್ರೆಸ್‌ ಸೇರ್ಪಡೆಯಾಗಿ ಸಿದ್ದರಾಮಯ್ಯ ಆಪ್ತ ವಲಯದಲ್ಲಿ ಗುರುತಿಸಿಕೊಂಡ ಬಳಿಕ ಕಾಂಗ್ರೆಸ್‌ನ ಮುಸ್ಲಿಂ ಮುಖಂಡ, ಶಾಸಕ ತನ್ವೀರ್‌ ಸೇಠ್‌ ಅಸಮಾಧಾನಗೊಂಡಿದ್ದರು.

ಸಿದ್ದರಾಮಯ್ಯ ನಡೆಯನ್ನು ಪರೋಕ್ಷವಾಗಿ ವಿರೋಧಿಸುತ್ತಿದ್ದರು. ಆಗಾಗ್ಗೆ ತಮ್ಮ ಪ್ರತಿರೋಧವನ್ನು ದಾಖಲಿಸಿದ್ದರು. ಇದರ ಜೊತೆಗೆ ಜೆಡಿಎಸ್‌ ನಾಯಕ ಕುಮಾರಸ್ವಾಮಿ ಜೊತೆ ನೇರ ನಂಟು ಹೊಂದಿದ್ದರು.

ತವರಲ್ಲೇ ಸಿದ್ದರಾಮಯ್ಯಗೆ ಮುಖ ಭಂಗವನ್ನುಂಟು ಮಾಡಬೇಕು ಎಂದು ಕಾಂಗ್ರೆಸ್‌ನೊಳಗೆ ನಾಯಕತ್ವಕ್ಕಾಗಿ ನಡೆದಿರುವ ತಿಕ್ಕಾಟ ಹಾಗೂ ಜೆಡಿಎಸ್‌ನ ವರಿಷ್ಠ ಕುಮಾರಸ್ವಾಮಿ ತಂತ್ರಗಾರಿಕೆಯ ಪ್ರಮುಖ ದಾಳವಾಗಿ ಪ್ರಯೋಗಿಸಲ್ಪಟ್ಟ ತನ್ವೀರ್‌ ನಡೆ, ಇದೀಗ ಮೈಸೂರು ಕಾಂಗ್ರೆಸ್‌ನೊಳಗಿನ ಆಂತರಿಕ ಬೇಗುದಿ ಯನ್ನು ಬಹಿರಂಗಗೊಳಿಸಿದೆ.

ತನ್ವೀರ್ ಬೆಂಬಲಿಗರು, ಸಿದ್ದರಾಮಯ್ಯ ಬೆಂಬಲಿಗರ ನಡುವೆಯೇ ತಿಕ್ಕಾಟ ಬಿರುಸುಗೊಂಡಿದೆ. ಬಣ ರಾಜಕಾರಣ ಬೀದಿಗೆ ಬಿದ್ದಿದೆ. ಅಲ್ಪಸಂಖ್ಯಾತರ ನಾಯಕತ್ವದ ಪ್ರಶ್ನೆಯೂ ಪ್ರಸ್ತಾಪವಾಗಿದೆ. ವಾಕ್ಸಮರದ ಜಟಾಪಟಿ ಜೋರಾಗಿಯೇ ನಡೆದಿದೆ. ಈ ಬೆಳವಣಿಗೆ ಸಿದ್ದರಾಮಯ್ಯ ಪಾಲಿಗೆ ಮುಜುಗರ ಸೃಷ್ಟಿಸಿದೆ.

ಬಿಜೆಪಿಯ ವೇದಿಕೆಯಲ್ಲೇ ವಿರೋಧ
ಮಹಾನಗರ ಪಾಲಿಕೆಯಲ್ಲಿ ಮೇಯರ್‌ ‘ಮೈತ್ರಿ’ಯ ಬಳಿಕ ಶಿಸ್ತಿನ ಪಕ್ಷ ಎಂದು ಹೇಳಿಕೊಳ್ಳುವ ಬಿಜೆಪಿಯಲ್ಲೂ ಅಸಮಾಧಾನ ಭುಗಿಲೆದ್ದಿದೆ. ಪಕ್ಷದ ವೇದಿಕೆಯಲ್ಲೇ ಸಂಸದ ವಿ.ಶ್ರೀನಿವಾಸ ಪ್ರಸಾದ್‌ ಅವರು ರಾಜ್ಯ ಹಾಗೂ ಸ್ಥಳೀಯ ಮುಖಂಡರನ್ನು ನೇರವಾಗಿಯೇ ತರಾಟೆಗೆ ತೆಗೆದುಕೊಂಡಿದ್ದಾರೆ.

ರಾಜ್ಯ ಘಟಕದ ಉಪಾಧ್ಯಕ್ಷ ಎಂ.ರಾಜೇಂದ್ರ ಸಹ ಸ್ಥಳೀಯ ಚುನಾಯಿತ ಜನಪ್ರತಿನಿಧಿಗಳಿಗೆ ಚಾಟಿ ಬೀಸಿದ್ದಾರೆ. ವಿರೋಧಿಗಳನ್ನು ಅಪ್ಪಿಕೊಂಡು ಜೊತೆಯಲ್ಲಿ ಹೆಜ್ಜೆ ಹಾಕುತ್ತಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ವರಿಷ್ಠರು ಈ ನಡೆಯತ್ತ ನಿಗಾ ವಹಿಸಬೇಕು ಎಂದು ಚಾಟಿ ಬೀಸಿದ್ದಾರೆ.

ಬಿಜೆಪಿಯ ಸಂಸದರು, ಜಿಲ್ಲಾ ಉಸ್ತುವಾರಿ ಸಚಿವರು ಜೆಡಿಎಸ್‌ ಶಾಸಕರಾದ ಜಿ.ಟಿ.ದೇವೇಗೌಡ, ಕೆ.ಮಹದೇವ್‌, ಕಾಂಗ್ರೆಸ್‌ ಶಾಸಕ ತನ್ವೀರ್‌ ಸೇಠ್‌ ಜೊತೆಗೆ ಸುಮಧುರ ಸಂಬಂಧ ಹೊಂದಿರುವುದಕ್ಕೆ, ಬಹಿರಂಗವಾಗಿ ಅಪ್ಪಿಕೊಳ್ಳುತ್ತಿರುವುದಕ್ಕೆ ರಾಜೇಂದ್ರ ಪಕ್ಷದ ವೇದಿಕೆಯಲ್ಲೇ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ಕಮಲ ಪಾಳೆಯದ ಮೂಲಗಳು ಖಚಿತ ಪಡಿಸಿವೆ.

ಹಿರಿಯ ಶಾಸಕ ಎಸ್‌.ಎ.ರಾಮದಾಸ್‌ ಸಹ ಪರೋಕ್ಷವಾಗಿ ತಮ್ಮೊಳಗಿನ ಅಸಮಾಧಾನ ಹೊರಹಾಕಿದ್ದಾರೆ.

ಜಿಟಿಡಿ–ಸಂದೇಶ್‌ ನಡೆಗೆ ಗರಂ
ಪಾಲಿಕೆಯಲ್ಲಿನ ‘ಮೈತ್ರಿ’ಯನ್ನು ಸಹ ತನ್ನ ಅನುಕೂಲಸಿಂಧು ರಾಜಕಾರಣಕ್ಕೆ ಬಳಸಿಕೊಳ್ಳಲು ಜೆಡಿಎಸ್‌ ವರಿಷ್ಠರು ಮುಂದಾಗಿದ್ದಾರೆ. ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆಯುವ ತಮ್ಮ ಕರತಲಾಮಲಕ ಚಾಣಾಕ್ಷ ನಡೆಯ ಬಾಣ ಹೂಡಿದ್ದಾರೆ.

ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಶಾಸಕ ಜಿ.ಟಿ.ದೇವೇಗೌಡ ವಿರುದ್ಧ ಇದೂವರೆಗೂ ವರಿಷ್ಠರಷ್ಟೇ ಅಸಮಾಧಾನ ವ್ಯಕ್ತಪಡಿಸಿದ್ದರು. ಸ್ಥಳೀಯವಾಗಿ ಪ್ರಬಲ ವಿರೋಧ ವ್ಯಕ್ತವಾಗಿರಲಿಲ್ಲ. ಇದೀಗ ಅದೇ ಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದಸ್ಯ ಮಾದೇಗೌಡ ಮೂಲಕ ದಾಳ ಉರುಳಿಸಲಾಗಿದೆ.

ಮೇಯರ್‌ ಚುನಾವಣೆಯನ್ನೇ ಪ್ರಮುಖವಾಗಿಟ್ಟುಕೊಂಡು ಮಾದೇಗೌಡ, ಶಾಸಕ ಜಿ.ಟಿ.ದೇವೇಗೌಡ, ವಿಧಾನ ಪರಿಷತ್‌ ಸದಸ್ಯ ಸಂದೇಶ್‌ ನಾಗರಾಜ್‌ ಅವರನ್ನು ಜೆಡಿಎಸ್‌ನಿಂದ ಉಚ್ಚಾಟಿಸಬೇಕು ಎಂಬ ಕೂಗು ಹಾಕಿದ್ದಾರೆ. ಇದಕ್ಕೆ ನಗರ, ಜಿಲ್ಲಾ ಘಟಕಗಳು ಧ್ವನಿಗೂಡಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.