ಮೈಸೂರು: `ದಸರಾ ಮಹೋತ್ಸವದ ಅಂಗವಾಗಿ ಸೆ. 30ರಿಂದ ಅ.2ರ ವರೆಗೆ ನಗರದ ಜೆ.ಕೆ ಮೈದಾನದ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ರೈತ ದಸರಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ~ ಎಂದು ರೈತ ದಸರಾ ಉಪಸಮಿತಿ ಅಧ್ಯಕ್ಷ ಮಿರ್ಲೆ ಶ್ರೀನಿವಾಸ್‌ಗೌಡ ಹೇಳಿದರು.
`ಸೆ.30ರಂದು ಬೆಳಿಗ್ಗೆ 10.30 ಗಂಟೆಗೆ ನಗರದ ಅರಮನೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಮೆರವಣಿಗೆ ಹೊರಟು ಜಯಚಾಮರಾಜೇಂದ್ರ ವೃತ್ತ, ಕೆ.ಆರ್. ವೃತ್ತದ ಮೂಲಕ ಜೆ.ಕೆ ಮೈದಾನ ತಲುಪಲಾಗುವುದು. ಈ ಮೆರವಣಿಗೆಯಲ್ಲಿ ನಾದಸ್ವರ, ಅಲಕೃಂತ ಜೋಡಿ ಎತ್ತುಗಳು, ವೀರಗಾಸೆ ಕುಣಿತ, ಪೂಜಾ ಕುಣಿತ, ಡೊಳ್ಳು ಕುಣಿತ ಕಲಾವಿದರು ಭಾಗವಹಿಸಲಿದ್ದಾರೆ~ ಎಂದು ಬುಧವಾರ ಪತ್ರಿಕಾ ಗೋಷ್ಠಿಯಲ್ಲಿ ಹೇಳಿದರು.
`ಮಧ್ಯಾಹ್ನ 12.30 ಗಂಟೆಗೆ ಉದ್ಘಾಟನಾ ಕಾರ್ಯಕ್ರಮ ನಡೆಯ ಲಿದ್ದು, ಕೃಷಿ, ಪಶುಪಾಲನಾ, ತೋಟ ಗಾರಿಕೆ, ರೇಷ್ಮೆ ಹಾಗೂ ಇತರೆ ಇಲಾಖೆ ಗಳ ವಸುಪ್ರದರ್ಶನದ ಉದ್ಘಾಟ ನೆಯೂ ನೆರವೇರಲಿದೆ. ಅದೇ ದಿನ ಮಧ್ಯಾಹ್ನ 2 ಗಂಟೆಗೆ ಸಾವಯವ ಕೃಷಿ ಉತ್ಪನ್ನಗಳ ರೈತ ಸಂತೆ, 3 ಗಂಟೆಗೆ ವಿಜ್ಞಾನಗಳೊಂದಿಗೆ ರೈತರ ಸಂವಾದ, ಕೃಷಿಗೆ ಅಗತ್ಯ ಹಾಗೂ ಹೊಸ ಪುನಃಶ್ಚೇತನಗಳ ಬಗ್ಗೆ ಮಾಹಿತಿ ವಿನಿಮಯ ಕಾರ್ಯಕ್ರಮಗಳೂ ಜರುಗಲಿವೆ~ ಎಂದು ತಿಳಿಸಿದರು.
`ಅ.1ರಂದು ಬೆಳಿಗ್ಗೆ 6 ಗಂಟೆಗೆ ಜೆ.ಕೆ ಮೈದಾನದಲ್ಲಿ ಹಾಲು ಕರೆಯುವ ಸ್ಪರ್ಧೆ, 10.30 ಗಂಟೆಗೆ ವರುಣಾ ಗ್ರಾಮದಲ್ಲಿ ಕೆಸರುಗದ್ದೆ ಓಟ, 11.30 ಗಂಟೆಗೆ ಓವಲ್ ಮೈದಾನದಲ್ಲಿ ರೈತರಿಗೆ 50 ಕೆಜಿ ಗೊಬ್ಬರ ಮೂಟೆ ಹೊತ್ತು ಓಡುವ ಸ್ಪರ್ಧೆ, ರೈತ ಮಹಿಳೆಯರಿಗೆ ನೀರು ತುಂಬಿದ ಬಿಂದಿಗೆ ಹೊತ್ತು ಓಡುವ ಸ್ಪರ್ಧೆಗಳ ಹಮ್ಮಿಕೊಳ್ಳ ಲಾಗಿದೆ. ಹಾಲು ಕರೆಯುವ ಸ್ಪರ್ಧೆಯಲ್ಲಿ ವಿಜೇತರಾದ ರೈತರಿಗೆ ಪ್ರಥಮ ರೂ. 40 ಸಾವಿರ, ದ್ವಿತೀಯ ರೂ. 30 ಸಾವಿರ ಹಾಗೂ ತೃತೀಯ ರೂ. 20 ಸಾವಿರ ನಗದು ಬಹುಮಾನ ನೀಡಲಾಗುವುದು~ ಎಂದರು.
`ಅ.2ರಂದು ಬೆಳಿಗ್ಗೆ 8.30 ಗಂಟೆಗೆ ಜೆ.ಕೆ ಮೈದಾನದಲ್ಲಿ ಮೊದಲ ಬಾರಿಗೆ ಶ್ವಾನ ಪ್ರದರ್ಶನ ಆಯೋಜಿಸಲಾಗಿದೆ. ಪ್ರತಿ ಶ್ವಾನಕ್ಕೆ 100 ರೂಪಾಯಿ ಪ್ರವೇಶ ಶುಲ್ಕ ನಿಗದಿ ಪಡಿಸಲಾಗಿದೆ. ಅ. 1ರಂದು ಸಂಜೆ ಗಂಟೆ ಒಳಗೆ ಹೆಸರು ನೋಂದಾವಣಿ ಮಾಡಿಕೊಳ್ಳಬೇಕು. ಅದೇ ದಿನ ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ~ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಓ ಜಿ.ಸತ್ಯವತಿ, ರೈತ ದಸರಾ ಉಪಾಧ್ಯಕ್ಷ ಜೆ.ಸಿ.ಯೋಗೇಶ್‌ಕುಮಾರ್, ಸಿ.ವಿ.ಗುಡಿ ಜಗದೀಶ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.