ADVERTISEMENT

ಮೈಸೂರು: 365 ಮಂದಿಗೆ ಸೋಂಕು; 9 ಸಾವು

74 ಗುಣಮುಖರ ಬಿಡುಗಡೆ; ಒಂದೂವರೆ ಶತಕ ದಾಟಿದ ಮರಣ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2020, 15:43 IST
Last Updated 1 ಆಗಸ್ಟ್ 2020, 15:43 IST
ಕೊರೊನಾ ವೈರಸ್‌
ಕೊರೊನಾ ವೈರಸ್‌    

ಮೈಸೂರು: ಜಿಲ್ಲೆಯಲ್ಲಿ ಕೋವಿಡ್‌–19ನಿಂದ ಮೃತಪಡುತ್ತಿರುವವರ ಸಂಖ್ಯೆ ಹೆಚ್ಚಿದೆ. ಶನಿವಾರ 9 ಮಂದಿ ಮೃತರಾಗಿದ್ದು, ಸಾವಿನ ಸಂಖ್ಯೆ ಒಂದೂವರೆ ಶತಕ ದಾಟಿದೆ. ಇದೂವರೆಗೂ 151 ಮಂದಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.

ಜಿಲ್ಲಾಡಳಿತ, ಆರೋಗ್ಯ ಇಲಾಖೆ ಶನಿವಾರ ಬಿಡುಗಡೆ ಮಾಡಿದ ಪಟ್ಟಿಯಲ್ಲಿ 9 ಸಾವು ದಾಖಲಾಗಿವೆ. ಇದರಲ್ಲಿ 60 ವರ್ಷ ಮೇಲ್ಪಟ್ಟ ನಾಲ್ವರು, 70 ವರ್ಷ ಮೇಲ್ಪಟ್ಟ ಇಬ್ಬರು ವೃದ್ಧೆಯರು ಚಿಕಿತ್ಸೆಗೆ ಸ್ಪಂದಿಸದೆ ಅಸುನೀಗಿದ್ದಾರೆ. ಮೂವರು ಪುರುಷರು ಮೃತಪಟ್ಟಿದ್ದು, ಇದರಲ್ಲಿ 72 ವರ್ಷದವರೊಬ್ಬರಿದ್ದಾರೆ. ಉಳಿದ ಇಬ್ಬರಲ್ಲಿ ಒಬ್ಬರದ್ದು 52 ವರ್ಷವಾದರೆ, ಮತ್ತೊಬ್ಬರದ್ದು 62 ವರ್ಷ.

ಮೃತಪಟ್ಟ 9 ಜನರು ತೀವ್ರ ಉಸಿರಾಟದ ಸಮಸ್ಯೆಯಿಂದಲೇ ಬಳಲುತ್ತಿದ್ದವರು. ಇಬ್ಬರು ವೃದ್ಧೆಯರು 13, 11 ದಿನ ಚಿಕಿತ್ಸೆ ಪಡೆದರೂ ಗುಣಮುಖರಾಗಲಿಲ್ಲ. ಇನ್ನುಳಿದವರು ಆಸ್ಪತ್ರೆಗೆ ದಾಖಲಾದ 2 ದಿನದಿಂದ 8 ದಿನ ಚಿಕಿತ್ಸೆ ಪಡೆದರೂ, ಸ್ಪಂದಿಸದೆ ಮೃತಪಟ್ಟವರಾಗಿದ್ದಾರೆ ಎಂದು ಆರೋಗ್ಯ ಇಲಾಖೆಯ ಮೂಲಗಳು ಸ್ಪಷ್ಟಪಡಿಸಿವೆ.

ADVERTISEMENT

ಶನಿವಾರ ಹೊಸದಾಗಿ 365 ಜನರಿಗೆ ಸೋಂಕು ತಗುಲಿದೆ. ಇವರಲ್ಲಿ 237 ಮಂದಿ ರೋಗಿಗಳ ಸಂಪರ್ಕಕ್ಕೆ ಬಂದಿದ್ದರು. ಶೀತ ಜ್ವರ (ಐಎಲ್‌ಐ)ದ ಲಕ್ಷಣಗಳಿಂದ 65 ಮಂದಿ ಬಳಲುತ್ತಿದ್ದಾರೆ. ಹೊರ ಜಿಲ್ಲೆ ಮತ್ತು ರಾಜ್ಯಗಳಿಂದ ಬಂದ 52 ಜನರಲ್ಲಿ ಸೋಂಕು ಪತ್ತೆಯಾಗಿದೆ. 11 ಮಂದಿಯಲ್ಲಿ ತೀವ್ರ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 4,582ಕ್ಕೆ ಏರಿಕೆಯಾಗಿದೆ. ಗುಣಮುಖರಾದವರ ಸಂಖ್ಯೆ 74 ಇದ್ದು, ಇದೂವರೆಗೂ 1591 ಜನರು ಕೋವಿಡ್‌ನಿಂದ ಗುಣಮುಖರಾಗಿದ್ದಾರೆ. ಪ್ರಸ್ತುತ ಸಕ್ರಿಯ ಪ್ರಕರಣಗಳ ಸಂಖ್ಯೆ 2840ಕ್ಕೆ ಏರಿಕೆಯಾಗಿದೆ.

ಸದ್ಯ ಚಿಕಿತ್ಸೆ ಪಡೆಯುತ್ತಿರುವ 2,840 ಮಂದಿಯಲ್ಲಿ, 232 ಜನರು ಕೋವಿಡ್ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಕೋವಿಡ್‌ ಹೆಲ್ತ್‌ಕೇರ್‌ಗಳಲ್ಲಿ 75, ಕೋವಿಡ್‌ ಕೇರ್‌ ಸೆಂಟರ್‌ಗಳಲ್ಲಿ 623, ಖಾಸಗಿ ಆಸ್ಪತ್ರೆಯಲ್ಲಿ 226, ಖಾಸಗಿ ಕೋವಿಡ್‌ ಕೇರ್‌ ಸೆಂಟರ್‌ಗಳಲ್ಲಿ 74 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 1,610 ಮಂದಿ ಮನೆಯಲ್ಲೇ ಐಸೋಲೇಷನ್‌ ಆಗಿದ್ದಾರೆ. ದಿನದಿಂದ ದಿನಕ್ಕೆ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆಯೂ ಹೆಚ್ಚಿದೆ.

ಹೊಸದಾಗಿ ನಗರ ಮತ್ತು ವಿವಿಧೆಡೆ 82 ಪ್ರದೇಶಗಳನ್ನು ಕಂಟೈನ್‌ಮೆಂಟ್ ವಲಯಗಳೆಂದು ಘೋಷಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.