ADVERTISEMENT

ಸರಗಳವು: ನಾಲ್ವರು ಆರೋಪಿಗಳ ಬಂಧನ

ಫಲ ನೀಡಿದ ಅಪರಾಧ ಪತ್ತೆ ವಿಶೇಷ ದಳದ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 28 ಜುಲೈ 2021, 4:12 IST
Last Updated 28 ಜುಲೈ 2021, 4:12 IST

ಮೈಸೂರು: ನಗರ ಅಪರಾಧ ಪತ್ತೆ ವಿಭಾಗದ ಪೊಲೀಸರು ಸರಗಳ್ಳತನದ ನಾಲ್ವರು ಆರೋಪಿಗಳನ್ನು ಬಂಧಿಸಿ, ₹ 5.80 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ 2 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಶಾಂತಿನಗರದ ಅಯಾಜ್ ಖಾನ್ (23), ತೌಸಿಫ್‌ ಪಾಷ (20), ರಾಜೀವ್ ನಗರದ ತೌಸಿಫ್ ಬೇಗ್ (22), ಶೊಹೆಬ್ ಪಾಷ (25) ಬಂಧಿತರು.

ಆರೋಪಿಗಳು ರಾಜೀವನಗರದ ಶಿವಣ್ಣ ವೃತ್ತದ ಬಳಿ ದ್ವಿಚಕ್ರ ವಾಹನದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದಾಗ ಬಂಧಿಸಿದ್ದಾರೆ.

ADVERTISEMENT

ನಜರ್‌ಬಾದ್, ನರಸಿಂಹರಾಜ, ಕೃಷ್ಣರಾಜ, ಮಂಡಿ ಠಾಣೆ, ಕುವೆಂಪುನಗರ ಹಾಗೂ ವಿಜಯನಗರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ತಲಾ ಒಂದೊಂದು ಸರಗಳ್ಳತನ ಮಾಡಿರುವುದಾಗಿ ಇವರು ಒಪ್ಪಿಕೊಂಡಿದ್ದಾರೆ. ಇವರು ಉದಯಗಿರಿಯಲ್ಲಿ ಕಳವು ಮಾಡಿದ್ದ ದ್ವಿಚಕ್ರ ವಾಹನವನ್ನು ಕಳ್ಳತನಕ್ಕೆ ಉಪಯೋಗಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ನಗರದಲ್ಲಿ ಹೆಚ್ಚುತ್ತಿದ್ದ ಸರಗಳವು ಪ್ರಕರಣಗಳನ್ನು ತಡೆಯಲು ಪೊಲೀಸ್ ಕಮಿಷನರ್ ಡಾ.ಚಂದ್ರಗುಪ್ತ ಅವರು ವಿಶೇಷ ಪೊಲೀಸ್‌ ತಂಡ ರಚಿಸಿದ್ದರು. ಡಿಸಿಪಿ ಗೀತಾ ಪ್ರಸನ್ನ ಹಾಗೂ ಎಸಿಪಿ ಅಶ್ವತ್ಥನಾರಾಯಣ ಅವರ ನೇತೃತ್ವದಲ್ಲಿ ಸಿಸಿಬಿ ಇನ್‌ಸ್ಪೆಕ್ಟರ್ ಆರ್.ಜಗದೀಶ್ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.