ADVERTISEMENT

ಹುಣಸೂರು: 508 ಪ್ರಭೇದದ ಪಕ್ಷಿಗಳು ಪತ್ತೆ

ನಾಗರಹೊಳೆ ಉದ್ಯಾನವನದಲ್ಲಿ ಫೆ.9ರಿಂದ 12ರವರೆಗೆ ನಡೆದ ಪಕ್ಷಿ ಸಮೀಕ್ಷೆ

ಎಚ್.ಎಸ್.ಸಚ್ಚಿತ್
Published 15 ಫೆಬ್ರುವರಿ 2023, 5:00 IST
Last Updated 15 ಫೆಬ್ರುವರಿ 2023, 5:00 IST
ನಾಗರಹೊಳೆ ಹುಲಿ ಸಂರಕ್ಷಿತ ಅರಣ್ಯದಲ್ಲಿ ಕಂಡು ಬಂದ ಲಾಂಗ್ ಟೇಲ್ ಗ್ರಾಸ್ ಬರ್ಡ್ (ಎಡಚಿತ್ರ). ಬ್ಲಾಕ್ ನಪೆಡ್ ಓರಿಓಲ್
ನಾಗರಹೊಳೆ ಹುಲಿ ಸಂರಕ್ಷಿತ ಅರಣ್ಯದಲ್ಲಿ ಕಂಡು ಬಂದ ಲಾಂಗ್ ಟೇಲ್ ಗ್ರಾಸ್ ಬರ್ಡ್ (ಎಡಚಿತ್ರ). ಬ್ಲಾಕ್ ನಪೆಡ್ ಓರಿಓಲ್   

ಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಈ ವರ್ಷ ನಡೆದ ಪಕ್ಷಿ ಸಮೀಕ್ಷೆಯಲ್ಲಿ ವಿಶೇಷ ಪ್ರಭೇದಕ್ಕೆ ಸೇರಿದ ಪಕ್ಷಿಗಳು ಕಂಡುಬಂದಿದ್ದು, ಪಕ್ಷಿಪ್ರಿಯರ ಗಮನ ಸೆಳೆದಿವೆ.

864 ಚದರ ಕಿ.ಮೀ ವ್ಯಾಪ್ತಿಯಲ್ಲಿ ಹರಡಿಕೊಂಡಿರುವ ಉದ್ಯಾನವನದಲ್ಲಿ ಫೆ.9ರಿಂದ 12ರವರೆಗೆ ನಡೆದ ಪಕ್ಷಿ ಸಮೀಕ್ಷೆಯಲ್ಲಿ ರಾಜ್ಯ ಮತ್ತು ಹೊರ ರಾಜ್ಯದ 118 ಸ್ವಯಂ ಸೇವಕರು ಭಾಗವಹಿಸಿದ್ದರು. ಪಕ್ಷಿ ವೀಕ್ಷಕರು ಅಂತರಸಂತೆ ವಲಯದಲ್ಲಿ 140 ಪಕ್ಷಿಗಳು, ಆನೆಚೌಕೂರು 200, ಮೇಟಿಕುಪ್ಪೆ 173, ಹುಣಸೂರು 200, ಡಿ.ಬಿ.ಕುಪ್ಪೆ 190, ನಾಗರಹೊಳೆ 192, ಕಲ್ಲಹಳ್ಳ 200 ಮತ್ತು ವೀರನಹೊಸಹಳ್ಳಿಯಲ್ಲಿ 220 ಪಕ್ಷಿಗಳನ್ನು ದಾಖಲಿಸಿದ್ದರು.

ಪಶ್ಚಿಮಘಟ್ಟಕ್ಕೆ ಸೇರಿದ ಲಾಫಿಂಗ್ ತ್ರಶ್, ನೀಲಗಿರಿ ವುಡ್ ಪಿಜನ್, ವೈಟ್ ಬೆಲ್ಲಿಡ್ ಶಾರ್ಟ್ ವಿಂಗ್, ಬ್ರಾಡ್ ಟೇಲ್ಡ್ ಗ್ರಾಸ್ ಬರ್ಡ್, ಗ್ರೇ ಬ್ರೆಸ್ಟೇಟ್ ಲಾಫಿಂಗ್ ತ್ರಶ್, ನೀಲಗಿರಿ ಫ್ಲೈ ಕ್ಯಾಚರ್, ನೀಲಗಿರಿ ಪಿಪಿಟ್, ಮಲಬಾರ್ (ಬ್ಲೂವಿಂಗ್ ) ಪ್ಯಾರಕೀಟ್, ಮಲಬಾರ್ ಗ್ರೇ ಹಾನ್ ಬಿಲ್, ಗ್ರೇ ಹೆಡೆಡ್ ಬುಲ್ ಬುಲ್, ವೈಯನಾಡ್ ಲಾಫಿಂಗ್ ತ್ರಶ್, ಕ್ರಿಂಸನ್ ಬ್ಯಾಕ್ ಸನ್ ಬರ್ಡ್ ಸೇರಿದಂತೆ ಹಲವಾರು ಪಕ್ಷಿಗಳು ಕಂಡುಬಂದಿವೆ.

ADVERTISEMENT

‘ನಾಗರಹೊಳೆ ಅರಣ್ಯ ಜೀವ ವೈವಿಧ್ಯ ತಾಣದಲ್ಲಿ ಅಂದಾಜು
508 ವಿವಿಧ ಪ್ರಭೇದಗಳಿಗೆ ಸೇರಿದ ಪಕ್ಷಿಗಳು ಆಶ್ರಯ ಪಡೆದು ವಂಶಾಭಿವೃದ್ಧಿ ಮಾಡುತ್ತಿವೆ. ರಾಜ್ಯದ 500ಕ್ಕೂ ಹೆಚ್ಚು ಪಕ್ಷಿಗಳು ಪಶ್ಚಿಮ ಘಟ್ಟಗಳಲ್ಲಿ ಕಂಡು ಬರುತ್ತಿದ್ದು, ಇವುಗಳಲ್ಲಿ 16 ಪ್ರಭೇದಗಳು ಅಳಿವಿನಂಚಿನಲ್ಲಿವೆ’ ಎಂದು ಪರಿಸರ ವಿಜ್ಞಾನಿ ಗೋಪಾಲ್ ತಿಳಿಸಿದರು.

‘ದೇಶದ 10 ರಾಷ್ಟ್ರೀಯ ಉದ್ಯಾನವನಗಳಲ್ಲಿ ನಡೆದ ಪಕ್ಷಿ ಸಮೀಕ್ಷೆ ಅಭಿಯಾನದಲ್ಲಿ ಭಾಗವಹಿಸಿದ್ದೇನೆ. ನಾಗರಹೊಳೆ ಪಕ್ಷಿ ಸಮೀಕ್ಷೆಯಲ್ಲಿ ತೊಡಗಿಸಿಕೊಳ್ಳುವುದು ವಿಶಿಷ್ಟ ಅನುಭವ ನೀಡುತ್ತದೆ. ಇಲ್ಲಿ ಪಕ್ಷಿಗಳಿಗೆ ಪೂರಕವಾದ ಹಣ್ಣಿನ ಮರಗಳು, ಕೆರೆ ಕಟ್ಟೆಗಳಿವೆ’ ಎಂದು ಪಕ್ಷಿ ಪ್ರೇಮಿ, ಬೆಂಗಳೂರಿನ ನಾಗರಾಜ್ ತಿಳಿಸಿದರು.

ಪಕ್ಷಿ ಸಂಕುಲಕ್ಕೆ ಪೂರಕ ವಾತಾವರಣ

ರಾಜ್ಯದ ನಾಗರಹೊಳೆ, ಬಂಡೀಪುರ ಅಭಯಾರಣ್ಯಗಳಲ್ಲಿ ಪಕ್ಷಿ ಸಂಕುಲಗಳಿಗೆ ಪೂರಕ ವಾತಾವರಣವಿದ್ದು, ವಿದೇಶಗಳಿಂದಲೂ ಪಕ್ಷಿಗಳು ವಲಸೆ ಬಂದು ವಂಶಾಭಿವೃದ್ಧಿ ಮಾಡಿಕೊಂಡು ಸ್ವ ಕ್ಷೇತ್ರಕ್ಕೆ ಮರಳುತ್ತವೆ. ಶೀತ ಪ್ರದೇಶದಿಂದ ಸಾವಿರಾರು ಮೈಲು ಹಾರಿ ಬರುವ ಪಕ್ಷಿಗಳಿಗೆ ನಾಗರಹೊಳೆ ಸೇರಿದಂತೆ ಪಶ್ಚಿಮ ಘಟ್ಟಗಳಲ್ಲಿ ನಿತ್ಯಹರಿದ್ವರ್ಣ ಕಾನನ ಉತ್ತಮ ಆಹಾರ ಭದ್ರತೆ ಹೊಂದಿವೆ. ಮೊಟ್ಟೆ ಹಾಕಿ ಮರಿ ಮಾಡಿ ತನ್ನ ವಂಶದೊಂದಿಗೆ ಮರಳಲು ಪೂರಕವಾದ ಹಣ್ಣಿನ ಮರಗಳು ಕಾಣಸಿಗುವುದರಿಂದ ವರ್ಷದಿಂದ ವರ್ಷಕ್ಕೆ ಪಕ್ಷಿಗಳ ಸಂಖ್ಯೆ ಹೆಚ್ಚಾಗಿದೆ’ ಎಂದು ಹುಲಿ ಯೋಜನಾ ನಿರ್ದೇಶಕ ಹರ್ಷಕುಮಾರ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.