ADVERTISEMENT

5,500 ದ್ವಿಚಕ್ರ ವಾಹನ ಸಾಗಾಟ

ನೈರುತ್ಯ ರೈಲ್ವೆ ಮೈಸೂರು ವಿಭಾಗದ ಸಾಧನೆ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2020, 3:38 IST
Last Updated 8 ನವೆಂಬರ್ 2020, 3:38 IST
ರೈಲಿನಲ್ಲಿ ಸಾಗಾಟ ಮಾಡಲು ದ್ವಿಚಕ್ರವಾಹನಗಳನ್ನು ಸಾಲಾಗಿ ನಿಲ್ಲಿಸಿರುವುದು
ರೈಲಿನಲ್ಲಿ ಸಾಗಾಟ ಮಾಡಲು ದ್ವಿಚಕ್ರವಾಹನಗಳನ್ನು ಸಾಲಾಗಿ ನಿಲ್ಲಿಸಿರುವುದು   

ಮೈಸೂರು: ರೈಲಿನಲ್ಲಿ ವಾಹನಗಳ ಸಾಗಾಟ ಪ್ರಮಾಣವನ್ನು ಹೆಚ್ಚಿಸಲು ಉಪಕ್ರಮಗಳನ್ನು ತೆಗೆದುಕೊಂಡಿರುವ ನೈರುತ್ಯ ರೈಲ್ವೆ ಮೈಸೂರು ವಿಭಾಗವು ಕಳೆದ ಒಂದು ತಿಂಗಳ ಅವಧಿಯಲ್ಲಿ ದೇಶದ ವಿವಿಧ ಭಾಗಗಳಿಗೆ 5,500 ದ್ವಿಚಕ್ರ ವಾಹನಗಳನ್ನು ಸಾಗಾಟ ಮಾಡಿದೆ.

ಅಸ್ಸಾಂ ರಾಜ್ಯದ ಚಂಗ್ಸಾರಿ, ಪಶ್ಚಿಮ ಬಂಗಾಳದ ಸಂಕ್ರೈಲ್ ಗೂಡ್ಸ್ ಟರ್ಮಿನಲ್, ಉತ್ತರ ಪ್ರದೇಶದ ನೌತರ್ವಾ ಮತ್ತು ಬಿಹಾರದ ಸಾರೈ ನಿಲ್ದಾಣಗಳಿಗೆ ಮೈಸೂರಿನ ಕಡಕೊಳದಿಂದ ದ್ವಿಚಕ್ರ ವಾಹನ ಸಾಗಿಸಲಾಗಿದೆ. ಇದರಿಂದ ಮೈಸೂರು ವಿಭಾಗಕ್ಕೆ ಸುಮಾರು ₹ 1 ಕೋಟಿ ಆದಾಯ ಲಭಿಸಿದೆ ಎಂದು ಪ್ರಕಟಣೆ ತಿಳಿಸಿದೆ.

ಆಟೊಮೊಬೈಲ್‌ ಸಾಗಾಟಕ್ಕೆ ಅನುಕೂಲವಾಗಲು ರೈಲ್ವೆ ಬೋಗಿಗಳನ್ನು ನವೀನ ರೀತಿಯಲ್ಲಿ (ಎನ್‌ಎಂಜಿ ರೇಕ್‌) ಮಾರ್ಪಡಿಸಲಾಗಿತ್ತು. ತಲಾ 25 ಬೋಗಿಗಳನ್ನು ಒಳಗೊಂಡ ಐದು ರೈಲುಗಳಲ್ಲಿ ದ್ವಿಚಕ್ರ ವಾಹನಗಳ ಸಾಗಾಟ ನಡೆದಿದೆ.

ADVERTISEMENT

ಸರಕು ಸಾಗಣೆ ಪ್ರಮಾಣ ಹೆಚ್ಚಿಸುವ ಉದ್ದೇಶದಿಂದ ಮೈಸೂರು ವಿಭಾಗವು ರೈಲ್ವೆ ನಿಲ್ದಾಣದಲ್ಲಿ ವ್ಯಾಪಾರ ಅಭಿವೃದ್ಧಿ ಘಟಕ (ಬಿಡಿಯು) ಸ್ಥಾಪಿಸಿದೆ. ಇದರಿಂದಾಗಿ ಹೊಸ ಹೊಸ ಸರಕುಗಳನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಇದರ ಜೊತೆಗೆ ಶುಂಠಿ, ಅಡಿಕೆ, ಮೆಣಸು ಮತ್ತು ಇತರೆ ಕೃಷಿ ಉತ್ಪನ್ನಗಳನ್ನು ಸಾಗಾಟ ಮಾಡಿ ರೈತರಿಗೆ ಅನುಕೂಲ ಮಾಡಿಕೊಟ್ಟಿದೆ. ರೋಹಾ ಮತ್ತು ಗೋವಾಕ್ಕೆ ಇದೇ ಮೊದಲ ಬಾರಿಗೆ ಕಬ್ಬಿಣದ ಅದಿರು ಕೂಡಾ ಸಾಗಾಟ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.