ADVERTISEMENT

ಜನರಲ್ಲಿ ಸೃಷ್ಟಿಯಾದ ಚಿರತೆ ಆತಂಕ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2018, 4:34 IST
Last Updated 3 ಫೆಬ್ರುವರಿ 2018, 4:34 IST
ನೇಚರ್ ಕನ್ಸರ್ವೇಷನ್ ಫೌಂಡೇಷನ್ 2015 ಮತ್ತು 2017ರಲ್ಲಿ ನಡೆಸಿದ ಕ್ಯಾಮೆರಾ ಟ್ರ್ಯಾಪ್‌ನಲ್ಲಿ ಸೆರೆಯಾಗಿದ್ದ ಚಿರತೆಯ ದೇಹದ ಚುಕ್ಕೆಗಳೊಂದಿಗೆ ವೈರಲ್ ಆದ ವಿಡಿಯೊದಲ್ಲಿದ್ದ ಚಿರತೆಯನ್ನು ಹೋಲಿಸಿ ನೋಡಿದಾಗ ಎರಡೂ ಒಂದೇ ಚಿರತೆ ಎಂದು ಕಂಡು ಬಂದಿದೆ. ಇದರ ವಯಸ್ಸು ಸುಮಾರು 6 ವರ್ಷ ಎಂದು ಅಂದಾಜು ಮಾಡಲಾಗಿದೆ.
ನೇಚರ್ ಕನ್ಸರ್ವೇಷನ್ ಫೌಂಡೇಷನ್ 2015 ಮತ್ತು 2017ರಲ್ಲಿ ನಡೆಸಿದ ಕ್ಯಾಮೆರಾ ಟ್ರ್ಯಾಪ್‌ನಲ್ಲಿ ಸೆರೆಯಾಗಿದ್ದ ಚಿರತೆಯ ದೇಹದ ಚುಕ್ಕೆಗಳೊಂದಿಗೆ ವೈರಲ್ ಆದ ವಿಡಿಯೊದಲ್ಲಿದ್ದ ಚಿರತೆಯನ್ನು ಹೋಲಿಸಿ ನೋಡಿದಾಗ ಎರಡೂ ಒಂದೇ ಚಿರತೆ ಎಂದು ಕಂಡು ಬಂದಿದೆ. ಇದರ ವಯಸ್ಸು ಸುಮಾರು 6 ವರ್ಷ ಎಂದು ಅಂದಾಜು ಮಾಡಲಾಗಿದೆ.   

ಮೈಸೂರು: ನಗರದಲ್ಲಿ ಚಿರತೆ ಕುರಿತು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಯಾಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿಯನ್ನು ಪೇಚಿಗೆ ಸಿಲುಕಿಸಿದೆ. ಚಾಮುಂಡಿಬೆಟ್ಟದ ರಸ್ತೆಯಲ್ಲಿ ಚಿರತೆಯೊಂದು ನಡೆದಾಡುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ನಾಗರಿಕರಲ್ಲಿ ಭೀತಿ ಮೂಡಿದೆ. ಕತ್ತಲಲ್ಲಿ ಯಾವುದೇ ಪ್ರಾಣಿ ಕಂಡು ಬಂದರೂ, ನಾಯಿಗಳು ಹೆಚ್ಚು ಬೊಗಳಿದರೂ ಚಿರತೆ ಬಂದಿದೆ ಎಂದು ಜನರು ಕರೆ ಮಾಡಲಾರಂಭಿಸಿದ್ದಾರೆ.

ಗುರುವಾರ ರಾತ್ರಿಯಷ್ಟೆ ನಗರದ ಹೊರವಲಯದಿಂದ ವ್ಯಕ್ತಿಯೊಬ್ಬರು ಕರೆ ಮಾಡಿ ಚಿರತೆ ಬಂದಿದೆ ಎಂದು ತಿಳಿಸಿದರು. ತಕ್ಷಣ ಸ್ಥಳಕ್ಕೆ ದೌಡಾಯಿಸಿದಾಗ ಚಿರತೆಯು ತೋಟದೊಳಗೆ ನುಗ್ಗಿತು ಎಂದರು. ತೋಟದೊಳಗೆ ಹುಡುಕಾಟ ನಡೆಸಿದಾಗ ಕಂಡು ಬಂದಿದ್ದು ಹಂದಿಗಳ ಗುಂಪು. ಕತ್ತಲಲ್ಲಿ ಹಂದಿಗಳನ್ನೇ ತಪ್ಪಾಗಿ ಭಾವಿಸಿದ ಸಾರ್ವಜನಿಕರು ಚಿರತೆ ಎಂದು ಭ್ರಮಿಸಿದ್ದರು.

ಚಿರತೆ ಬರುವುದು, ಹೋಗುವುದು ಸಾಮಾನ್ಯ ಸಂಗತಿ: ಚಾಮುಂಡಿಬೆಟ್ಟದಲ್ಲಿ ಕನಿಷ್ಠ ಎಂದರೂ 5ರಿಂದ 6 ಚಿರತೆಗಳಿವೆ. ಈ ಚಿರತೆಗಳಲ್ಲಿ ಒಂದೆರಡು ಚಿರತೆಗಳು ಸಹಜವಾಗಿಯೇ ನಗರದ ಹೊರವಲಯದಲ್ಲಿ ರಾತ್ರಿ ವೇಳೆ ಸುತ್ತಾಡುತ್ತವೆ. ಕ್ಯಾಮೆರಾದಲ್ಲಿ ಸೆರೆ ಸಿಕ್ಕಿರುವುದರಿಂದ ಅನಗತ್ಯವಾಗಿ ನಾಗರಿಕರಲ್ಲಿ ಆತಂಕ ಉಂಟಾಗಿದೆ.

ADVERTISEMENT

‘ನೇಚರ್ ಕನ್ಸರ್ವೇಷನ್ ಫೌಂಡೇಷನ್ 2015 ಮತ್ತು 2017ರಲ್ಲಿ ನಡೆಸಿದ ಕ್ಯಾಮೆರಾ ಟ್ರ್ಯಾಪ್‌ನಲ್ಲಿ ಸೆರೆಯಾಗಿದ್ದ ಚಿರತೆಯೊಂದಿಗೆ ವೈರಲ್ ಆದ ವಿಡಿಯೊದಲ್ಲಿದ್ದ ಚಿರತೆಯನ್ನು ಹೋಲಿಸಿ ನೋಡಲಾಗಿದೆ. ಮೈಮೇಲಿನ ಚುಕ್ಕೆಗಳ ಸಾಮ್ಯತೆಯ ಆಧಾರದ ಮೇಲೆ ಈ ಚಿರತೆ ಇಲ್ಲಿಯೆ ವಾಸವಿರುವ ಹಾಗೂ ಆಗಾಗ ನಗರದ ಹೊರವಲಯದಲ್ಲಿ ರಾತ್ರಿ ವೇಳೆ ಓಡಾಡುತ್ತಿರುವ ಚಿರತೆ ಎಂಬುದು ಸಾಬೀತಾಗಿದೆ’ ಎಂದು ಉಪ‍ಅರಣ್ಯ ಸಂರಕ್ಷಣಾಧಿಕಾರಿ ಹನುಮಂತಪ್ಪ ತಿಳಿಸಿದರು.

ಚಿರತೆ ಮೊದಲಿನಿಂದಲೂ ಇಲ್ಲಿಯೇ ವಾಸವಿದೆ. ಇದನ್ನು ಸೆರೆ ಹಿಡಿಯಬೇಕು ಎಂಬುದು ಸರಿಯಲ್ಲ. ಚಾಮುಂಡಿಬೆಟ್ಟ ರಕ್ಷಿತ ಅರಣ್ಯ. ಹಾಗಾಗಿ, ಸೆರೆ ಹಿಡಿಯಬೇಕು ಎಂಬ ಕೋರಿಕೆಯನ್ನು ವಾಪಸ್ ಪಡೆಯಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಬದಲಿಗೆ, ಚಿರತೆ ನಗರದತ್ತ ಬಾರದಂತೆ ತಡೆಯಲು ಸುಲಭದ ವಿಧಾನಗಳಿವೆ. ಮಾಂಸದಂಗಡಿ ಮಾಲೀಕರು, ಹೋಟೆಲಿನವರು, ಕೋಳಿ ಫಾರಂನವರು ತ್ಯಾಜ್ಯಗಳನ್ನು ಹೊರವಲಯದಲ್ಲಿ ಎಸೆಯಬಾರದು. ಈ ತ್ಯಾಜ್ಯ ತಿನ್ನಲು ನಾಯಿ ಹಾಗೂ ಹಂದಿಗಳು ಗುಂಪುಗೂಡುತ್ತವೆ. ಇವುಗಳನ್ನು ತಿನ್ನಲು ಚಿರತೆಗಳು ಬರುತ್ತವೆ. ಪಾಲಿಕೆ ಹಾಗೂ ಮುಡಾ ನಗರದ ಹೊರಭಾಗವನ್ನು ಸ್ವಚ್ಛಗೊಳಿಸಿದರೆ ಯಾವೊಂದು ಚಿರತೆಗಳೂ ನಗರದತ್ತ ಸುಳಿಯುವುದಿಲ್ಲ ಎಂದು ಅವರು ಹೇಳಿದ್ದಾರೆ.

8ರಂದು ಕಾರ್ಯಾಗಾರ

‌ನಗರದಲ್ಲಿ ಹೆಚ್ಚುತ್ತಿರುವ ಚಿರತೆ ಹಾವಳಿ ತಡೆಯಲು ಮುಂದಾಗಿರುವ ಅರಣ್ಯ ಇಲಾಖೆ ಫೆ.8ರಂದು ಸಂಜೆ 4 ಗಂಟೆಗೆ ಚಾಮರಾಜೇಂದ್ರ ಮೃಗಾಲಯದ ಬಯಲು ರಂಗಮಂದಿರದಲ್ಲಿ ಕಾರ್ಯಾಗಾರವೊಂದನ್ನು ಏರ್ಪಡಿಸಿದೆ.

ಚಿರತೆ ಹಾವಳಿಗೆ ಹೋಟೆಲ್, ಮಾಂಸ, ಕೋಳಿ ಫಾರಂಗಳ ಅವೈಜ್ಞಾನಿಕ ವಿಲೇವಾರಿಯೇ ಕಾರಣವಾಗಿದೆ. ಈ ಕುರಿತು ಹೋಟೆಲ್ ಮಾಲೀಕರು, ಮಾಂಸದಂಗಡಿ ಮಾಲೀಕರು, ಪಾಲಿಕೆ, ಮುಡಾ ಹಾಗೂ ಸಾರ್ವಜನಿಕರಿಗೆ ಶಿಬಿರವನ್ನು ಆಯೋಜಿಸಲಾಗಿದೆ. ಇದರಲ್ಲಿ ವಿವಿಧ ವಿಷಯ ತಜ್ಞರು ಚಿರತೆ ಕುರಿತು ಮಾತನಾಡುವರು.

* * 

ಅರಣ್ಯ ಇಲಾಖೆ ಬಳಿ ಕ್ಷಿಪ್ರ ಕಾರ್ಯಪಡೆ ಇದೆ. ಒಂದೆರಡು ದಿನಗಳಲ್ಲಿ ಸಹಾಯವಾಣಿ ಸ್ಥಾಪಿಸಲಾಗುವುದು. ಜನರು ಆತಂಕಕ್ಕೆ ಒಳಗಾಗಬಾರದು.
– ಹನುಮಂತಪ್ಪ,‌
ಉಪಅರಣ್ಯ ಸಂರಕ್ಷಣಾಧಿಕಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.