ಬಿಳಿಕೆರೆ (ಮೈಸೂರು ಜಿಲ್ಲೆ): ಹೋಬಳಿಯ ಬೆಟ್ಟದೂರು ಗ್ರಾಮದ ಗೊಮ್ಮಟಗಿರಿಯಲ್ಲಿ ವಿರಾಜಮಾನವಾಗಿರುವ 16 ಅಡಿ ಎತ್ತರದ ಬಾಹುಬಲಿ ಮೂರ್ತಿಗೆ ಭಾನುವಾರ ಮಹಾಮಸ್ತಕಾಭಿಷೇಕ ವಿಜೃಂಭಣೆಯಿಂದ ನೆರವೇರಿತು.
ಪ್ರಕೃತಿಯ ನಡುವೆ ಹಾಸುಹೊಕ್ಕಿರುವ ಹೆಬ್ಬಂಡೆಯ ಮೇಲಿನ ಏಕಶಿಲಾ ಮೂರ್ತಿಯ ಅಮೃತ ಮಹೋತ್ಸವ ಹಾಗೂ ಮಹಾಮಸ್ತಕಾಭಿಷೇಕದ ಅಂತಿಮ ದಿನದ ಸಂಭ್ರಮ ಸಡಗರ ಎಲ್ಲೆಡೆ ಮನೆಮಾಡಿತ್ತು.
ಶಿವಮೊಗ್ಗ ಜಿಲ್ಲೆಯ ಹೊಂಬುಜ ಜೈನ ಮಠದ ದೇವೇಂದ್ರ ಕೀರ್ತಿ ಭಟ್ಟಾರಕ ಸ್ವಾಮೀಜಿ ಮತ್ತು ಭುವನ ಕೀರ್ತಿ ಸ್ವಾಮೀಜಿ ಅವರು ಮಹಾಮಸ್ತಕಾಭಿಷೇಕದ ಸಾನ್ನಿಧ್ಯ ವಹಿಸಿದ್ದರು. ಮೂರ್ತಿಗೆ ಭಕ್ತರು ನಾನಾ ಅಭಿಷೇಕ ನೆರವೇರಿಸಿದರು.
ಜಲಾಭಿಷೇಕ, ಎಳನೀರು, ಕಬ್ಬಿನ ಹಾಲು, ಅರಿಶಿನ, ಚಂದನ, ಕ್ಷೀರ, ಕಂಕಚೂರ್ಣ, ಅರಳು, ಸಕ್ಕರೆಪುಡಿ, ಅಕ್ಕಿ ಹಿಟ್ಟು, ಜೇನುತುಪ್ಪ, ಶ್ರೀಗಂಧ, ಹೀಗೆ ವಿವಿಧ ಕಷಾಯಾಭಿಷೇಕ ಸೇರಿದಂತೆ ಒಟ್ಟು 18 ಬಗೆಯ ಅಭಿಷೇಕಗಳನ್ನು ನೆರವೇರಿಸಲಾಯಿತು.
ಅಭಿಷೇಕಗಳನ್ನೂ ಕಣ್ತುಂಬಿಕೊಂಡ ಭಕ್ತರು ‘ವಿರಾಟ್ ಯೋಗಿ ಬಾಹುಬಲಿ ಮಹಾರಾಜ್ ಕೀ ಜೈ’ ಜಯಘೋಷ ಮೊಳಗಿಸಿದರು. ರಾಜ್ಯದ ವಿವಿಧೆಡೆ ಹಾಗೂ ಸುತ್ತಮುತ್ತಲ ಗ್ರಾಮಗಳಿಂದ ಬಂದಿದ್ದ ಸಾವಿರಾರು ಮಂದಿ ಮಸ್ತಕಾಭಿಷೇಕಕ್ಕೆ ಸಾಕ್ಷಿಯಾದರು.
ಕ್ಷೇತ್ರದ ಸೇವಾ ಸಮಿತಿಯ ಅಧ್ಯಕ್ಷ ಮನ್ಮಥರಾಜ್, ಕಾರ್ಯದರ್ಶಿ ಪದ್ಮರಾಜಯ್ಯ, ಖಜಾಂಚಿ ರಾಜೇಶ್, ಪೂಜಾ ಸಮಿತಿ ಅಧ್ಯಕ್ಷ ಸಂತೋಷ್ ಮತ್ತಿತರ ಮುಖಂಡರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಗಳು ಹಾಗೂ ಮಸ್ತಕಾಭಿಷೇಕ ಜರುಗಿತು. ಅಭಿಷೇಕಕ್ಕೂ ಮೊದಲು ಸ್ವಾಮೀಜಿ ಹಾಗೂ ಕ್ಷುಲಿಕಾ ಶ್ರೀವಿನಯ ಶ್ರೋಮಾತಾಜಿ ಆಶೀರ್ವಚನ ನೀಡಿದರು.
ಪ್ರಸಾದ ವಿತರಣೆ: ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಬಿಳಿಕೆರೆ ಠಾಣಾ ಪೋಲಿಸರು ಬಂದೋಬಸ್ತ್ ನೆರವೇರಿಸಿದರು.
ಬಿಳಿಕೆರೆ ಹೋಬಳಿಯ ಬೆಟ್ಟದೂರು ಗ್ರಾಮದ ಗೊಮ್ಮಟೇಶ್ವರ ಮೂರ್ತಿಗೆ ಭಾನುವಾರ ನಡೆದ 75ನೇ ಮಹಾಮಸ್ತಕಾಭಿಷೇಕದಲ್ಲಿ ದೇವೇಂದ್ರ ಕೀರ್ತಿ ಭಟ್ಟಾರಕ ಸ್ವಾಮೀಜಿ ಮತ್ತು ಭುವನ ಕೀರ್ತಿ ಸ್ವಾಮೀಜಿ ಕ್ಷುಲಿಕಾ ಶ್ರೀವಿನಯ ಶ್ರೋಮಾತಾಜಿ ಅವರು ಶ್ರೀಗಂಧ ಅಭಿಷೇಕ ನೆರವೇರಿಸಿದರು.
‘ಬಾಹುಬಲಿ ತ್ಯಾಗಮೂರ್ತಿ’
‘ಬಾಹುಬಲಿ ತ್ಯಾಗದ ಪ್ರತಿರೂಪ. ಸಾಮ್ರಾಜ್ಯಕ್ಕಾಗಿ ಹೋರಾಡಿದ ಬಾಹುಬಲಿ ಕೊನೆಗೆ ಎಲ್ಲ ಸಂಪತ್ತ ತ್ಯಾಗ ಮಾಡಿ ತ್ಯಾಗಮೂರ್ತಿ ಎನಿಸಿಕೊಂಡ’ ಎಂದು ದೇವೇಂದ್ರ ಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು. ಇಲ್ಲಿನ ಬೆಟ್ಟದೂರು ಗ್ರಾಮದ ಗೊಮ್ಮಟಗಿರಿಯಲ್ಲಿ ನಡೆದ 75ನೇ ಮಹಾಮಸ್ತಕಾಭಿಷೇಕದಲ್ಲಿ ಆಶೀರ್ವಚನ ನೀಡಿದರು. ಹಾಸನ ಜಿಲ್ಲೆಯ ಶ್ರವಣಬೆಳಗೊಳ ಹೊರತುಪಡಿಸಿದರೆ ಕಾರ್ಕಳ ವೇಣೂರು ಧರ್ಮಸ್ಥಳಗಳಲ್ಲಿ ವಿಗ್ರಹ ಅತ್ಯಂತ ಆಕರ್ಷಣೀಯವಾಗಿದೆ. ಎಲ್ಲ ಕ್ಷೇತ್ರಗಳಲ್ಲೂ 12 ವರ್ಷಗಳಿಗೊಮ್ಮೆ ಮಹಾಮಸ್ತಕಾಭಿಷೇಕ ನಡೆದರೆ ಬಿಳಿಕೆರೆಯ ಗೊಮ್ಮಟಗಿರಿಯಲ್ಲಿ ಪ್ರತೀವರ್ಷ ಮಸ್ತಕಾಭಿಷೇಕ ನಡೆಯುವುದು ವಿಶೇಷ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.