ADVERTISEMENT

ಚಳವಳಿಗಾರರು ಸ್ಥಳೀಯ ಆಡಳಿತದಲ್ಲಿ ಭಾಗಿಯಾಗಿ: ಹೊಸೂರು ಕುಮಾರ್‌

ಪಂಚಾಯತ್‌ ರಾಜ್‌ ಆಡಳಿತ ವ್ಯವಸ್ಥೆ ಕಾರ್ಯಾಗಾರ ಉದ್ಘಾಟಿಸಿದ ಹೊಸೂರು ಕುಮಾರ್‌

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2026, 4:10 IST
Last Updated 3 ಫೆಬ್ರುವರಿ 2026, 4:10 IST
ಹುಣಸೂರು ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ವಿವಿಧ ಪ್ರಗತಿಪರ ಸಂಘಟನೆಗಳು ಆಯೋಜಿಸಿದ್ದ ಪಂಚಾಯತ್‌ ರಾಜ್‌ ಆಡಳಿತ ವ್ಯವಸ್ಥೆ ಕಾರ್ಯಾಗಾರವನ್ನು ರೈತಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಹೊಸೂರು ಕುಮಾರ್‌ ಉದ್ಘಾಟಿಸಿದರು
ಹುಣಸೂರು ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ವಿವಿಧ ಪ್ರಗತಿಪರ ಸಂಘಟನೆಗಳು ಆಯೋಜಿಸಿದ್ದ ಪಂಚಾಯತ್‌ ರಾಜ್‌ ಆಡಳಿತ ವ್ಯವಸ್ಥೆ ಕಾರ್ಯಾಗಾರವನ್ನು ರೈತಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಹೊಸೂರು ಕುಮಾರ್‌ ಉದ್ಘಾಟಿಸಿದರು   

ಹುಣಸೂರು: ‘ವಿವಿಧ ಸಂಘಟನೆಗಳ ಚಳವಳಿಗಾರರು ಸ್ಥಳೀಯ ಆಡಳಿತ ಸಂಸ್ಥೆಗಳಲ್ಲಿ ಅಧಿಕಾರ ಹಿಡಿದರೆ ಸಾಮಾಜಿಕ ಬದಲಾವಣೆ ತರಲು ಸಾಧ್ಯ’ ಎಂದು ರೈತಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಹೊಸೂರು ಕುಮಾರ್‌ ಹೇಳಿದರು.

ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಅಬ್ದುಲ್‌ ನಜೀರ್‌ಸಾಬ್‌ ಫೌಂಡೇಶನ್‌, ರೈತ ಸಂಘ, ದಲಿತ ಸಂಘರ್ಷ ಸಮಿತಿ(ದಸಂಸ) ಮತ್ತು ಪ್ರಗತಿಪರ ಸಂಘಟನೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಪಂಚಾಯತ್‌ ರಾಜ್‌ ಆಡಳಿತ ವ್ಯವಸ್ಥೆ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

‘ಪ್ರಜಾಪ್ರಭುತ್ವದ ತಳಹದಿಯಾಗಿರುವ ಗ್ರಾಮ, ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯಿತಿ ಆಡಳಿತ ವ್ಯವಸ್ಥೆಗಳನ್ನು ವಿವಿಧ ಸಂಘಟನೆಗಳ ಚಳುವಳಿಗಾರರು ಅರಿತು, ಮುಂಬರಲಿರುವ ಚುನಾವಣೆಯಲ್ಲಿ ಸ್ಪರ್ಧಿಸಿ ಸಾರ್ವಜನಿಕ ಸೇವೆಯಲ್ಲಿ ತೊಡಗುವ ಮೂಲಕ ಗ್ರಾಮಗಳ ಅಭಿವೃದ್ಧಿಗೆ ಧ್ವನಿಗೂಡಿಸಲು ಸಹಕಾರವಾಗಲಿದೆ’ ಎಂದರು.

ADVERTISEMENT

‘ರೈತಸಂಘ ಒಳಗೊಂಡಂತೆ ಹಲವು ಪ್ರಗತಿಪರ ಸಂಘಟನೆಗಳು ದಶಕಗಳಿಂದ ನಿರಂತರವಾಗಿ ಚಳವಳಿ ನಡೆಸಿ ಬದಲಾವಣೆಗೆ ಪ್ರಯತ್ನಿಸಿದರೂ ನಿರೀಕ್ಷಿತ ಮಟ್ಟಕ್ಕೆ ಫಲ ಸಿಕ್ಕಿಲ್ಲ. ಈ ಎಲ್ಲವನ್ನು ಅವಲೋಕಿಸಿದಾಗ ಜನರಿಂದ ಆಯ್ಕೆಗೊಂಡು, ಜನಪರ ಕಾಳಜಿಯಲ್ಲಿ ಸೇವೆ ಸಲ್ಲಿಸಿ ಸಾಮಾಜಿಕ ಬದಲಾವಣೆಗೆ ಒತ್ತು ನೀಡಬೇಕಿರುವುದು ಅನಿವಾರ್ಯ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

‘ರೈತಸಂಘವು ಈಗಾಗಲೇ 25 ಗ್ರಾಮ ಪಂಚಾಯಿತಿ ಆಡಳಿತ ವ್ಯವಸ್ಥೆಯಲ್ಲಿ ತನ್ನ ಪ್ರತಿನಿಧಿಗಳನ್ನು ಗೆಲ್ಲಿಸಿ ಸ್ಥಳೀಯ ಆಡಳಿತ ಸುಧಾರಣೆಯಲ್ಲಿ ಮಂಚೂಣಿಯಲ್ಲಿದೆ. ಇದಕ್ಕೆ ಮೋದೂರು, ಶಾನುಬೋಗನಹಳ್ಳಿ ಪಂಚಾಯಿತಿ ಉತ್ತಮ ಉದಾಹರಣೆ’ ಎಂದರು.

ಕಾರ್ಯಕ್ರಮದಲ್ಲಿ ಅಗ್ರಹಾರ ರಾಮೇಗೌಡ, ತಂಬಾಕು ಬೆಳೆಗಾರರ ಹಿತರಕ್ಷಣಾ ಸಮಿತಿ ಗೌರವಾಧ್ಯಕ್ಷ ಉಂಡವಾಡಿ ಚಂದ್ರೇಗೌಡ, ಪ್ರಗತಿಪರ ರೈತ ರಾಜು, ಜಯಣ್ಣ ಕಲ್ಲಹಳ್ಳಿ ಇದ್ದರು.

‘ಸಾಂವಿಧಾನಿಕ ಶಕ್ತಿಯ ಅರಿವು’

ದಸಂಸ ಮುಖಂಡ ಅತ್ತಿಕುಪ್ಪೆ ರಾಮಕೃಷ್ಣ ಮಾತನಾಡಿ ‘ಹೋರಾಟದ ಮನಸ್ಥಿತಿಯಲ್ಲಿ ಚಳವಳಿ ನಡೆಸಿದರೂ ಜನಪ್ರತಿನಿಧಿಗಳ ಸಹಕಾರದಲ್ಲಿ ಪರಿವರ್ತನೆಗೆ ಒತ್ತು ನೀಡಲು ಈ ಕಾರ್ಯಾಗಾರ ಅಗತ್ಯವಾಗಿದೆ’ ಎಂದರು. ಸಿಪಿಎಂ ಮುಖಂಡ ಕಲ್ಕುಣಿಕೆ ಬಸವರಾಜ್‌ ಮಾತನಾಡಿ ‘ಪ್ರಜಾಪ್ರಭುತ್ವದಲ್ಲಿ ಜನಪ್ರತಿನಿಧಿಗಳಿಗೆ ಇರುವ ಸಾಂವಿಧಾನಿಕ ಶಕ್ತಿಯನ್ನು ಬಳಸಿಕೊಂಡು ಸಾಮಾಜಿಕ ವ್ಯವಸ್ಥೆಯನ್ನು ಬದಲಿಸುವ ದಿಕ್ಕಿನಲ್ಲಿ ಕಾರ್ಯಾಗಾರ ಸಹಕಾರಿ’ ಎಂದರು.

‘ಪಂಚಾಯತ್‌ ರಾಜ್‌ ವ್ಯವಸ್ಥೆ ತಿಳಿಯಿರಿ’

ಫೌಂಡೇಶನ್‌ನ ಸಂಪನ್ಮೂಲ ವ್ಯಕ್ತಿ ರಾಜು ಮಾತನಾಡಿ ‘ಕಳೆದ 5 ವರ್ಷದಿಂದ ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆ ನಡೆಯದೇ ರಾಜ್ಯದ 5 ಲಕ್ಷ ಜನಪ್ರತಿನಿಧಿಗಳ ನಾಯಕತ್ವಕ್ಕೆ ಕುತ್ತು ತರಲಾಗಿದೆ. ಸಂವಿಧಾನದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಆದ್ಯತೆ ಇದ್ದರೂ ಮೀಸಲಾತಿ ಹೆಸರಿನಲ್ಲಿ ಸ್ಥಳೀಯ ಚುನಾವಣೆ ನಡೆಸದಂತೆ ವ್ಯವಸ್ಥಿತವಾಗಿ ಕೈ ಕಟ್ಟಿ ಹಾಕಲಾಗಿದೆ. ಈ ವ್ಯವಸ್ಥೆ ವಿರುದ್ಧ ಧ್ವನಿ ಎತ್ತಲು ಪಂಚಾಯತ್‌ ರಾಜ್‌ ವ್ಯವಸ್ಥೆ ಕುರಿತು ಸಮಗ್ರ ತಿಳುವಳಿಕೆ ಹೊಂದಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.