ADVERTISEMENT

ಹುಣಸೂರು: ಆದಿ ಕರ್ಮಯೋಗಿ’ 14 ಗ್ರಾಮಗಳು ಆಯ್ಕೆ

ಅಭಿಯಾನಕ್ಕೆ ಚಾಲನೆ; ಹಾಡಿಗಳ ಸಮಗ್ರ ಅಭಿವೃದ್ಧಿಗೆ ಸ್ಥಳಿಯರಿಂದ ಮಾಹಿತಿ ಸಂಗ್ರಹ ಜಾಥಾ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2025, 4:45 IST
Last Updated 21 ಸೆಪ್ಟೆಂಬರ್ 2025, 4:45 IST
ಹುಣಸೂರು ತಾಲ್ಲೂಕಿನ ಯಶೋಧಪುರ ಗ್ರಾಮದಲ್ಲಿ ಅದಿ ಕರ್ಮಯೋಗಿ ಅಭಿಯಾನ ಯೋಜನೆ ಜಾರಿಗೊಳಿಸುವ ಉದ್ದೇಶದಿಂದ ಕೇಂದ್ರ ಬುಡಕಟ್ಟು ಸಚಿವಾಲಯದ ಉಪಕಾರ್ಯದರ್ಶಿ ಡಾ.ರಾಜಿ ಮತ್ತು ತಂಡದವರು ಶನಿವಾರ ಜಾಥಾ ನಡೆಸಿ ಸಾರ್ವಜನಿಕರಿಂದ ಮಾಹಿತಿ ಕಲೆ ಹಾಕಿದರು
ಹುಣಸೂರು ತಾಲ್ಲೂಕಿನ ಯಶೋಧಪುರ ಗ್ರಾಮದಲ್ಲಿ ಅದಿ ಕರ್ಮಯೋಗಿ ಅಭಿಯಾನ ಯೋಜನೆ ಜಾರಿಗೊಳಿಸುವ ಉದ್ದೇಶದಿಂದ ಕೇಂದ್ರ ಬುಡಕಟ್ಟು ಸಚಿವಾಲಯದ ಉಪಕಾರ್ಯದರ್ಶಿ ಡಾ.ರಾಜಿ ಮತ್ತು ತಂಡದವರು ಶನಿವಾರ ಜಾಥಾ ನಡೆಸಿ ಸಾರ್ವಜನಿಕರಿಂದ ಮಾಹಿತಿ ಕಲೆ ಹಾಕಿದರು   

ಹುಣಸೂರು: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಆದಿ ಕರ್ಮಯೋಗಿ ಅಭಿಯಾನ ಮತ್ತು ಕಾರ್ಯಗಾರ ಯೋಜನೆಗೆ ತಾಲ್ಲೂಕಿನ 14 ಗ್ರಾಮಗಳು ಆಯ್ಕೆಯಾಗಿವೆ. ಈ ಗ್ರಾಮಗಳ ಬುಡಕಟ್ಟು ಜನರ ಸಮಗ್ರ ಅಭಿವೃದ್ಧಿಗೆ ಸ್ಥಳೀಯ ಜನರ ಬೇಡಿಕೆಗೆ ಅನುಗುಣವಾಗಿ ಯೋಜನೆ ಸಿದ್ಧಪಡಿಸಿ 2030ರೊಳಗೆ ಅಭಿವೃದ್ಧಿ ಹೊಂದಿದ ಗ್ರಾಮವನ್ನಾಗಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ ಎಂದು ಕೇಂದ್ರ ಬುಡಕಟ್ಟು ಸಚಿವಾಲಯದ ಉಪಕಾರ್ಯದರ್ಶಿ ಡಾ.ರಾಜಿ ಎನ್.ಎಸ್.‌ ಹೇಳಿದರು.

ತಾಲ್ಲೂಕಿನ ಯಶೋಧಪುರ ಮತ್ತು ದಾಸನಪುರ ಹಾಡಿಯಲ್ಲಿ ಅಭಿಯಾನಕ್ಕೆ ಸಂಬಂಧಿಸಿ ಗ್ರಾಮ ಪರ್ಯಟನೆ ನಡೆಸಿ, ಸಾರ್ವಜನಿಕರ ಸಭೆಯಲ್ಲಿ ಗ್ರಾಮಕ್ಕೆ ಬೇಕಾದ ಅಗತ್ಯ ಸೌಲಭ್ಯ ಕುರಿತು ಮಾಹಿತಿ ಸಂಗ್ರಹಿಸಿ ಮಾತನಾಡಿದರು.

ಈ ಯೋಜನೆ ಬುಡಕಟ್ಟು ಗಿರಿಜನರು ಹೆಚ್ಚಾಗಿ ವಾಸಿಸುತ್ತಿರುವ ಗ್ರಾಮ ಅಥವಾ ಹಾಡಿಗಳಲ್ಲಿ ಅನುಷ್ಠಾನಗೊಳಿಸಿ, ಆ ಪ್ರದೇಶದ ಜನರು ಇತರರಂತೆ ಉತ್ತಮ ಜೀವನ ನಡೆಸಬೇಕೆನ್ನುವುದು ಉದ್ದೇಶವಾಗಿದೆ. ಈ ಯೋಜನೆಯಲ್ಲಿ ಗಿರಿಜನ ಮಹಿಳಾ ಸ್ವಸಹಾಯ ಗುಂಪು ಮತ್ತು ಬುಡಕಟ್ಟು ಯುವಕರಿಗೆ ವಿಶೇಷ ತರಬೇತಿ ನೀಡಿ ಸ್ವಯಂ ಉದ್ಯೋಗ ಹೊಂದುವಂತೆ ಮಾಡಲಾಗುತ್ತದೆ. ಸರ್ಕಾರಿ ಯೋಜನೆಗಳನ್ನು ತಲಪಿಸಲಾಗುತ್ತದೆ. ಈ ಯೋಜನೆ ಅನುಷ್ಠಾನಕ್ಕೆ ಅನುದಾನದ ಮಿತಿ ಇಲ್ಲ, ಬೇಡಿಕೆಗೆ ಅನುಗುಣವಾಗಿ ಯೋಜನೆ ಸಿದ್ಧಪಡಿಸಿ ಅದಕ್ಕೆ ಅನುದಾನವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ನೀಡಲಿವೆ ಎಂದರು.

ADVERTISEMENT

ಸೆ. 17ರಂದು ಪ್ರಧಾನಿ ಮೋದಿ ಅವರು ಈ ಯೋಜನೆಗೆ ಚಾಲನೆ ನೀಡಿದ್ದು, ಅಕ್ಟೋಬರ್‌ 2ರ ಗಾಂಧಿ ಜಯಂತಿಯವರೆಗೆ ಆದಿ ಸೇವಾ ಪರ್ವ ಕಾರ್ಯಕ್ರಮ ನಡೆಯಲಿದೆ. ಈ ದಿನಗಳಲ್ಲಿ ಸಮಗ್ರವಾಗಿ ಮಾಹಿತಿ ಸಂಗ್ರಹಿಸಿ ನಂತರದಲ್ಲಿ ಯೋಜನೆ ಸಿದ್ಧಪಡಿಸಿ ಅನುಷ್ಠಾನಗೊಳಿಸಿ ಬುಡಕಟ್ಟು ಸಮುದಾಯದ ಅಭಿವೃದ್ಧಿ ಪರ್ವ ಹೊಂದುವ ದೂರ ದೃಷ್ಟಿ ಹೊಂದಿದೆ ಎಂದರು.

ಯೋಜನೆಯಲ್ಲಿ ಅಂಗನವಾಡಿ, ಶಾಲೆ, ಸಮುದಾಯ ಭವನ, ಕುಡಿಯುವ ನೀರು, ರಸ್ತೆ ದೀಪ, ವಸತಿ, ಗ್ರಾಮ ಅಥವಾ ಹಾಡಿ ಸಂಪರ್ಕಿಸುವ ರಸ್ತೆ ಅಭಿವೃದ್ಧಿ ಹಾಗೂ ದೂರವಾಣಿ ಸಂಪರ್ಕ ಕಲ್ಪಿಸುವ ನೆಟ್‌ವರ್ಕ್‌ ಟವರ್‌ ಅಳವಡಿಸುವುದು ಸೇರಿ ಸ್ಥಳೀಯರ ಬೇಡಿಕೆಗೆ ತಕ್ಕಂತೆ ಯೋಜನೆ ರೂಪುಗೊಳ್ಳಲಿದೆ ಎಂದರು.

ಯಶೋಧಪುರದ ಮುಖಂಡ ಕೃಷ್ಣ ಮಾತನಾಡಿ, ಗ್ರಾಮಕ್ಕೆ ಬೇಕಾದ ಹಲವು ಸಮಲತ್ತುಗಳ ಪಟ್ಟಿ ನೀಡಿದರು. ಅಭಿಯಾನದಲ್ಲಿ ಸ್ಥಳೀಯರೊಂದಿಗೆ ಉಪಕಾರ್ಯದರ್ಶಿ ಡಾ.ರಾಜಿ ಮತ್ತು ಆದಿತ್ಯ ಶರ್ಮ ಸಂವಾದ ನಡೆಸಿ ಮಾಹಿತಿ ಸಂಗ್ರಹಿಸಿದರು.

ಅಭಿಯಾನದಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಗಂಗಾಧರ್‌, ತಾ.ಪಂ. ಯೋಜನಾಧಿಕಾರಿ ರಾಜೇಶ್‌, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ದರ್ಶನ್‌, ಶಿಶು ಮತ್ತು ಮಕ್ಕಳ ಇಲಾಖೆ ಅಧಿಕಾರಿ ಮಂಜುಳ, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಮಂಜುನಾಥ್ ಮತ್ತು ಭವ್ಯ ಸೇರಿ ದಾಸನಪುರ ಹಾಡಿ ಮತ್ತು ಯಶೊಧಪುರ ಗ್ರಾಮಸ್ಥರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.