
ಮೈಸೂರು: ‘ಅನ್ನ ಕೊಡುವ ಜಮೀನು ಉಳಿಸಿಕೊಳ್ಳುವ ಬದಲಿಗೆ ದುಂದುವೆಚ್ಚಕ್ಕಾಗಿ ಮಾರುತ್ತಿರುವುದು ಕಂಡುಬರುತ್ತಿದೆ. ಇದರಿಂದಾಗಿ ಕೃಷಿ ಭೂಮಿ ಇಳಿಕೆಯಾಗಿ ಬೇಸಾಯ ಚಟುವಟಿಕೆಯೂ ಕಡಿಮೆ ಆಗುತ್ತಿದೆ’ ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ಕಳವಳ ವ್ಯಕ್ತಪಡಿಸಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್, ಸರಸ್ವತಿಪುರಂ ವಲಯದ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟದಿಂದ ಶನಿವಾರ ಆಯೋಜಿಸಿದ್ದ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಸಭಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಪಡುವಾರಹಳ್ಳಿ, ಒಂಟಿಕೊಪ್ಪಲು, ಕುಂಬಾರಕೊಪ್ಪಲು, ಮಂಚೇಗೌಡನಕೊಪ್ಪಲು ಭಾಗದವರು ನಾಲ್ಕೈದು ದಶಕಗಳ ಹಿಂದೆ ಸಾಕಷ್ಟು ಜಮೀನು ಹೊಂದಿದ್ದರು. ಕ್ರಮೇಣ ಮಾರಾಟ ಮಾಡುತ್ತಾ ಬಂದರು. ಒಂದು ಕಾಲದಲ್ಲಿ ಜಮೀನ್ದಾರರಾಗಿದ್ದವರು ಇಂದು ಮಕ್ಕಳು, ಮೊಮ್ಮಕ್ಕಳಿಗೆ ಒಂದು ಮನೆ ಕಟ್ಟಿಕೊಳ್ಳಲು ನಿವೇಶನವೂ ಇಲ್ಲದಂತಹ ಸ್ಥಿತಿ ನಿರ್ಮಾಣವಾಗಿದೆ’ ಎಂದು ಹೇಳಿದರು.
‘ಉದ್ಯಮ ಸ್ಥಾಪನೆಯತ್ತ ಯುವಜನರು ಗಮನಹರಿಸಬೇಕು. ಸಣ್ಣ ಉದ್ದಿಮೆ ಸ್ಥಾಪಿಸಿದರೂ ಐದಾರು ಮಂದಿಗೆ ಕೆಲಸ ಕೊಡಬಹುದು. ಮಹಿಳೆಯರು ತಯಾರಿಸಿದ ಅನೇಕ ವಸ್ತುಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಇದೆ. ಇಂದು ಅನೇಕ ಕಡೆಗಳಲ್ಲಿ ರಾಗಿ, ಜೋಳ, ಗಂಧದ ಕಡ್ಡಿ, ಸಾಂಬಾರು ಪದಾರ್ಥ ಸೇರಿದಂತೆ ಅನೇಕ ವಸ್ತುಗಳನ್ನು ಮಾರಾಟ ಮಾಡಲಾಗುತ್ತಿದೆ. ಇದು ಹೆಚ್ಚಾಗುವಂತೆ ಮಾಡಿದರೆ ಉತ್ತಮ’ ಎಂದರು.
‘ಪ್ರಸ್ತುತ ಉಳಿತಾಯದ ಮನೋಭಾವ ಕಾಣಿಸುತ್ತಿಲ್ಲ. ಖರ್ಚು ಜಾಸ್ತಿಯಾಗಿದೆ. ಈಗಿನ ಪೀಳಿಗೆಯವರು ಸಾಲ ಮಾಡಿಯಾದರೂ ಆಸೆ ಪೂರೈಸಿಕೊಳ್ಳಬೇಕೆಂಬ ಮನಸ್ಥಿತಿ ಬಂದಿದೆಯೇ ಹೊರತು ಉಳಿತಾಯದ ಕುರಿತು ಯೋಚಿಸುತ್ತಿಲ್ಲ. ಹೀಗಾದರೆ ಜೀವನದಲ್ಲಿ ನೆಲೆ ಕಾಣುವುದು ಕಷ್ಟವಾಗುತ್ತದೆ’ ಎಂದು ಹೇಳಿದರು.
ಆದಿಚುಂಚನಗಿರಿ ಶಾಖಾ ಮಠದ ಸೋಮೇಶ್ವರನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಾಸಕ ಕೆ.ಹರೀಶ್ ಗೌಡ ಅವರ ಪತ್ನಿ ಗೌರಿ, ನಗರಪಾಲಿಕೆ ಮಾಜಿ ಸದಸ್ಯರಾದ ಭಾಗ್ಯ ಮಹದೇಶ್, ವಿಜಯಕುಮಾರ್ ನಾಗನಾಳ, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಮರಿಸ್ವಾಮಿ, ಪ್ರಗತಿಬಂಧು ಸ್ವಸಹಾಯ ಸಂಘದ ಪದಾಧಿಕಾರಿಗಳಾದ ಶೀಲಾ ಸತ್ಯನಾರಾಯಣ್, ಶಶಿರೇಖಾ, ಯಶೋದಾ, ಲೀಲಾವತಿ, ಶೋಭಾ, ಶೀಲಾ, ಲತಾದೇವಿ, ಗೌರಿ, ಧನಲಕ್ಷ್ಮೀ, ಸುನಂದಾ, ಸುಶೀಲಾ, ಕಮಲಶ್ರೀ, ಟ್ರಸ್ಟ್ ಮೇಲ್ವಿಚಾರಕ ಕೆ.ವಿಜಯಕುಮಾರ್ ಪಾಲ್ಗೊಂಡಿದ್ದರು.