ADVERTISEMENT

‘ಸೂಕ್ಷ್ಮ ನೀರಾವರಿ ಪದ್ಧತಿ ಅನುಸರಿಸಿ’

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2024, 6:09 IST
Last Updated 21 ಸೆಪ್ಟೆಂಬರ್ 2024, 6:09 IST
ತಿ.ನರಸೀಪುರ ತಾಲ್ಲೂಕು ಕಾಳಬಸವನಹುಂಡಿ ಗ್ರಾಮದಲ್ಲಿ ಗುರುವಾರ ನಡೆದ ತರಬೇತಿ ಕಾರ್ಯಕ್ರಮದಲ್ಲಿ ಮಧುಲತಾ ಎಚ್.ಬಿ. ಮಾತನಾಡಿದರು
ತಿ.ನರಸೀಪುರ ತಾಲ್ಲೂಕು ಕಾಳಬಸವನಹುಂಡಿ ಗ್ರಾಮದಲ್ಲಿ ಗುರುವಾರ ನಡೆದ ತರಬೇತಿ ಕಾರ್ಯಕ್ರಮದಲ್ಲಿ ಮಧುಲತಾ ಎಚ್.ಬಿ. ಮಾತನಾಡಿದರು   

ಮೈಸೂರು: ‘ಸೂಕ್ಷ್ಮ ನೀರಾವರಿ ಪದ್ಧತಿ ಅಳವಡಿಕೆಯಿಂದ ರೈತರು ಅಧಿಕ ಇಳುವರಿ ಪಡೆಯಬಹುದು. ಜತೆಗೆ, ಮಣ್ಣು ಮತ್ತು ನೀರಿನ ಸಂರಕ್ಷಣೆಯನ್ನೂ ಮಾಡಬಹುದು’ ಎಂದು ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕಿ ಮಧುಲತಾ ಎಚ್.ಬಿ. ತಿಳಿಸಿದರು.

ತಿ.ನರಸೀಪುರ ತಾಲ್ಲೂಕು ಕಾಳಬಸವನಹುಂಡಿ ಗ್ರಾಮದಲ್ಲಿ ನಾಗನಹಳ್ಳಿಯ ಜಿಲ್ಲಾ ಕೃಷಿ ತರಬೇತಿ ಕೇಂದ್ರದಿಂದ ‘ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ’ಯಡಿ ಗುರುವಾರ ಹಮ್ಮಿಕೊಂಡಿದ್ದ ‘ಕೃಷಿ ಮತ್ತು ತೋಟಗಾರಿಕಾ ಬೆಳೆಗಳಲ್ಲಿ ಸೂಕ್ಷ್ಮ ನೀರಾವರಿ ವಿಧಾನಗಳು, ರಸಾವರಿ ಮತ್ತು ಸಮಗ್ರ ಬೆಳೆ ನಿರ್ವಹಣೆ’ ಕುರಿತ ಹೊರಾಂಗಣ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ರೈತರು ಜಮೀನಿನಲ್ಲಿ ಮಣ್ಣು ಮತ್ತು ನೀರನ್ನು ಸಂರಕ್ಷಿಸಲು ಅನುಸರಿಸಬೇಕಾದ ತಾಂತ್ರಿಕ ವಿಧಾನಗಳ ಬಗ್ಗೆ ಮಾಹಿತಿ ನೀಡಿದರು.

ADVERTISEMENT

ಹನಿ ನೀರಾವರಿ ಪದ್ಧತಿಯಲ್ಲಿ ಕೃಷಿ ಹಾಗೂ ತೋಟಗಾರಿಕಾ ಬೆಳೆಗಳಿಗೆ ರಸಾವರಿ ಪದ್ಧತಿ ಅಳವಡಿಕೆ ಹಾಗೂ ಹನಿ ನೀರಾವರಿ ಘಟಕಗಳ ನಿರ್ವಹಣೆ ಬಗ್ಗೆ ಬೇಸಾಯಶಾಸ್ತ್ರಜ್ಞ ಅಂಜನಪ್ಪ ತರಬೇತಿ ನೀಡಿದರು.

ಭತ್ತ, ಕಬ್ಬು ಹಾಗೂ ಮುಸುಕಿನಜೋಳ ಬೆಳೆಗಳಲ್ಲಿ ಕೀಟ ಮತ್ತು ರೋಗ ರೋಗಗಳ ಸಮಗ್ರ ಪೀಡೆ ನಿರ್ವಹಣೆ ಬಗ್ಗೆ ವಿಸ್ತರಣಾ ಶಿಕ್ಷಣ ಘಟಕದ ನಿವೃತ್ತ ಪ್ರಾಧ್ಯಾಪಕ ಗೋವಿಂದರಾಜ್ ತಿಳಿಸಿಕೊಟ್ಟರು.

ಕೃಷಿ ಭಾಗ್ಯ, ಸೂಕ್ಷ್ಮ ನೀರಾವರಿ, ಬೆಳೆ ಸಮೀಕ್ಷೆ ಯೋಜನೆಗಳು ಹಾಗೂ ಇಲಾಖೆಯ ಯೋಜನೆಗಳ ಬಗ್ಗೆ ತಿ.ನರಸೀಪುರ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕಿ ಕೆ.ಎಸ್. ಸುಹಾಸಿನಿ ಮಾಹಿತಿ ನೀಡಿದರು. ಹಸಿರೆಲೆ ಗೊಬ್ಬರ ಹಾಗೂ ಸಾವಯವ ಗೊಬ್ಬರದ ಮಹತ್ವದ ಬಗ್ಗೆ ನಿವೃತ್ತ ಸಹಾಯಕ ಕೃಷಿ ಅಧಿಕಾರಿ ಸ್ವಾಮಿ ತಿಳಿಸಿದರು.

ಕೃಷಿ ಅಧಿಕಾರಿಗಳಾದ ಶಿಲ್ಪಾ ಜಿ.ಕೆ, ಕಾವ್ಯಾ ಹಾಗೂ ‘ಆತ್ಮ’ ಸಿಬ್ಬಂದಿ ಹೇಮಂತ್, ಅರ್ಜುನ್ ಹಾಜರಿದ್ದರು. ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ವಿವಿಧ ಗ್ರಾಮದ 50 ರೈತರು ತರಬೇತಿಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.