
ಮೈಸೂರು: ‘ಕರ್ನಾಟಕವನ್ನು 2030ಕ್ಕೆ ಏಡ್ಸ್ ಮುಕ್ತ ರಾಜ್ಯವನ್ನಾಗಿ ಮಾಡುವ ಗುರಿ ಇದ್ದು, ಇದಕ್ಕಾಗಿ ಎಲ್ಲರೂ ಕೈಜೋಡಿಸಬೇಕಿದೆ’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಏಡ್ಸ್ ಪ್ರಿವೆನ್ಶನ್ ಸೊಸೈಟಿ ಸಹಯೋಗದಲ್ಲಿ ನಗರದ ಜೆ.ಕೆ. ಮೈದಾನದ ಅಮೃತ ಮಹೋತ್ಸವ ಭವನದಲ್ಲಿ ಸೋಮವಾರ ವಿಶ್ವ ಏಡ್ಸ್ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
‘ಎಚ್ಐವಿ ಸೋಂಕಿತರಿಗೆ ಸೂಕ್ತ ಸಮಯಕ್ಕೆ ಎ.ಆರ್.ಟಿ ಚಿಕಿತ್ಸೆ ನೀಡಿ ಸೋಂಕು ಏಡ್ಸ್ ಆಗಿ ಪರಿವರ್ತನೆಯಾಗದಂತೆ ನೋಡಿಕೊಳ್ಳಬೇಕು’ ಎಂದು ಸೂಚಿಸಿದರು.
‘ಇಂದು ಎ.ಆರ್.ಟಿ ಚಿಕಿತ್ಸೆ ಹಾಗೂ ಖಾಯಿಲೆ ಹರಡದಂತೆ ವಹಿಸಬೇಕಾದ ಎಚ್ಚರಿಕೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿದೆ. ಎಚ್‌ಐವಿ ಸೋಂಕು ಅಸುರಕ್ಷಿತ ಲೈಂಗಿಕ ಸಂಪರ್ಕ, ಸೋಂಕಿತ ಗರ್ಭಿಣಿಯಿಂದ ಮಗುವಿಗೆ ಹಾಗೂ ಒಬ್ಬರು ಬಳಸುವ ಇಂಜೆಕ್ಷನ್ ಸೂಜಿಯನ್ನು ಮತ್ತೊಬ್ಬರು ಬಳಸುವುದರಿಂದ ಬರುತ್ತಿದೆ. ರೋಗದ ಬಗ್ಗೆ ಯುವಜನರು ಇರುವ ಹಾಸ್ಟೆಲ್, ಕಾಲೇಜು ಹಾಗೂ ಲೈಂಗಿಕ ಕಾರ್ಯಕರ್ತೆಯರು ವಾಸಿಸುವ ಸ್ಥಳಗಳಲ್ಲಿ ಹೆಚ್ಚು ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ’ ಎಂದರು.
‘ಎಚ್ಐವಿ ಬಾಧಿತರಿಗೆ ವೈರಲ್ ಲೋಡ್ ಕಡಿಮೆಯಾಗುವಂತೆ ಚಿಕಿತ್ಸೆ ನೀಡಲಾಗುತ್ತದೆ. ಇದರಿಂದ ಅವರು ಸಾಮಾನ್ಯ ವ್ಯಕ್ತಿಗಳ ರೀತಿ ಜೀವನ ನಡೆಸಬಹುದು. 2004ರಿಂದ ರಾಜ್ಯದಲ್ಲಿ ಸರಿಯಾಗಿ ಚಿಕಿತ್ಸೆ ಪಡೆಯದೆ 1,16,200 ಜನರು ಮೃತಪಟ್ಟಿದ್ದಾರೆ. ಸೋಂಕಿತರೊಟ್ಟಿಗೆ ಊಟ ಸೇವಿಸುವುದು, ನೆಗಡಿ ಕೆಮ್ಮಿನಿಂದ ಈ ರೋಗ ಹರಡುವುದಿಲ್ಲ. ಸೋಂಕಿತರಿಗೂ ಸಮಾಜದಲ್ಲಿ ಗೌರವಯುತ ಬದುಕು ನಡೆಸುವ ಹಕ್ಕಿದೆ’ ಎಂದು ಹೇಳಿದರು.
ಈ ಸಂದರ್ಭದಲ್ಲಿ ಐ.ಇ.ಸಿ ಸಾಮಗ್ರಿಗಳ ಬಿಡುಗಡೆ ಮಾಡಲಾಯಿತು. ಏಡ್ಸ್ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಉತ್ತಮ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು. ರಕ್ತದಾನ ಶಿಬಿರದ ವತಿಯಿಂದ ನೂತನ ವರ್ಷದ ಕ್ಯಾಲೆಂಡರನ್ನು ಬಿಡುಗಡೆ ಮಾಡಲಾಯಿತು.
ಶಾಸಕ ಕೆ.ಹರೀಶ್ ಗೌಡ ಅಧ್ಯಕ್ಷತೆ ವಹಿಸಿದ್ದರು. ವಿಧಾನಪರಿಷತ್ ಸದಸ್ಯ ಸಿ. ಎನ್.ಮಂಜೇಗೌಡ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಾನಸ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿರ್ದೇಶಕ ಡಾ. ವಸಂತ್ ಕುಮಾರ್, ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಡೀನ್ ಡಾ. ಕೆ. ಆರ್. ದಾಕ್ಷಾಯಿಣಿ, ಡಿಎಚ್‌ಒ ಪಿ.ಸಿ. ಕುಮಾರಸ್ವಾಮಿ, ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕದ ಜಿಲ್ಲಾ ಕಾರ್ಯಕ್ರಮಾಧಿಕಾರಿ ಡಾ. ಮೊಹಮ್ಮದ್ ಸಿರಾಜ್ ಅಹಮ್ಮದ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ವಿಭಾಗೀಯ ಸಹ ನಿರ್ದೇಶಕಿ ಡಾ.ಬಿ. ಮಲ್ಲಿಕಾ, ಕಾಂಗ್ರೆಸ್ ಮುಖಂಡರಾದ ಎಚ್.ವಿ. ರಾಜೀವ್, ಬಿ.ಜೆ. ವಿಜಯ್‌ಕುಮಾರ್ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಿಂದ ಜಾಥಾ ಏಡ್ಸ್ ದಿನಾಚರಣೆ ನಿಮಿತ್ತ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಆಶಯದೊಂದಿಗೆ ನಗರದಲ್ಲಿ ಸೋಮವಾರ ಪ್ರತ್ಯೇಕ ಜಾಥಾ ನಡೆದವು. ಆರೋಗ್ಯ ಇಲಾಖೆ ವತಿಯಿಂದ ಕೋಟೆ ಆಂಜನೇಯಸ್ವಾಮಿ ದೇಗುಲದಿಂದ ಜೆ.ಕೆ.ಮೈದಾನದವರೆಗೆ ನಡೆದ ಜಾಥಾಕ್ಕೆ ಏಡ್ಸ್ ಪ್ರಿವೆನ್ಶನ್ ಸೊಸೈಟಿಯ ಯೋಜನಾ ನಿರ್ದೇಶಕಿ ಪದ್ಮಾ ಬಸವಂತಪ್ಪ ಚಾಲನೆ ನೀಡಿದರು. ವಿವಿಧ ಶಾಲಾ–ಕಾಲೇಜು ವಿದ್ಯಾರ್ಥಿಗಳು ಎಚ್‌ಐವಿ ಏಡ್ಸ್ ಜಾಗೃತಿ ಸಂದೇಶಗಳ ಫಲಕಗಳನ್ನು ಹಿಡಿದು ಹೆಜ್ಜೆ ಹಾಕಿದರು. ಕೆವಿಸಿ ಆಸ್ಪತ್ರೆ ಹಾಗೂ ನರ್ಸಿಂಗ್ ಕಾಲೇಜು ವತಿಯಿಂದ ಹಮ್ಮಿಕೊಂಡಿದ್ದ ಎಚ್‌ಐವಿ ಜಾಗೃತಿ ಜಾಥಾಕ್ಕೆ ವೈದ್ಯರಾದ ವಿಎಚ್‌ವಿ ಸ್ವಾಮಿ ನಂದೀಶ್‌ಕುಮಾರ್ ದೀಪಕ್ ಗೌಡ ಕಾರ್ತಿಕ್ ಉದೂಪ ಚಾಲನೆ ನೀಡಿದರು. ಅರಸು ರಸ್ತೆ ಮಾರ್ಗವಾಗಿ ಹಳೇ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ಸಾಗಿತು. ಆಸ್ಪತ್ರೆ ಹಾಗೂ ನರ್ಸಿಂಗ್ ಕಾಲೇಜಿನ ವೈದ್ಯರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.