ಕೆ.ಆರ್. ನಗರ: ನಿರ್ಗತಿಕ ಅಲೆಮಾರಿ ಕುಟುಂಬಗಳಿಗೆ ಕೂಡಲೇ ಮೂಲ ಸೌಕರ್ಯ ಒದಗಿಸಬೇಕು ಎಂದು ದಲಿತ ಸಂಘರ್ಷ ಸಮಿತಿ ಮುಖಂಡ ನಿಂಗರಾಜ್ ಮಲ್ಲಾಡಿ ಸರ್ಕಾರವನ್ನು ಒತ್ತಾಯಿಸಿದರು.
ಇಲ್ಲಿನ ಗೌತಮ ಬುದ್ಧ ನಗರದಲ್ಲಿ 25 ಅಲೆಮಾರಿ ಕುಟುಂಬಗಳು ವಾಸ ಮಾಡುತ್ತಿರುವ ಸ್ಥಳಕ್ಕೆ ತಹಶೀಲ್ದಾರ್ ಜಿ.ಸುರೇಂದ್ರಮೂರ್ತಿ ಸೇರಿದಂತೆ ವಿವಿಧ ಇಲಾಖೆಯ ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ಮಂಗಳವಾರ ಭೇಟಿ ನೀಡಿದ್ದ ಸಂದರ್ಭದಲ್ಲಿ ಅವರು ಮಾತನಾಡಿದರು.
ಹುಟ್ಟು ಸಾವುಗಳಿಗೆ ದಾಖಲೆಗಳೇ ಇಲ್ಲದೆ, ಮರದ ಕೆಳಗೆ , ಪಾಳು ಮಂಟಪಗಳಲ್ಲಿ ಮಲಗುತ್ತಾ ನೆಲೆಯಿಲ್ಲದೆ ಬದುಕನ್ನು ಕಳೆದುಕೊಂಡಿದ್ದ ಅಲೆಮಾರಿ ಕುಟುಂಬಗಳಿಗೆ ಶಾಶ್ವತ ನೆಲೆ ಮತ್ತು ಇತರೆ ಮೂಲ ಸೌಕರ್ಯ ಕಲ್ಪಿಸಿಕೊಡುವಂತೆ ಸಂಘಟನೆ ನಿರಂತರ ಹೋರಾಟ ಮಾಡುತ್ತಿದೆ. ಜನ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮೂಲ ಸೌಕರ್ಯ ಕಲ್ಪಿಸದೆ ಇರುವುದರಿಂದ ಅವರಿಗೆ ಪ್ರಾಣಿ, ಪಕ್ಷಿಗಳ ರೀತಿ ವಾಸ ಮಾಡುವ ಸ್ಥಿತಿ ಬಂದಿದ್ದು ಸಂಘಟನೆ ಖಂಡಿಸುತ್ತದೆ ಎಂದರು. ಅಲೆಮಾರಿ ಕುಟುಂಬಗಳಿಗೆ ಮೂಲ ಸೌಕರ್ಯ ಕಲ್ಪಿಸಿಕೊಡಬೇಕು. ಇಲ್ಲದಿದ್ದರೆ ತೀವ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ್ ಜಿ.ಸುರೇಂದ್ರಮೂರ್ತಿ, ‘ಶಾಸಕ ಡಿ.ರವಿಶಂಕರ್ ಅವರ ಗಮನಕ್ಕೆ ತಂದು, ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ" ಎಂದು ಭರವಸೆ ನೀಡಿದರು.
ಸಮಾಜ ಕಲ್ಯಾಣ ಅಧಿಕಾರಿ ಶಂಕರಮೂರ್ತಿ, ಪುರಸಭೆ ಮುಖ್ಯಾಧಿಖಾರಿ ರಮೇಶ್, ಸೆಸ್ಕ್ ಎಇಇ ಅರಕೇಶ್ ಮೂರ್ತಿ, ಅಂಬೇಡ್ಕರ್ ನಿಗಮದ ಸುನಿಲ್ ಕುಮಾರ್, ಆರ್.ಐ. ಶಶಿಕುಮಾರ್, ವಿ.ಎ.ಸುನಿಲ್, ದಸಂಸದ ಎಚ್.ಬಿ ದಿವಾಕರ್, ದೇವೇಂದ್ರ ಕುಳುವಾಡಿ, ಸ್ಥಳೀಯ ನಿವಾಸಿಗಳಾದ ಜ್ಯೋತಿ, ದುಗ್ಗಮ್ಮ, ರಮೇಶ, ಲಕ್ಷ್ಮಿ, ಗಂಗಮ್ಮ, ಸುಶೀಲಮ್ಮ, ಮಹೇಶ, ಮಲ್ಲೇಶ, ರಂಗ , ಸೋಮು ಭಾಗವಹಿಸಿದ್ದರು.
ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ 79 ವರ್ಷ ಕಳೆದರೂ ಸಹ ಹಂದಿ ಗೂಡುಗಳಂತಿರುವ ಗುಡಿಸಲುಗಳಲ್ಲಿ ವಿದ್ಯುತ್ ಸಂಪರ್ಕವಿಲ್ಲದ ಕತ್ತಲೆ ಮನೆಯಲ್ಲಿ ಬದುಕು ಸಾಗಿಸುತ್ತಿದ್ದಾರೆ. ಕುಡಿಯಲು ಶುದ್ಧವಾದ ನೀರಿಲ್ಲದೆ ಕಲುಷಿತ ನೀರನ್ನು ಕುಡಿದು ಅನಾರೋಗ್ಯ ಪೀಡಿತರಾಗಿ ಬದುಕುತ್ತಿದ್ದಾರೆ ಎಂದು ದೂರಿದರು. ಮಳೆ ಬಂದರೆ ಗುಡಿಸಲುಗಳಿಗೆ ನೀರು ನುಗ್ಗುತ್ತದೆ ಇಂತಹ ದಯನೀಯ ಸ್ಥಿತಿಯಲ್ಲಿ ನಿರ್ಗತಿಕ ಅಲೆಮಾರಿ ಕುಟುಂಬಗಳು ಬದುಕುತ್ತಿದ್ದರೂ ಅಧಿಕಾರಿಗಳು ಕಂಡೂ ಕಾಣದಂತೆ ವರ್ತಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.