
ಮೈಸೂರಿನಲ್ಲಿ ನಡೆದ ಜಾಗೃತಿ ಸಮಾವೇಶದಲ್ಲಿ ರೈತ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ಹೊಸಕೋಟೆ ಬಸವರಾಜು ಮಾತನಾಡಿದರು
ಮೈಸೂರು: ಕಾರ್ಮಿಕ, ರೈತ, ಶ್ರಮಿಕ ವರ್ಗಗಳ ವಿರುದ್ಧವಾಗಿ ಕಾಯ್ದೆಗಳಿಗೆ ಕೇಂದ್ರ ಸರ್ಕಾರ ತಿದ್ದುಪಡಿ ತಂದಿರುವುದನ್ನು ವಿರೋಧಿಸಿ ಫೆ.12ರಂದು ದೇಶದಾದ್ಯಂತ ನಡೆಯುತ್ತಿರುವ ಅಖಿಲ ಭಾರತ ಮುಷ್ಕರಕ್ಕೆ ದಲಿತ, ಕಾರ್ಮಿಕ ಮತ್ತು ರೈತ ಸಂಘಟನೆಗಳು ಬೆಂಬಲ ಸೂಚಿಸಿದವು.
ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿಯು), ಸಂಯುಕ್ತ ಹೋರಾಟ ಕರ್ನಾಟಕದ ವಿವಿಧ ರೈತ ಸಂಘಟನೆಗಳು, ದಲಿತ ಸಂಘಟನೆಗಳು, ವಿದ್ಯಾರ್ಥಿ, ಯುವಜನ ಮಹಿಳಾ ಸಂಘಟನೆಗಳು ಎಂಜಿನಿಯರ್‌ಗಳ ಸಂಸ್ಥೆಯಲ್ಲಿ ಶನಿವಾರ ಆಯೋಜಿಸಿದ್ದ ಮುಷ್ಕರದ ಪೂರ್ವಭಾವಿ ಸಭೆಯಲ್ಲಿ ಪದಾಧಿಕಾರಿಗಳು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು. ಕಾರ್ಖಾನೆಗಳ ಕೆಲಸಕ್ಕೆ ರಜೆ ಹಾಕಿ ಮುಷ್ಕರದಲ್ಲಿ ಭಾಗವಹಿಸಲು ನಿರ್ಧರಿಸಿದರು.
ಸೆಂಟರ್ ಆಫ್ ಇಂಡಿಯಾ ಟ್ರೇಡ್ ಇಂಡಿಯಾದ (ಸಿಐಟಿಯು) ಜಿಲ್ಲಾ ಅಧ್ಯಕ್ಷ ಅಣ್ಣಪ್ಪ ಮಾತನಾಡಿ, ‘ಕೇಂದ್ರ ಸರ್ಕಾರ ಕಾರ್ಪೋರೇಟ್ ಕಂಪನಿಗಳ ಮತ್ತು ಬಂಡವಾಳ ಶಾಹಿಗಳ ಒತ್ತಡಕ್ಕೆ ಮಣಿದು, ಕಾರ್ಮಿಕರ ಸಂವಿಧಾನ ಬದ್ಧ ಹಕ್ಕುಗಳಿಗೆ ತಿಲಾಂಜಲಿ ಇಟ್ಟಿದೆ. ನೀತಿ ರೂಪಿಸುವವರು ಕೋಟ್ಯಾಧಿಪತಿಗಳಾಗಿದ್ದು, ಅವರಿಗೆ ದುಡಿಯುವ ವರ್ಗದ ನೋವು ಗೊತ್ತಿಲ್ಲ. ಪ್ರಸ್ತುತ ಒಳಿತು ಬಯಸಿ ದುಡಿಯುವವರನ್ನು ರಾಜಕೀಯ ಶಕ್ತಿಗಳು ನಿಯಂತ್ರಿಸುತ್ತಿವೆ’ ಎಂದರು.
‘ಭೂಸ್ವಾಧೀನ ಕಾಯ್ದೆ ತಿದ್ದುಪಡಿ ಮೂಲಕ ರೈತರಿಂದ ಭೂಮಿ ಕಸಿದುಕೊಳ್ಳಲಾಗುತ್ತಿದೆ’ ಎಂದು ದೂರಿದರು.
ಎಐಟಿಯುಸಿ ರಾಜ್ಯ ಕಾರ್ಯದರ್ಶಿ ಎಚ್.ಆರ್.ಶೇಷಾದ್ರಿ, ‘ಬಹುಮತವನ್ನು ಕೇಂದ್ರ ಸರ್ಕಾರ ದುರುಪಯೋಗ ಪಡಿಸಿಕೊಂಡು ಕಾರ್ಮಿಕ ಕಾಯ್ದೆಗಳನ್ನು ಜಾರಿಗೆ ತಂದಿದೆ. ಮುಷ್ಕರ ಎನ್ನುವುದು ಕಾರ್ಮಿಕರಿಗಿರುವ ಆಯುಧ. ಆದರೆ, ಅದನ್ನೇ ಕಿತ್ತುಕೊಳ್ಳುವ ಪ್ರಯತ್ನ ನಡೆಯುತ್ತಿದೆ’ ಎಂದು ಆರೋಪಿಸಿದರು.
ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನ ಸಂಚಾಲಕ ಶಂಭುಲಿಂಗಸ್ವಾಮಿ, ರಾಜ್ಯ ರೈತ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ಹೊಸಕೋಟೆ ಬಸವರಾಜು, ಎಐಟಿಯುಸಿ ಎನ್.ಎಸ್.ವಿರೇಶ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.