ADVERTISEMENT

ಸರ್ಕಾರದ ಕಾರ್ಯಕ್ರಮ ಅನುಷ್ಠಾನಕ್ಕೆ ನಮ್ಮೆಲ್ಲರ ಸಂಕಲ್ಪ: ಸಿ.ಎಂ ಬಸವರಾಜ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2021, 8:30 IST
Last Updated 9 ಆಗಸ್ಟ್ 2021, 8:30 IST
   

ಮೈಸೂರು: 'ವಿಶ್ವದಲ್ಲಿಯೇ ಅತಿಹೆಚ್ಚು ಸದಸ್ಯರಿರುವ ಪಕ್ಷ ಬಿಜೆಪಿ. ಪ್ರಧಾನಿ ನರೇಂದ್ರ ಮೋದಿ, ನಿಕಟಪೂರ್ವ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಪಕ್ಷದ ಪ್ರಮುಖರ ನಾಯಕತ್ವದಲ್ಲಿ 40 ವರ್ಷಗಳಿಂದ ಈ ಪಕ್ಷವನ್ನು ಕಟ್ಟಿ ಬೆಳೆಸಲಾಗುತ್ತಿದೆ. ಪಕ್ಷ ನಿಷ್ಠೆ, ಪಕ್ಷದ ಕಾರ್ಯಕ್ರಮಗಳ ಅನುಷ್ಠಾನ ನಮ್ಮೆಲ್ಲರ ಸಂಕಲ್ಪ ಆಗಬೇಕು. ಈ ಕೆಲಸವನ್ನು ಮುಂದಿನ 2 ವರ್ಷಗಳಲ್ಲಿ ಪ್ರಾಮಾಣಿಕವಾಗಿ ಮಾಡೋಣ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಮೈಸೂರು ನಗರದಲ್ಲಿ ಬಿಜೆಪಿ ಕಚೇರಿಗೆ ಭೇಟಿ ನೀಡಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.

'ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದು ಆಡಳಿತ ನಡೆಸಲು ಕಾರ್ಯಕರ್ತರ ಶ್ರಮವೇ ಕಾರಣ. ಸರ್ಕಾರದ ಕಾರ್ಯಕ್ರಮಗಳನ್ನು ಜನರಿಗೆ ಮುಟ್ಟಿಸುವ ಹಾಗೂ ಮನವರಿಕೆ ಮಾಡುವ ಕೆಲಸವನ್ನು ನಿರಂತರವಾಗಿ ಮಾಡುತ್ತಿದ್ದಾರೆ' ಎಂದರು.

ADVERTISEMENT

'ಯಶಸ್ವಿಯಾಗಿ ಕೋವಿಡ್ ನಿರ್ವಹಣೆ ಮಾಡಲಾಗುತ್ತಿದೆ. ಕೇವಲ 10 ತಿಂಗಳಲ್ಲಿ 24 ಸಾವಿರ ಹೊಸ ಬೆಡ್, 6 ಸಾವಿರ ಐಸಿಯು ಬೆಡ್ ಹಾಗೂ ಔಷಧೋಪಚಾರವನ್ನು ಒದಗಿಸಲಾಗಿದೆ. 2 ಸಾವಿರ ವೈದ್ಯರನ್ನು ನೇಮಕ ಮಾಡಲಾಗಿದೆ. ಕೋವಿಡ್ ವಿರುದ್ಧ ದೊಡ್ಡ ಸಮರವನ್ನೇ ಸಾರಿದ್ದೇವೆ. ಕೋವಿಡ್ ಇದ್ದರೂ ಆರ್ಥಿಕ ಚಟುವಟಿಕೆ ಮತ್ತೆ ಚಿಗುರುತ್ತಿದೆ' ಎಂದರು.

'ಕೋವಿಡ್ ನಿರ್ವಹಣೆಗೆ ಪ್ರಧಾನಿಯ ಮಾರ್ಗದರ್ಶನ ದೊರೆಯುತ್ತಿದೆ. ಎಲ್ಲಾ ವರ್ಗದವರಿಗೂ ಯೋಜನೆಗಳನ್ನು ರೂಪಿಸಿದ್ದು ಕೃಷಿ, ಆರೋಗ್ಯ, ನಗರ ಮತ್ತು ಗ್ರಾಮೀಣ ಅಭಿವೃದ್ಧಿ, ಸ್ಮಾರ್ಟ್ ಸಿಟಿ ಯೋಜನೆ ಜಾರಿಗೊಳಿಸಲಾಗಿದೆ. ಕೃಷಿ ಸಮ್ಮಾನ್ ಯೋಜನೆಯಡಿ ₹ 19,000 ಕೋಟಿ ಮೊತ್ತವನ್ನು ಪ್ರಧಾನಿ ವಿತರಿಸುತ್ತಿದ್ದಾರೆ' ಎಂದು ಮಾಹಿತಿ ನೀಡಿದರು.

ಸಚಿವರಾದ ಎಸ್.ಟಿ. ಸೋಮಶೇಖರ್, ಡಾ. ಕೆ ಸುಧಾಕರ, ಬೈರತಿ ಬಸವರಾಜ, ಮೈಸೂರು ಜಿಲ್ಲೆಯ ಶಾಸಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.