ADVERTISEMENT

ಬೇನಾಮಿ ಆಸ್ತಿ ಮಾಡಿದ ಶಾಸಕ ಎನ್‌. ಮಹೇಶ್: ಬಿಎಸ್‌ಪಿ ಮುಖಂಡ ಆರೋಪ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2020, 2:15 IST
Last Updated 3 ಡಿಸೆಂಬರ್ 2020, 2:15 IST
ರಾಜಶೇಖರ್
ರಾಜಶೇಖರ್   

ಕೊಳ್ಳೇಗಾಲ: ‘ಬಿಎಸ್‌ಪಿ ಉಚ್ಚಾಟಿತ ಶಾಸಕ ಎನ್.ಮಹೇಶ್ ಮಾಧ್ಯ ಮಗಳ ಮುಂದೆ ಹಸಿ ಸುಳ್ಳು ಹೇಳುತ್ತಿದ್ದಾರೆ’ ಎಂದು ಬಿಎಸ್‌ಪಿ ಕ್ಷೇತ್ರಾಧ್ಯಕ್ಷ ರಾಜಶೇಖರ್ ಮೂರ್ತಿ ಆರೋಪಿಸಿದರು.

‘ಎನ್.ಮಹೇಶ್ ಅವರು ಕ್ಷೇತ್ರದ ಮತದಾರರಿಗೆ ಅನ್ಯಾಯ ಮಾಡಿ ಮೈಸೂರು, ಬೆಂಗಳೂರು, ಕನಕಪುರದಲ್ಲಿ ಅಕ್ರಮವಾಗಿ ಬೇನಾಮಿ ಆಸ್ತಿ ಮಾಡಿದ್ದಾರೆ. ಆದರೆ, ಜನರ ಮುಂದೆ ನಿಂತು ನಾನು ಯಾರಿಗೂ ದ್ರೋಹ ಮಾಡಿಲ್ಲ ಎಂದು ಹೇಳುತ್ತಿದ್ದಾರೆ. ಹಾಗಾದರೆ ಸಮಿಶ್ರ ಸರ್ಕಾರ ಪತನವಾಗುವ ಸಂದರ್ಭದಲ್ಲಿ ಅವರು ಏಕೆ ವಿಧಾನ ಸಭೆಗೆ ಪ್ರವೇಶ ಮಾಡಲಿಲ್ಲ’ ಎಂದರು.

‘ಪಕ್ಷದ ಅಧಿನಾಯಕಿ ಮಾಯಾವತಿ ಅವರು ಸಮಿಶ್ರ ಸರ್ಕಾರ ಪತನವಾಗುವ ಸಂದರ್ಭದಲ್ಲಿ ಸೂಚನೆ ನೀಡಿದ್ದರೂ ಅವರು ಏಕೆ ವಿಧಾನಸಭೆಗೆ ಗೈರಾದರು? ಕೇಳಿದರೆ ನಾನು ತಮಿಳುನಾಡಿನ ಈಶಾ ಫೌಂಡೇಷನ್‌ನಲ್ಲಿದ್ದೆ ಎಂದು ಸುಳ್ಳು ಹೇಳಿದ್ದಾರೆ. ಬಿಜೆಪಿ ರಾಜ್ಯ ಘಟಕದ ಉಪಾದ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಕೊಳ್ಳೇಗಾಲಕ್ಕೆ ಬಂದಾಗ ಸರ್ಕಾರ ರಚನೆಯಾಗುವುದಕ್ಕೆ ಶಾಸಕ ಎನ್.ಮಹೇಶ್ ಅವರೂ ಪ್ರಮುಖ ಕಾರಣಕರ್ತರು’ ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದರು’ ಎಂದು ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಹೇಳಿದರು.

ADVERTISEMENT

‘ಮಹೇಶ್ ಬಿಎಸ್‌ಪಿಗೆ ದ್ರೋಹ ಮಾಡಿದ್ದಾರೆ. ಬಿಜೆಪಿಗೆ ಕುದುರೆ ವ್ಯಾಪಾರವಾಗಿದ್ದಾರೆ. ಶಾಸಕ ಸ್ಥಾನವನ್ನೂ ಮಾರಾಟ ಮಾಡಿಕೊಂಡಿದ್ದಾರೆ. ಕ್ಷೇತ್ರದಲ್ಲಿ ಯಾವುದೇ ಕಾಮಗಾರಿಗೆ ಭೂಮಿ ಪೂಜೆ ಮಾಡಬೇಕಾದರೆ ಮೊದಲು ಕಮಿಷನ್ ನೀಡಬೇಕು. ಇಲ್ಲದೆ ಇದ್ದರೆ ಭೂಮಿಪೂಜೆ ಮಾಡುವುದಿಲ್ಲ ಎನ್ನುತ್ತಾರೆ. ಈ ಲಂಚವನ್ನು ಸಹ ಅವರ ಆಪ್ತ ಸಹಾಯಕರು ಪಡೆಯುತ್ತಾರೆ’ ಎಂದು ಆರೋಪಿಸಿದರು.

ಉಪಾಧ್ಯಕ್ಷ ಹನುಮಂತು, ಟೌನ್ ಪ್ರಧಾನ ಕಾರ್ಯದರ್ಶಿ ರಂಗಸ್ವಾಮಿ, ಮುಖಂಡ ಚೈನಾರಾಂ ಕಾಪಡಿ, ಮಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.