ADVERTISEMENT

ಲೈಂಗಿಕ ಕಿರುಕುಳ ಆರೋಪ: ಡಾ.ಕಾಂಬ್ಳೆ ದೋಷಮುಕ್ತ

​ಪ್ರಜಾವಾಣಿ ವಾರ್ತೆ
Published 18 ಜೂನ್ 2019, 15:46 IST
Last Updated 18 ಜೂನ್ 2019, 15:46 IST

ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ (ಕೆಎಸ್‌ಒಯು) ಹಿಂದಿ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಪ್ರಾಧ್ಯಾಪಕ ಡಾ.ಅಶೋಕ್‌ ಕಾಂಬ್ಳೆ ಅವರ ಮೇಲಿದ್ದ ಲೈಂಗಿಕ ಕಿರುಕುಳ ಆರೋಪದಿಂದ ಮುಕ್ತಗೊಳಿಸಿ ಹೈಕೋರ್ಟ್‌ ಆದೇಶ ನೀಡಿದೆ.

2013ರಲ್ಲಿ ತಮ್ಮ ವಿಭಾಗದಲ್ಲಿ ತಾತ್ಕಾಲಿಕ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದ ಕಂಪ್ಯೂಟರ್ ಸಹಾಯಕಿಗೆ ಹೆಚ್ಚಿನ ಕಾರ್ಯಭಾರ ನೀಡಿದ್ದ ಕಾರಣ ಮಹಿಳಾ ಸಿಬ್ಬಂದಿ ದೂರು ನೀಡಿದ್ದರು. ಅಂದಿನ ಕುಲಪತಿ ಪ್ರೊ.ಎಂ.ಜಿ.ಕೃಷ್ಣನ್‌ ಅವರು ವಿಚಾರಣಾ ಸಮಿತಿಯನ್ನು ರಚಿಸಿ ತನಿಖೆ ನಡೆಸಿದ್ದರು.

‘ಈ ಸಮಿತಿಯು ತನ್ನ ಮೊದಲ ವರದಿಯಲ್ಲಿ ‘ಇದು ಕಾರ್ಯಭಾರ ಪ್ರಕರಣವಾಗಿದ್ದು, ಲೈಂಗಿಕ ದೌರ್ಜನ್ಯ ಪ್ರಕರಣ ಅಲ್ಲವೆಂದು ವರದಿ ನೀಡಿತ್ತು. ಆದರೆ, ಪ್ರೊ.ಕೃಷ್ಣನ್‌ ಅವರು, ಸಮಿತಿಯ ಅಧ್ಯಕ್ಷರನ್ನು ಬದಲಿಸಿದ ಬಳಿಕ, ಲೈಂಗಿಕ ದೌರ್ಜನ್ಯ ಆರೋಪ ಸಾಬೀತಾಗಿರುವುದಾಗಿ ವರದಿ ನೀಡಿತ್ತು.

ADVERTISEMENT

ಈ ವರದಿಯನ್ನು ಪ್ರಶ್ನಿಸಿ ಡಾ.ಕಾಂಬ್ಳೆ ಅವರು ಹೈ ಕೋರ್ಟ್‌ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ್ದ ನ್ಯಾಯಾಲಯವು ಮಹಿಳಾ ಸಿಬ್ಬಂದಿಯು ಲೈಂಗಿಕ ದೌರ್ಜನ್ಯ ನಡೆಸಿರುವುದಾಗಿ ಮೌಖಿಕ ಅಥವಾ ಲಿಖಿತವಾಗಿ ಹೇಳಿಲ್ಲದೇ ಇರುವ ಕಾರಣ, ಆರೋಪದಲ್ಲಿ ಹುರುಳಿಲ್ಲ ಎಂದು ಅಭಿಪ್ರಾಯಪಟ್ಟಿದೆ. ಇದು ಕಾರ್ಯಭಾರಕ್ಕೆ ಸಂಬಂಧಿಸಿದ ಪ್ರಕರಣವಾಗಿದ್ದು, ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ್ದಲ್ಲ ಎಂದು ತೀರ್ಪು ನೀಡಿದೆ.

‘ದುರುದ್ದೇಶದಿಂದ ನನ್ನ ವಿರುದ್ಧ ಈ ಆರೋಪ ಹೊರೆಸಲಾಗಿತ್ತು. ಇದನ್ನು ಪ್ರಶ್ನಿಸಿ ಹೈ ಕೋರ್ಟ್‌ ಮೆಟ್ಟಿಲೇರಿದ್ದೆ. ಈಗ ನ್ಯಾಯ ಸಿಕ್ಕಿದೆ’ ಎಂದು ಡಾ.ಕಾಂಬ್ಳೆ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.