ಮೈಸೂರು: ದಸರೆಯಲ್ಲಿ, ವಿದ್ಯುತ್ ದೀಪಗಳ ಬೆಳಕಿನಿಂದ ಝಗಮಗಿಸುವ ನಗರದ ಅಂದವನ್ನು ಕಣ್ತುಂಬಿಕೊಳ್ಳಲು ಬಯಸುವವರಿಗೆ ನಗರ ಪ್ರದಕ್ಷಿಣೆ ಹಾಕಿಸಲು ‘ಅಂಬಾರಿ’ ರಥ ಸಿದ್ಧವಾಗಿದೆ. 21 ದಿನ ಕಾಲ ಈ ವಿಶೇಷ ಸಾರಿಗೆ ಸೇವೆ ಪ್ರವಾಸಿಗರಿಗೆ ಲಭ್ಯವಾಗಲಿದೆ.
ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು 2020ರಿಂದ ಪ್ರತಿ ವರ್ಷ ದಸರೆಯ ಸಂದರ್ಭದಲ್ಲಿ ಪ್ರವಾಸಿಗರಿಗೆ ನಗರದಲ್ಲಿ ‘ಅಂಬಾರಿ’ ಬಸ್ ಸೇವೆಯನ್ನು ಒದಗಿಸುತ್ತ ಬಂದಿದೆ. ಮೊದಲ ವರ್ಷ ಒಂದು ಬಸ್‌ನೊಂದಿಗೆ ಆರಂಭವಾದ ಸೇವೆಯು ಈಗ 6 ಬಸ್‌ಗಳನ್ನು ಹೊಂದಿದೆ. ವಿದ್ಯುತ್ ದೀಪಾಂಲಕಾರ ವೀಕ್ಷಣೆಗೆಂದೇ ಈ ಡಬ್ಬಲ್ ಡೆಕ್ಕರ್ ಬಸ್ ಅನ್ನು ವಿನ್ಯಾಸಗೊಳಿಸಿದ್ದು, ಮೇಲ್ಬಾಗದಲ್ಲಿ ತೆರೆದ ಮಾದರಿ ಡೆಕ್‌ನಲ್ಲಿ ಕುಳಿತು ರಾತ್ರಿ ನಗರ ಸಂಚಾರ ಕೈಗೊಳ್ಳುವುದೇ ಒಂದು ವಿಶಿಷ್ಟ ಅನುಭವವಾಗಿದೆ.
‘ ಕಳೆದ ವರ್ಷ ದಾಖಲೆಯ ಸಂಖ್ಯೆಯಲ್ಲಿ ಪ್ರವಾಸಿಗರು ‘ಅಂಬಾರಿ’ ಏರಿದ್ದು, 12 ಸಾವಿರ ಮಂದಿ ಈ ಮೂಲಕ ನಗರ ಪ್ರದಕ್ಷಿಣೆ ಮಾಡಿದ್ದರು. ಈ ವರ್ಷ ಈಗಾಗಲೇ ಬುಕಿಂಗ್ ಆರಂಭ ಆಗಿದ್ದು, ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ’ ಎನ್ನುತ್ತಾರೆ ಕೆಎಸ್‌ಟಿಡಿಸಿ ಮೈಸೂರು ಸಾರಿಗೆ ವಿಭಾಗದ ವ್ಯವಸ್ಥಾಪಕ ಕೆ.ಆರ್. ಮಧುರಾಜ್.
ಈ ಬಾರಿ ಮೈಸೂರಿನ 6 ಡಬ್ಬಲ್ ಡೆಕ್ಕರ್ ಬಸ್‌ಗಳ ಪೈಕಿ 1 ಬಸ್ ತುಮಕೂರು ದಸರಾಕ್ಕೆ ಹೋಗುತ್ತಿದ್ದು, ಉಳಿದ ಐದು ಬಸ್‌ಗಳ ಸೇವೆ ಮಾತ್ರ ಸಿಗಲಿದೆ.
22ರಂದು ಚಾಲನೆ: ಈ ಬಾರಿ ಸೆ. 22ರಂದು ದಸರೆಯ ಉದ್ಘಾಟನೆ ದಿನದಂದು ಈ ಬಸ್ ಸೇವೆಗೂ ಚಾಲನೆ ದೊರೆಯಲಿದ್ದು, ಅ. 10ರವರೆಗೂ ಈ ಡಬಲ್ ಡೆಕ್ಕರ್ ಬಸ್‌ಗಳು ನಗರದಲ್ಲಿ ಸಂಚರಿಸಲಿವೆ. ದೀಪಾಲಂಕಾರ ಅವಧಿ ವಿಸ್ತರಣೆ ಆದಲ್ಲಿ ಬಸ್ ಸೇವೆ ಕೂಡ ಆಗುವ ಸಾಧ್ಯತೆ ಇದೆ.
ಯಾವ ಮಾರ್ಗ?: ಈ ಬಸ್‌ನ ಸಂಚಾರವು ಹೋಟೆಲ್ ಮಯೂರ ಹೊಯ್ಸಳದಿಂದ ಆರಂಭವಾಗಲಿದ್ದು, ಹಳೇ ಡಿಸಿ ಕಚೇರಿ, ಮೈಸೂರು ವಿ.ವಿ. ಕ್ರಾಫರ್ಡ್ ಭವನ, ಓರಿಯೆಂಟಲ್ ಕೇಂದ್ರ ಗ್ರಂಥಾಲಯ, ರಾಮಸ್ವಾಮಿ ವೃತ್ತ, ಸಂಸ್ಕೃತ ಪಾಠಶಾಲೆ, ಅರಮನೆ ದಕ್ಷಿಣ ದ್ವಾರ, ಜಯಮಾರ್ತಾಂಡ ಗೇಟ್, ಹಾರ್ಡಿಂಜ್ ಸರ್ಕಲ್, ಕೆ.ಆರ್.ಸರ್ಕಲ್, ಸಯ್ಯಾಜಿ ರಾವ್ ರಸ್ತೆ, ಆಯುರ್ವೇದಿಕ್ ವೈದ್ಯಕೀಯ ಆಸ್ಪತ್ರೆ, ರೈಲ್ವೆ ನಿಲ್ದಾಣ ರಸ್ತೆ ಮೂಲಕ ಹೋಟೆಲ್ ಮಯೂರ ಹೊಯ್ಸಳಕ್ಕೆ ವಾಪಸ್ ಆಗಲಿದೆ. ಈ ಪ್ರಯಾಣ ಸರಿಸುಮಾರು ಒಂದು ಗಂಟೆಯದ್ದಾಗಿದೆ.
ಸಮಯವೇನು?: ಪ್ರತಿ ದಿನ ಸಂಜೆ 6.30, ರಾತ್ರಿ 8 ಮತ್ತು ರಾತ್ರಿ 9.30ಕ್ಕೆ ಈ ಬಸ್‌ಗಳು ಹೋಟೆಲ್ ಮುಂಭಾಗದಿಂದ ಹೊರಡಲಿವೆ. ಬಸ್‌ನ ಅಪ್ಪರ್ ಡೆಕ್‌ಗೆ (ಮೇಲಿನ ಆಸನ) ₹500 ಹಾಗೂ ಲೋಯರ್ ಡೆಕ್‌ಗೆ (ಕೆಳಗಿನ ಆಸನ) ₹250 ದರ ನಿಗದಿಪಡಿಸಲಾಗಿದೆ. ಕಳೆದ ವರ್ಷವೂ ಇದೇ ದರವಿತ್ತು.
ಬುಕ್ಕಿಂಗ್ ಹೇಗೆ?: ಆಸಕ್ತರು ಕೆಎಸ್‌ಟಿಡಿಸಿ ವೆಬ್‌ಸೈಟ್: www.kstdc.co ಮೂಲಕ ಬುಕಿಂಗ್ ಮಾಡಬಹುದು. ಭೇಟಿ ನೀಡಬಹುದು. ಮಾಹಿತಿಗೆ ದೂ.ಸಂ. 0821–2423652 ಸಂಪರ್ಕಿಸಬಹುದು. ಪ್ರಯಾಣಿಕರ ಸಂಖ್ಯೆ ಆಧರಿಸಿ ಸ್ಥಳದಲ್ಲಿಯೂ ಟಿಕೆಟ್ ಪಡೆಯಲು ಅವಕಾಶವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.