ಮೈಸೂರು: ಇಲ್ಲಿನ ಅಂಬಾವಿಲಾಸ ಅರಮನೆ ಆವರಣದಲ್ಲಿ ಮಧ್ಯಾಹ್ನ 1.18ಕ್ಕೆ ಆರಂಭವಾದ ವಿಜಯದಶಮಿ ಮೆರವಣಿಗೆಯು ಬನ್ನಿಮಂಟಪದ ಬಳಿ ಮುಕ್ತಾಯವಾದಾಗ ಸಂಜೆ 7.15 ಆಗಿತ್ತು.
ಕಲಾತಂಡಗಳ ಕಲಾವಿದರು ಉತ್ಸಾಹದಿಂದ ಹೆಜ್ಜೆ ಹಾಕಿ ಕಲಾಪ್ರತಿಭೆಯನ್ನು ಪ್ರದರ್ಶಿಸಿದರು. ಗಜಪಡೆಯೂ ಯಾವುದೇ ತೊಂದರೆ ಇಲ್ಲದಂತೆ ಹೆಜ್ಜೆ ಹಾಕುತ್ತಾ ಸಾಗಿತು.
ಗಜಪಡೆಯಲ್ಲಿ ಇದೇ ಮೊದಲ ಬಾರಿಗೆ ಸ್ಥಾನ ಪಡೆದು ಮೈಸೂರಿಗೆ ಆಗಮಿಸಿದ್ದ ಮೂರು ಹೊಸ ಆನೆಗಳು ಕಿಕ್ಕಿರಿದು ನೆರೆದಿದ್ದ ಜನಸ್ತೋಮದ ನಡುವೆ ಜಂಬೂಸವಾರಿ ಮೆರವಣಿಗೆಯಲ್ಲಿ ಶಾಂತವಾಗಿ ಭಾಗವಹಿಸಿ ಭರವಸೆ ಮೂಡಿಸಿದವು.
ಈ ಬಾರಿಯ ದಸರೆಯಲ್ಲಿ ಒಟ್ಟು 14 ಆನೆಗಳು ಪಾಲ್ಗೊಂಡು ಜನರನ್ನು ಆಕರ್ಷಿಸಿದವು. ಅವುಗಳಲ್ಲಿ ಪಟ್ಟದ ಆನೆ ಶ್ರೀಕಂಠ, ಹೆಣ್ಣಾನೆಗಳಾದ ರೂಪಾ ಮತ್ತು ಹೇಮಾವತಿ ಇದೇ ಮೊದಲ ಬಾರಿಗೆ ದಸರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದವು. ಸಾಲಾನೆಯಾಗಿ ಸಾಗಿದ ಶ್ರೀಕಂಠ ಅರಮನೆಯಿಂದ ಬನ್ನಿಮಂಟಪದವರೆಗೆ, ರಸ್ತೆಯ ಎರಡೂ ಬದಿಯಲ್ಲಿ ನೆರೆದಿದ್ದ ಅಪಾರ ಸಂಖ್ಯೆಯ ಜನರ ಕೂಗಾಟ, ಕಲಾತಂಡಗಳ ಶಬ್ದಕ್ಕೆ ಅಂಜದೇ ಸಾಗಿ ಗಮನಸೆಳೆದ.
ಈ ‘ಗಜಪಡೆ’ಯಲ್ಲೇ ಕಿರಿಯ ಆನೆ ಎನಿಸಿದ 11 ವರ್ಷದ ಹೇಮಾವತಿ ಹಾಗೂ ಭೀಮನಕಟ್ಟೆ ಶಿಬಿರದ ರೂಪಾ ಆನೆ ಇದೇ ಮೊದಲ ಬಾರಿಗೆ ದಸರೆಯಲ್ಲಿ ಪಾಲ್ಗೊಂಡು ಜನರ ಗಮನಸೆಳೆದವು. ಮೆರವಣಿಗೆಯಲ್ಲಿ ವಿಚಲಿತವಾಗದೆ ಹೆಜ್ಜೆ ಹಾಕಿದವು.
ಹಲವು ವರ್ಷಗಳ ನಂತರ ದಸರಾ ಗಜಪಡೆಯಲ್ಲಿ ಸ್ಥಾನ ಪಡೆದಿದ್ದ ಕಾವೇರಿ ಆನೆಯೂ ಅಂಬಾರಿ ಹೊತ್ತಿದ್ದ ಅಭಿಮನ್ಯು ಆನೆಗೆ ಸಾಥ್ ನೀಡಿತು. ಮತ್ತೊಂದು ‘ಕುಮ್ಕಿ’ ಆನೆಯಾಗಿ ರೂಪಾ ಸಾಗಿತು. ಆನೆಗಳೊಂದಿಗೆ ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ಪೊಲೀಸರು ಕೂಡ ಸಾಗಿದರು. ಮುಂಜಾಗ್ರತಾ ಕ್ರಮವಾಗಿ ಭದ್ರತೆಗೆ ವ್ಯವಸ್ಥೆ ಮಾಡಲಾಗಿತ್ತು.
ಆನೆಗಳು ಮಾರ್ಗದುದ್ದಕ್ಕೂ ಅಲ್ಲಲ್ಲಿ ಹಾಕಿದ ಲದ್ದಿಯನ್ನು ಸ್ವಚ್ಛತಾ ಸಿಬ್ಬಂದಿ ತೆರವುಗೊಳಿಸಿ, ಮೆರವಣಿಗೆಯು ಸುಗಮವಾಗಿ ಸಾಗಲು ಅನುವು ಮಾಡಿಕೊಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.