ADVERTISEMENT

ಅಂಬೇಡ್ಕರ್‌ ಅನುಯಾಯಿಗಳು ಧರ್ಮ ಬೌದ್ಧ, ಜಾತಿ ಹೊಲೆಯ ಬರೆಸಿ: ಸ್ವಾಮೀಜಿ

ಸಮಾಜದ ಪರಿಶಿಷ್ಟ ಜಾತಿ ಪೂರ್ವಭಾವಿ ಸಭೆಯಲ್ಲಿ ಉರಿಲಿಂಗಪೆದ್ದಿ ಮಠದ ಜ್ಞಾನ ಪ್ರಕಾಶ್ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2025, 5:08 IST
Last Updated 22 ಸೆಪ್ಟೆಂಬರ್ 2025, 5:08 IST
ಎಚ್.ಡಿ.ಕೋಟೆ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ಭಾನುವಾರ ಬಲಗೈ ಸಮಾಜದ ಪರಿಶಿಷ್ಟ ಜಾತಿ ಪೂರ್ವಭಾವಿ ಸಭೆಯಲ್ಲಿ ಉರಿಲಿಂಗಪೆದ್ದಿ ಮಠದ ಜ್ಞಾನ ಪ್ರಕಾಶ್ ಸ್ವಾಮೀಜಿ ಸೆ.22 ರಿಂದ ಅ.7 ರವರೆಗೆ ನಡೆಸಲಿರುವ ಆರ್ಥಿಕ ಮತ್ತು ಸಾಮಾಜಿಕ ಸಮೀಕ್ಷೆಯ ಕರಪತ್ರ ಬಿಡುಗಡೆಗೊಳಿಸಿದರು.
ಎಚ್.ಡಿ.ಕೋಟೆ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ಭಾನುವಾರ ಬಲಗೈ ಸಮಾಜದ ಪರಿಶಿಷ್ಟ ಜಾತಿ ಪೂರ್ವಭಾವಿ ಸಭೆಯಲ್ಲಿ ಉರಿಲಿಂಗಪೆದ್ದಿ ಮಠದ ಜ್ಞಾನ ಪ್ರಕಾಶ್ ಸ್ವಾಮೀಜಿ ಸೆ.22 ರಿಂದ ಅ.7 ರವರೆಗೆ ನಡೆಸಲಿರುವ ಆರ್ಥಿಕ ಮತ್ತು ಸಾಮಾಜಿಕ ಸಮೀಕ್ಷೆಯ ಕರಪತ್ರ ಬಿಡುಗಡೆಗೊಳಿಸಿದರು.   

ಎಚ್.ಡಿ.ಕೋಟೆ: ಸೆ.22 ರಿಂದ ಅ.7 ರವರೆಗೆ ನಡೆಯಲಿರುವ ಆರ್ಥಿಕ ಮತ್ತು ಸಾಮಾಜಿಕ ಸಮೀಕ್ಷೆಯಲ್ಲಿ ಡಾ.ಬಿ.ಆರ್‌. ಅಂಬೇಡ್ಕರ್‌ ಅವರ ಅಭಿಮಾನಿ ಹಾಗೂ ಅನುಯಾಯಿಗಳು ಧರ್ಮದ ಕಾಲಂನಲ್ಲಿ ಬೌದ್ಧ ಹಾಗೂ ಜಾತಿ ಕಾಲಂನಲ್ಲಿ ಹೊಲೆಯ ಎಂದು ಬರೆಸುವಂತೆ ಉರಿಲಿಂಗಪೆದ್ದಿ ಮಠದ ಜ್ಞಾನ ಪ್ರಕಾಶ್ ಸ್ವಾಮೀಜಿ ವಿನಂತಿಸಿದರು.

ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ಭಾನುವಾರ ಬಲಗೈ ಸಮಾಜದ ಪರಿಶಿಷ್ಟ ಜಾತಿ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಪರಿಶಿಷ್ಟ ಜಾತಿಯವರು ಧರ್ಮದ ಕಾಲಂನಲ್ಲಿ ಬೌದ್ಧ ಎಂದು ಬರೆಸಿದಲ್ಲಿ ಕೇಂದ್ರ ಸರ್ಕಾರದ ಆದೇಶದಂತೆ ಮೀಸಲಾತಿಗೆ ಯಾವುದೇ ತೊಂದರೆಯಾಗುವುದಿಲ್ಲ. ಈ ಬಗ್ಗೆ ದಲಿತಪರ ಸಂಘಟನೆಗಳು ಹಳ್ಳಿ ಹಳ್ಳಿಗಳಲ್ಲಿ ಪ್ರಚಾರ ಮಾಡಿ ಸಮೀಕ್ಷೆಯ ಕಾಲಂ 8ರಲ್ಲಿನ 6ನೇ ಕ್ರಮ ಸಂಖ್ಯೆಯಲ್ಲಿ ಬೌದ್ಧ ಎಂದು ತಪ್ಪದೇ ಬರೆಸಲು ಮಾರ್ಗದರ್ಶನ ಮಾಡಬೇಕು ಎಂದರು.

ADVERTISEMENT

ಇದೇ ತಿಂಗಳು 22 ರಿಂದ ಸಮೀಕ್ಷೆ ನಡೆಸಲಾಗುತ್ತಿದ್ದು, ಅಂಬೇಡ್ಕರ್ ಅನುಯಾಯಿಗಳಾದ ನಾವು, ಅಂಬೇಡ್ಕರ್ ಹಿಂದೂ ಧರ್ಮ ತ್ಯಜಿಸಿ ಬೌದ್ಧ ಧರ್ಮ ಅಪ್ಪಿಕೊಂಡರು ಎಂಬುದನ್ನು ಮರೆಯಬಾರದು ಎಂದರು.

ಅ.14ರಂದು ನಡೆಯಲಿರುವ ಬೌದ್ಧ ಸಮ್ಮೇಳನದ ಕುರಿತೂ ಅವರು ಮಾಹಿತಿ ಹಂಚಿಕೊಂಡರು.

ಮೈಸೂರು ನಗರ ಪಾಲಿಕೆ ಮಾಜಿ ಮೇಯರ್ ಪುರುಷೋತ್ತಮ್ ಮಾತನಾಡಿ, ಪಟ್ಟಣ ಪ್ರದೇಶದಲ್ಲಿ ವಾಸಿಸುವ ಜನರು ತಮ್ಮ ಜಾತಿ ಹೇಳಲು ಹಿಂಜರಿದ ಪರಿಣಾಮ ದಾಖಲೆಯಲ್ಲಿ ಬಲಗೈ ಸಮುದಾಯದ ಜನಸಂಖ್ಯೆ ಕಡಿಮೆ ಬಂದಿದೆ ಎಂದರು.

ಆದಿಕರ್ನಾಟಕ ಮಹಾಸಭಾ ಅಧ್ಯಕ್ಷ ಹೈರಿಗೆ ಶಿವರಾಜು ಮಾತನಾಡಿ, ಧರ್ಮದ ಕಾಲಂ ಮತ್ತು ಜಾತಿ ಕಾಲಂನಲ್ಲಿಯೂ ಬೌದ್ಧ ಎಂದೇ ನಮೂದಿಸಿ, ಜಾತಿ, ಅಸ್ಪೃಶ್ಯತೆಯ ಕರಾಳತೆಯಿಂದ ಮುಕ್ತರಾಗಿ, ಗೌರವಯುತ ಬದುಕು ಕಟ್ಟಿಕೊಳ್ಳಲು ಅವಕಾಶವಿದೆ ಎಂದರು.

ಇಟ್ನ ರಾಜಣ್ಣ, ಮಲ್ಕುಂಡಿ ಮಹದೇವಸ್ವಾಮಿ, ಗೌತಮ ಬಂತೇಜಿ, ಪುರಸಭೆ ಸದಸ್ಯರಾದ ಎಚ್.ಸಿ.ನರಸಿಂಹಮೂರ್ತಿ, ನಂಜಪ್ಪ, ಭೀಮನಹಳ್ಳಿ ಸೋಮೇಶ್, ಶಿವಣ್ಣ, ಮುದ್ದಮಲ್ಲಯ್ಯ, ಸೊಗಳ್ಳಿ ಶಿವಣ್ಣ, ಪುಟ್ಟಯ್ಯ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.