ಮೈಸೂರು: ‘ನಾವೆಲ್ಲರೂ ಸೇರಿ ಅಂಬೇಡ್ಕರ್ ಚಳವಳಿಯನ್ನು ಮುಂದುವರಿಸಿಕೊಂಡು ಹೋಗಬೇಕು. ಮನುವಾದಿ ಶಕ್ತಿಗಳಿಗೆ ಬೆಂಬಲ ಕೊಡಬಾರದು’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೃಷ್ಣಮೂರ್ತಿ ಹೇಳಿದರು.
ಬೌದ್ಧ ಮಹಾಸಮ್ಮೇಳನದ ಸಂಘಂ ನಮಾಮಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಮನುವಾದಿ ಶಕ್ತಿಗಳ ಪರ ಇರುವವರನ್ನು ವಿರೋಧಿಸಬೇಕು’ ಎಂದರು.
‘ಅಂಬೇಡ್ಕರ್ ಮಾಡಿದಂತೆ ನಾವು ಇಡೀ ಸಮಾಜವನ್ನು ಧಮ್ಮಕ್ಕೆ ಮರಳುವಂತೆ ಮಾಡಬೇಕು’ ಎಂದು ಆಶಿಸಿದರು.
‘ಇಂದು ಮನುವಾದ ಗಟ್ಟಿಯಾಗಿ ಹೋಗಿದೆ. ಅತ್ಯುನ್ನತ ಸ್ಥಾನದಲ್ಲಿರುವ ರಾಷ್ಟ್ರಪತಿಗೂ ದೇವಸ್ಥಾನಕ್ಕೆ ಪ್ರವೇಶ ಕೊಡಲಾಗದ ಸಮಾಜವಿದು. ಸಿಜೆಐ ಅವರನ್ನೂ ಅವಮಾನಿಸುವುದನ್ನೂ ಕಾಣುತ್ತಿದ್ದೇವೆ. ಎಲ್ಲಿಯವರೆಗೆ ನಾವು ಸನಾತನ ಅಥವಾ ಹಿಂದೂ ಧರ್ಮದ ಸಂಕೋಲೆಯಲ್ಲಿ ಸಿಲುಕಿರುತ್ತೇವೆಯೋ ಅಲ್ಲಿಯವರೆಗೂ ದೌರ್ಜನ್ಯ, ಅವಮಾನ ತಪ್ಪುವುದಿಲ್ಲ. ಈ ನರಕದಿಂದ ಬಿಡುಗಡೆ ಆಗುವ ಮಾರ್ಗದಲ್ಲಿ ಅಂಬೇಡ್ಕರ್ ಅವರಂತೆ ನಾವೂ ಸಾಗಬೇಕಾಗಿದೆ’ ಎಂದರು.
ಬಿಜೆಪಿ ಮುಖಂಡ ಎನ್.ಮಹೇಶ್ ಮಾತನಾಡಿ, ‘ಜಗತ್ತು ಇಂದು ಮೈತ್ರಿಗಾಗಿ ಹಾತೊರೆಯುತ್ತಿದೆ. ನಾನು ಮುಂದೆ ಎಲ್ಲರಿಗೂ ಗೆಳೆಯನಾಗಿ ಬರುತ್ತೇನೆ ಎಂದು ಬುದ್ಧ ಹೇಳಿದ್ದರು. ಈಗ ಮೈತ್ರಿಯ ರೂಪದಲ್ಲಿ ಬಂದಿದ್ದಾನೆ’ ಎಂದು ಹೇಳಿದರು.
ಕಾಂಗ್ರೆಸ್ ಮುಖಂಡ ಎಚ್.ವಿ.ರಾಜೀವ್ ಮಾತನಾಡಿ, ‘ಭಗವಾನ್ ಬುದ್ಧರು ಈಗ ಮೈತ್ರಿ ರೂಪದಲ್ಲಿ ಬಂದಿದ್ದಾರೆ ಎಂಬ ಸಂದೇಶವನ್ನು ಮೈಸೂರಿನ ಈ ಸಮ್ಮೇಳನ ಸಾರಿದೆ. ಬುದ್ಧನ ವಿಚಾರ ಅರ್ಥ ಮಾಡಿಕೊಂಡು ಪಾಲಿಸಿದರೆ ಜಗತ್ತಿನಲ್ಲಿ ಬದಲಾವಣೆ ಸಾಧ್ಯವಾಗುತ್ತದೆ’ ಎಂದು ಪ್ರತಿಪಾದಿಸಿದರು.
ವಿಧಾನಪರಿಷತ್ ಮಾಜಿ ಸದಸ್ಯ ಡಿ.ಎಸ್.ವೀರಯ್ಯ, ‘ನಮ್ಮೆಲ್ಲ ಸಮಸ್ಯೆಗಳಿಗೆ ಬುದ್ಧ ಮಾರ್ಗದಲ್ಲಿ ಪರಿಹಾರವಿದೆ’ ಎಂದರು.
ಚಿಂತಕ ಹರಿರಾಮ್ ಮಾತನಾಡಿ, ‘ಬೌದ್ಧ ಧರ್ಮವೆಂದರೆ ವಿಜ್ಞಾನ ಹಾಗೂ ನಿಸರ್ಗದ ಪರವಾಗಿರುವುದು. ಧಮ್ಮದಲ್ಲಿ ಧ್ಯಾನಕ್ಕೆ ಹೆಚ್ಚಿನ ಮಹತ್ವವಿದೆ’ ಎಂದು ಪ್ರತಿಪಾದಿಸಿದರು.
ಮಾಜಿ ಶಾಸಕರಾದ ಬಾಲರಾಜ್, ನಂಜುಂಡಸ್ವಾಮಿ, ಸಂಪಂಗಿ, ಚಲನಚಿತ್ರ ನಿರ್ದೇಶಕ ಎಸ್.ಮಹೇಂದರ್, ಬಿಜೆಪಿ ಮುಖಂಡ ಮಹದೇವಯ್ಯ, ಮಾಜಿ ಮೇಯರ್ ನಾರಾಯಣ, ಮಾಜಿ ಸಚಿವ ಎಂ.ಶಿವಣ್ಣ, ಸಾಹಿತಿ ಪ್ರೊ.ಕೆ.ಎಸ್. ಭಗವಾನ್, ರಾಜ್ಯ ಪ.ಜಾತಿ, ಪ.ಪಂಗಡ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಚಂದ್ರಶೇಖರಯ್ಯ, ಮುಖಂಡ ಬಿ.ವಿ.ಲಿಂಗಯ್ಯ ಪಾಲ್ಗೊಂಡಿದ್ದರು.
ಬೌದ್ಧ ಧರ್ಮವೆಂದು ಬರೆಸಿ: ಎಆರ್‌ಕೆ
ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿ ‘ದಲಿತರು ಬೌದ್ಧ ಧರ್ಮಕ್ಕೆ ಹೋಗುವುದಕ್ಕೆ ಇದು ಸಕಾಲವಾಗಿದೆ. ರಾಜ್ಯ ಸರ್ಕಾರ ನಡೆಸುತ್ತಿರುವ ಸಮೀಕ್ಷೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಧರ್ಮದ ಕಾಲಂನಲ್ಲಿ ಬೌದ್ಧ ಧರ್ಮ ಎಂದು ಬರೆಸಬೇಕು’ ಎಂದು ಕೋರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.