ADVERTISEMENT

‘ಅಮೃತ ಮಿತ್ರ’ ಯೋಜನೆ ಅಡಿ ಅನುದಾನ: ಉದ್ಯಾನ ನಿರ್ವಹಣೆಗೆ ‘ಸ್ತ್ರೀಶಕ್ತಿ’

ಆರ್.ಜಿತೇಂದ್ರ
Published 3 ಜನವರಿ 2026, 8:32 IST
Last Updated 3 ಜನವರಿ 2026, 8:32 IST
ಉದ್ಯಾನವೊಂದರ ಸ್ವಚ್ಛತೆ ಕಾರ್ಯದಲ್ಲಿ ನಿರತರಾದ ಸ್ತ್ರೀಶಕ್ತಿ ಸ್ವಸಹಾಯ ಸಂಘದ ಸದಸ್ಯೆಯರು
ಉದ್ಯಾನವೊಂದರ ಸ್ವಚ್ಛತೆ ಕಾರ್ಯದಲ್ಲಿ ನಿರತರಾದ ಸ್ತ್ರೀಶಕ್ತಿ ಸ್ವಸಹಾಯ ಸಂಘದ ಸದಸ್ಯೆಯರು   

ಮೈಸೂರು: ನಗರದ ಉದ್ಯಾನಗಳ ಸೌಂದರ್ಯ ಹೆಚ್ಚಿಸಲು ‘ಸ್ತ್ರೀಶಕ್ತಿ’ಯು ಮೈಸೂರು ಮಹಾನಗರ ಪಾಲಿಕೆ ಜೊತೆ ಕೈ ಜೋಡಿಸಿದ್ದು, ಆಯ್ಡ ಉದ್ಯಾನಗಳ ನಿರ್ವಹಣೆಯಲ್ಲಿ ತೊಡಗಿಸಿಕೊಂಡಿದೆ.

ಕೇಂದ್ರ ಸರ್ಕಾರದ ‘ಅಮೃತ ಮಿತ್ರ’ ಯೋಜನೆ ಅಡಿ ಪಾಲಿಕೆಯ ಆಯ್ಡ 10 ಉದ್ಯಾನಗಳನ್ನು ನಗರದ ಸ್ತ್ರೀಶಕ್ತಿ ಸ್ವಸಹಾಯ ಸಂಘಗಳಿಗೆ ನೀಡಲಾಗಿದೆ. ಒಟ್ಟು ಆರು ಸಂಘಗಳು ಮುಂದೆ ಬಂದಿದ್ದು, ಇವುಗಳಿಗೆ ತಲಾ ₹10 ಲಕ್ಷ ಅನುದಾನ ನೀಡಲಾಗುತ್ತಿದೆ. ತಮಗೆ ವಹಿಸಿದ ಉದ್ಯಾನಗಳಲ್ಲಿನ ಕಸ–ಕಳೆ ತೆಗೆಯುವುದು, ಆಗಾಗ್ಗೆ ಗಿಡಗಳ ಟ್ರಿಮ್ಮಿಂಗ್‌, ಉದ್ಯಾನದಲ್ಲಿ ಬಿದ್ದ ಪ್ಲಾಸ್ಟಿಕ್‌ ಮತ್ತಿತರ ಕಸ ಸಂಗ್ರಹಣೆ, ತರಗೆಲೆಗಳಿಂದ ಸಾವಯವ ಗೊಬ್ಬರ ತಯಾರಿಯಂತಹ ಕೆಲಸಗಳನ್ನು ಈ ಸಂಘಗಳು ಮಾಡುತ್ತಿವೆ.

ನಾಯ್ಡು ನಗರದ ಸಮ್ಮತಿ ಸಂಘ, ರಾಜೀವ್ ನಗರದ ಶ್ರೀ ಲಕ್ಷ್ಮಿ ಸರಸ್ವತಿ ಸಂಘ, ಅಜೀಜ್‌ಸೇಠ್ ನಗರದ ನೂರ್ ಸಂಘ, ಗುಲ್ಶನ್ ಸಂಘ, ಅಜೀಜ್‌ಸೇಠ್ ನಗರದ ಯಾ ಹಬೀಬಿ ಸಂಘ, ಶ್ರೀರಾಂಪುರದ ಅನ್ನಪೂಣೇಶ್ವರಿ ಮಹಿಳಾ ಸ್ವಸಹಾಯ ಸಂಘಗಳು ಸದ್ಯ ಅವಕಾಶ ಪಡೆದಿವೆ.

ADVERTISEMENT

ಏನಿದು ಯೋಜನೆ

ಸ್ತ್ರೀ ಸಬಲೀಕರಣದ ಸಲುವಾಗಿ ಕೇಂದ್ರ ಸರ್ಕಾರವು ‘ಅಮೃತ್‌’ ಯೋಜನೆಯನ್ನು ಜಾರಿಗೆ ತಂದಿದೆ. ಇದರ ಅಡಿ ಮಹಿಳೆಯರು ಸದಸ್ಯರಾಗಿರುವ ಸಂಘಗಳಿಗೆ ಸರ್ಕಾರದ ಸೇವೆಗಳಲ್ಲಿ ವಿವಿಧ ಜವಾಬ್ದಾರಿಗಳನ್ನು ನೀಡಲಾಗುತ್ತಿದೆ. ಇದಕ್ಕೆ ತಗುಲುವ ವೆಚ್ಚವನ್ನು ಕೇಂದ್ರ ಸರ್ಕಾರ ಭರಿಸುತ್ತಿದೆ. ಮಹಿಳೆಯರಿಗೆ ಉದ್ಯೋಗ ಒದಗಿಸುವ ಮೂಲಕ ಅವರನ್ನು ಆರ್ಥಿಕವಾಗಿ ಸಧೃಡಗೊಳಿಸುವುದು ಇದರ ಉದ್ದೇಶವಾಗಿದೆ.

ಮೊದಲ ಹಂತದಲ್ಲಿ 10 ಉದ್ಯಾನಗಳ ನಿರ್ವಹಣೆಯನ್ನು ನೀಡಿರುವ ಪಾಲಿಕೆಯು ಇದೀಗ ಹೆಚ್ಚುವರಿಯಾಗಿ 63 ಪಾರ್ಕ್‌ಗಳ ಉಸ್ತುವಾರಿಯನ್ನು ಸ್ವಸಹಾಯ ಸಂಘಗಳಿಗೆ ವಹಿಸಲು ಯೋಜಿಸಿದೆ. ಇದಕ್ಕೆ ₹1.20 ಕೋಟಿ ವೆಚ್ಚ ಅಂದಾಜಿಸಿದ್ದು, ಸರ್ಕಾರದ ಒಪ್ಪಿಗೆ ದೊರೆತ ನಂತರ ಅರ್ಜಿ ಆಹ್ವಾನಿಸಲಿದೆ.

ಆಯ್ಕೆ ಪ್ರಕ್ರಿಯೆ

ಪಾಲಿಕೆಯ ಈ ಯೋಜನೆಯಲ್ಲಿ ಪಾಲ್ಗೊಳ್ಳಬಯಸುವ ಸ್ತ್ರೀಶಕ್ತಿ ಸಂಘಗಳಿಗೆ ಹಲವು ನಿಬಂಧನೆಗಳನ್ನು ವಿಧಿಸಲಾಗಿದೆ. ಮೊದಲಿಗೆ ಸಂಘವು ಪಾಲಿಕೆ ವ್ಯಾಪ್ತಿಯಲ್ಲಿ ನೋಂದಾಯಿಸಿಕೊಂಡಿರಬೇಕು. ಕನಿಷ್ಠ ಮೂರು ವರ್ಷದಿಂದ ಸಕ್ರಿಯವಾಗಿರಬೇಕು. ಹಣಕಾಸಿನ ನಿರ್ವಹಣೆ ಉತ್ತಮವಾಗಿರಬೇಕು. ಅಂತಹವುಗಳಿಗೆ ಮಾತ್ರವೇ ಅವಕಾಶ ಸಿಗಲಿದೆ.

‘ರಾಜ್ಯ ಮಟ್ಟದ ಆಂತರಿಕ ಸಮಿತಿಯು ಈ ಎಲ್ಲ ಅಂಶಗಳನ್ನು ಪರಿಶೀಲಿಸಿ ನಂತರ ಅವಕಾಶ ನೀಡುತ್ತದೆ. ಒಮ್ಮೆ ಒಪ್ಪಂದ ಆದ ಬಳಿಕ ಕೇಂದ್ರ ಸರ್ಕಾರವೇ ನೇರವಾಗಿ ಸಂಘದ ಬ್ಯಾಂಕ್‌ ಖಾತೆಗೆ ನೇರ ನಗದು ವರ್ಗಾವಣೆ ಮಾಡುತ್ತದೆ’ ಎನ್ನುತ್ತಾರೆ ಪಾಲಿಕೆಯ ತೋಟಗಾರಿಕೆ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಪಿ.ಕೆ. ಮೋಹನ್‌ಕುಮಾರ್.

ಉದ್ಯಾನವೊಂದರ ಸ್ವಚ್ಛತೆ ಕಾರ್ಯದಲ್ಲಿ ನಿರತರಾದ ಸ್ತ್ರೀಶಕ್ತಿ ಸ್ವಸಹಾಯ ಸಂಘದ ಸದಸ್ಯೆಯರು
‘ಅಮೃತ ಮಿತ್ರ’ ಯೋಜನೆಯಡಿ ನಗರದ 10 ಉದ್ಯಾನಗಳ ನಿರ್ವಹಣೆಯನ್ನು 6 ಮಹಿಳಾ ಸಂಘಗಳಿಗೆ ನೀಡಲಾಗಿದೆ. ಇನ್ನೂ 63 ಉದ್ಯಾನ ನಿರ್ವಹಣೆಗೆ ಯೋಜನೆ ಸಿದ್ಧವಾಗಿದೆ.
– ಪಿ.ಕೆ. ಮೋಹನ್‌ಕುಮಾರ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಮಹಾನಗರ ಪಾಲಿಕೆ

ಯಾವ್ಯಾವ ಉದ್ಯಾನ ನಿರ್ವಹಣೆ?

ಉದ್ಯಾನ; ವಾರ್ಡ್ ಸಂಖ್ಯೆ

  • ಹೈದರಾಲಿ ಉದ್ಯಾನ; 9

  • ಅಲ್ ಬದರ್ ಮಸೀದಿ ಎದುರಿನ ಉದ್ಯಾನ; 10

  • ಖುದಾದತ್ ಮಸೀದಿ ಹಿಂಭಾಗದ ಉದ್ಯಾನ; 10

  • ಆಂಡಾಲಸ್ ಶಾಲೆ ಹಿಂಭಾಗದ ಉದ್ಯಾನ; 10

  • ಲಿಟಲ್ ಇನ್ಫಂಟ್ ಶಾಲೆ ಹತ್ತಿರದ ಉದ್ಯಾನ; 11

  • ಶಾಂತಿ ನಗರ ಶಾಲೆ ಎದುರಿನ ಉದ್ಯಾನ; 11

  • ಶಿವಾಜಿ ಉದ್ಯಾನ;29ಬಂಡೆಕಲ್ಲು ಉದ್ಯಾನ ಸಾತಗಳ್ಳಿ; 34

  • ರಾಜೀವ್ ಗಾಂಧಿ ಉದ್ಯಾನ;34ಮಧುವನ ಉದ್ಯಾನ; 64

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.