ಅಮಾನತು
ಹುಣಸೂರು (ಮೈಸೂರು ಜಿಲ್ಲೆ): ನಾಗರಹೊಳೆ ಅರಣ್ಯ ಪ್ರದೇಶದಲ್ಲಿ ವನ್ಯಮೃಗ ಬೇಟೆಯಾಡಿದ ಆರೋಪದಲ್ಲಿ ನಾಗರಹೊಳೆ ದೊಡ್ಡಹರವೆ ಆನೆ ಶಿಬಿರದ ಮಾವುತರಾದ ಜೆ.ಡಿ.ಮಂಜು ಮತ್ತು ಎಚ್.ಎನ್. ಮಂಜು ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಹುಣಸೂರು ಹುಲಿ ಯೋಜನಾ ನಿರ್ದೇಶಕಿ ಸೀಮಾ ಆದೇಶಿಸಿದ್ದಾರೆ.
ದೊಡ್ಡಹರವೆ (ಕಾವೇರಿ) ಆನೆ ಕ್ಯಾಂಪ್‌ನ ‘ರಾಮಯ್ಯ’ ಆನೆಯ ಮಾವುತರಾಗಿದ್ದ ನಾಗಾಪುರ ಪುನರ್ವಸತಿ ಕೇಂದ್ರದ ಈ ಇಬ್ಬರು, ನೇರಳಕುಪ್ಪೆ ಗ್ರಾಮದ ಮಂಜು ಅವರ ಬಂದೂಕು ಬಳಸಿ ಬೇಟೆಯಾಡಿದ್ದರು. ಈ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದ ಮೂಲಕ ಪತ್ತೆಯಾಗಿವೆ.
ಜೆ.ಡಿ.ಮಂಜು ಅವರ ಮನೆಯಲ್ಲಿ ತಪಾಸಣೆ ಮಾಡಿದಾಗ ಪ್ಲಾಸ್ಟಿಕ್ ಚೀಲದಲ್ಲಿ ಬಂದೂಕಿನ ಬಿಡಿಭಾಗಗಳು ಮತ್ತು ಗುಂಡು ಪತ್ತೆಯಾಗಿದ್ದು, ವಶಕ್ಕೆ ಪಡೆದ ಅಧಿಕಾರಿಗಳು ಮೂವರ ವಿರುದ್ಧವೂ ಪ್ರಕರಣ ದಾಖಲಿಸಿದ್ದಾರೆ.
‘ಬಂದೂಕು ಮಾಲಿಕ ಮಂಜು ತಲೆ ಮರೆಸಿಕೊಂಡಿದ್ದು, ಪತ್ತೆಗೆ ಬಲೆ ಬೀಸಲಾಗಿದೆ. ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದು, ಮಂಜುಗೆ ನೀಡಿರುವ ಬಂದೂಕು ಪರವಾನಗಿ ರದ್ದುಗೊಳಿಸುವಂತೆ ಕೋರಿದ್ದೇವೆ’ ಎಂದು ಸೀಮಾ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.