ಮೈಸೂರಿನ ಕೆಎಸ್‌ಒಯು ಘಟಿಕೋತ್ಸವ ಭವನದಲ್ಲಿ ಶನಿವಾರ ನಡೆದ ಪಶುವೈದ್ಯರ ರಾಜ್ಯಮಟ್ಟದ ತಾಂತ್ರಿಕ ವಿಚಾರ ಸಂಕಿರಣ ಮತ್ತು ಕಾಲುಬಾಯಿ ಜ್ವರದ ವಿರುದ್ಧ 6ನೇ ಸುತ್ತಿನ ಲಸಿಕಾ ಕಾರ್ಯಕ್ರಮವನ್ನು ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್ ಉದ್ಘಾಟಿಸಿದರು
–ಪ್ರಜಾವಾಣಿ ಚಿತ್ರ
ಮೈಸೂರು: ‘ಪಶು ವೈದ್ಯರು ರೈತರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಿ ದೂರುಗಳು ಬಾರದಂತೆ ಕಾರ್ಯನಿರ್ವಹಿಸಬೇಕು’ ಎಂದು ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್ ಸೂಚಿಸಿದರು.
ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆ ಹಾಗೂ ಕರ್ನಾಟಕ ಪಶು ವೈದ್ಯಕೀಯ ಸಂಘದ ಸಹಯೋಗದಲ್ಲಿ ಇಲ್ಲಿನ ಕೆಎಸ್‌ಒಯು ಘಟಿಕೋತ್ಸವ ಭವನದಲ್ಲಿ ಶನಿವಾರ ಆಯೋಜಿಸಿದ್ದ ಪಶುವೈದ್ಯರ ರಾಜ್ಯಮಟ್ಟದ ತಾಂತ್ರಿಕ ವಿಚಾರ ಸಂಕಿರಣ ಮತ್ತು ಕಾಲುಬಾಯಿ ಜ್ವರದ ವಿರುದ್ಧ 6ನೇ ಸುತ್ತಿನ ಲಸಿಕಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ವೈದ್ಯರು ಸ್ಪಂದಿಸುತ್ತಿಲ್ಲ. ಮಾಹಿತಿ ನೀಡಿ 2–3 ದಿನವಾದರೂ ಊರಿಗೆ ಬರುವುದಿಲ್ಲ, ಕೈಗೆ ಸಿಗುವುದಿಲ್ಲ ಎಂದು ಹೈನುಗಾರರು ಹಾಗೂ ರೈತರು ನನಗೆ ದೂರವಾಣಿ ಮಾಡಿ ದೂರು ಹೇಳುತ್ತಾರೆ. ಅದಕ್ಕೆ ಅವಕಾಶ ಕೊಡಬಾರದು’ ಎಂದರು.
‘ಪಶು ವೈದ್ಯರು ವಿವಿಧ ವಿಷಯಗಳಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವುದರಿಂದ ರಾಷ್ಟ್ರ ಮಟ್ಟದಲ್ಲೂ ಇಲಾಖೆಗೆ ಒಳ್ಳೆಯ ಹೆಸರು ಬರುತ್ತಿದೆ. ಇಲಾಖೆಗೆ ಬಹಳ ಪ್ರಮುಖ ಸ್ಥಾನವಿದ್ದು, ವೈದ್ಯರು ಜವಾಬ್ದಾರಿಯಿಂದ ಕೆಲಸ ಮಾಡಬೇಕು. ಲಸಿಕೆ ಹಾಕಲು ಬೆಳಿಗ್ಗೆಯೇ ಹಳ್ಳಿಗಳಿಗೆ ಹೋದರೆ ಹೆಚ್ಚಿನ ಗುರಿ ಸಾಧಿಸಬಹುದು. ನಿಮ್ಮ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಯ ಗಮನಕ್ಕೂ ತಂದಿದ್ದೇನೆ’ ಎಂದು ಹೇಳಿದರು.
ಇನ್ನೂ ಜಾಸ್ತಿ ಕೊಡುಗೆ ಕೊಡುವಂತಾಗಲಿ: ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ‘ಮಾನವನ ಜೀವನಕ್ಕೆ ಪಶುಸಂಗೋಪನೆ ಹಾಗೂ ಹೈನುಗಾರಿಕೆ ಪೂರಕವಾಗಿದೆ. ಈ ಕ್ಷೇತ್ರವು ದೇಶದ ತಲಾ ವರಮಾನ ಹೆಚ್ಚಳಕ್ಕೆ ಇನ್ನೂ ಜಾಸ್ತಿ ಕೊಡುಗೆ ನೀಡುವಂತಾಗಲಿ’ ಎಂದು ಆಶಿಸಿದರು.
‘ಕೃಷಿ ಕ್ಷೇತ್ರದಲ್ಲಿ ಪಶುಗಳಿಗಿಂತ ಯಂತ್ರದ ಬಳಕೆ ಹೆಚ್ಚಾಗಿದೆ. ಪ್ರಾಣಿಗಳ ಗೊಬ್ಬರವನ್ನು ಹೆಚ್ಚು ಬಳಸದೆ, ರಾಸಾಯನಿಕದ ಮೊರೆ ಹೋಗಲಾಗುತ್ತದೆ. ಇದು ಮನುಷ್ಯನ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ. ಆದಷ್ಟು ಈ ಕ್ರಮವನ್ನು ತಡೆಗಟ್ಟುವಂತೆ ಜಾಗೃತಿ ಮೂಡಿಸಬೇಕು’ ಎಂದರು.
ಇಲಾಖೆಯು ಆಯುಕ್ತೆ ಶ್ರೀರೂಪಾ ಮಾತನಾಡಿ, ‘ಕೃತಕ ಗರ್ಭಧಾರಣೆಯಲ್ಲಿ ನಾವು ಹಿಂದುಳಿದಿದ್ದೇವೆ. ಅದಕ್ಕೆ ಹೆಚ್ಚಿನ ಆದ್ಯತೆ ನೀಡಿದರೆ ಕ್ಷೇತ್ರವು ಇನ್ನೂ ಹೆಚ್ಚು ಅಭಿವೃದ್ಧಿ ಆಗುತ್ತದೆ. ಹೈನುಗಾರಿಕೆಗೆ ನಮ್ಮ ಸರ್ಕಾರ ಕೊಡುತ್ತಿರುವಷ್ಟು ಸೌಲಭ್ಯಗಳನ್ನು ಬೇರಾವ ರಾಜ್ಯಗಳಲ್ಲೂ ಕೊಡುತ್ತಿಲ್ಲ’ ಎಂದು ತಿಳಿಸಿದರು.
ಶಾಸಕ ಕೆ.ಹರೀಶ್ ಗೌಡ ಅಧ್ಯಕ್ಷತೆ ವಹಿಸಿದ್ದರು. ವಿಧಾನಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ, ಇಲಾಖೆಯ ನಿರ್ದೇಶಕ ಡಾ.ಮಂಜುನಾಥ್ ಎಸ್.ಪಾಳೇಗಾರ ಮಾತನಾಡಿದರು.
ಭಾರತೀಯ ಪಶುವೈದ್ಯಕೀಯ ಪರಿಷತ್ತಿನ ಸದಸ್ಯ ಡಾ.ಸುಶಾಂತ್ ರೈ ಬೆಳ್ಳಿಪಾಡಿ, ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಸಿ.ವೀರಣ್ಣ, ಡಿಸಿಎಫ್ ಡಾ.ಕೆ.ಎನ್. ಬಸವರಾಜ್, ಇಲಾಖೆಯ ಜಂಟಿ ನಿರ್ದೇಶಕ ಶಿವಣ್ಣ, ಉಪನಿರ್ದೇಶಕ ಡಾ.ಎಚ್.ಎಲ್.ನಾಗರಾಜ್, ಡಾ.ವೈ.ಡಿ.ರಾಜಣ್ಣ, ಡಾ.ಮ.ಪು. ಪೂರ್ಣಾನಂದ ಪಾಲ್ಗೊಂಡಿದ್ದರು.
ಹೈನುಗಾರಿಕೆಯು ಜಿಡಿಪಿಗೆ ಶೇ 5ರಷ್ಟು ಕೊಡುಗೆ ನೀಡುತ್ತಿರುವುದು ಶ್ಲಾಘನೀಯವಾದುದು.–ಡಾ.ಎಚ್.ಸಿ. ಮಹದೇವಪ್ಪ, ಜಿಲ್ಲಾ ಉಸ್ತುವಾರಿ ಸಚಿವ
ಪಶು ವೈದ್ಯರ ಬೇಡಿಕೆಗಳೇನು?
ಕರ್ನಾಟಕ ಪಶು ವೈದ್ಯಕೀಯ ಸಂಘದ ಅಧ್ಯಕ್ಷ ಡಾ.ಶರಣಪ್ಪ ಯಲಗೋಡ ಮಾತನಾಡಿ ‘ಸೀಮಿತ ಸೌಲಭ್ಯಗಳ ನಡುವೆ ನಾವು ಕೆಲಸ ಮಾಡುತ್ತಿದ್ದೇವೆ. ಕಾಲಮಿತಿ ವೇತನ ಬಡ್ತಿ 2012ರಿಂದ ಸಿಗಬೇಕಿದ್ದು ಅದನ್ನು ಕೊಡಿಸಿಕೊಡಬೇಕು. 7ನೇ ವೇತನ ಆಯೋಗದಲ್ಲಿ ವಿಶೇಷ ಭತ್ಯೆಯನ್ನು ಇತರ ಪದ್ಧತಿಯ ವೈದ್ಯರಿಗೆ ಸಮಾನವಾಗಿ ನಮಗೂ ಕೊಡಬೇಕು. ಶೇ 50ರಷ್ಟನ್ನಾದರೂ ಕೊಡಿಸಬೇಕು’ ಎಂದು ಒತ್ತಾಯಿಸಿದರು.
‘ರಾಜ್ಯದಲ್ಲಿ ಸದ್ಯ 275 ಸಂಚಾರಿ ಪಶುವೈದ್ಯಕೀಯ ಆಂಬುಲೆನ್ಸ್‌ಗಳಿದ್ದು ಅದರಲ್ಲಿ ಕೆಲಸ ಮಾಡುವವರಿಗೆ ಕನಿಷ್ಠ ₹56 ಸಾವಿರ ವೇತನವನ್ನು ಏಜೆನ್ಸಿ ಮೂಲಕ ಕೊಡಿಸಬೇಕು. ಖಾಲಿ ಇರುವ ‘ಡಿ’ ಗ್ರೂಪ್ ಹಾಗೂ ವೆಟರ್ನರಿ ಅಸಿಸ್ಟೆಂಟ್ ಹುದ್ದೆಗಳನ್ನು ಭರ್ತಿ ಮಾಡಬೇಕು. 400 ಅಧಿಕಾರಿಗಳ ನೇಮಕಾತಿ ಪ್ರಕ್ರಿಯೆ ಚುರುಕುಗೊಳಿಸಬೇಕು. ಹೊಸದಾಗಿ ರಚನೆಯಾದ ತಾಲ್ಲೂಕುಗಳಲ್ಲೂ ಪಶು ವೈದ್ಯರ ಹುದ್ದೆಗಳನ್ನು ಸೃಜಿಸಿ ನೇಮಿಸಬೇಕು. ಗುತ್ತಿಗೆ ವೈದ್ಯರಿಗೆ 7ನೇ ವೇತನ ಆಯೋಗ ಅನ್ವಯಗೊಳಿಸಬೇಕು. ನಿವೃತ್ತಿಯಾದವರನ್ನು ಅಲೆದಾಡಿಸದೆ ಸೌಲಭ್ಯಗಳನ್ನು ತ್ವರಿತವಾಗಿ ಕಲ್ಪಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ಕೊಡಬೇಕು’ ಎಂದು ಆಗ್ರಹಿಸಿದರು.
ಟಿಪ್ಪು ಎಂದ ಕೂಡಲೇ ಗಲಾಟೆ ಮಾಡ್ತಾರೆ: ಎಚ್‌ಸಿಎಂ
‘ಟಿಪ್ಪು ಸುಲ್ತಾನ್ ಹಳ್ಳಿಕಾರ್ ತಳಿಗಳ ಬೆಳವಣಿಗೆ ಸೇರಿದಂತೆ ಬಹಳಷ್ಟು ವಿಷಯಗಳಲ್ಲಿ ಕೊಡುಗೆ ನೀಡಿದ್ದಾರೆ. ಕೆಲವರು ಟಿಪ್ಪು ಬಗ್ಗೆ ಮಾತಾಡಿದ ಕೂಡಲೇ ಗಲಾಟೆ ಶುರು ಮಾಡಿಬಿಡುತ್ತಾರೆ’ ಎಂದು ಸಚಿವ ಮಹದೇವಪ್ಪ ಹೇಳಿದರು.
‘ಮಾತು ಬಾರದ ಪ್ರಾಣಿಗಳ ಆರೋಗ್ಯ ಕಾಪಾಡುವ ಕೆಲಸ ಸವಾಲಿನದ್ದಾಗಿದೆ. ನಮ್ಮ ದೊಡ್ಡಪ್ಪ ಏನನ್ನೂ ಓದಿರಲಿಲ್ಲ. ಆದರೆ ದನಗಳಿಗೆ ನಾಟಿ ವೈದ್ಯರಾಗಿದ್ದರು. ವಿವಿಧ ಸೊಪ್ಪುಗಳನ್ನು ಅರೆದು ಅನಾರೋಗ್ಯಕ್ಕೆ ತುತ್ತಾದ ಪಶುಗಳಿಗೆ ಔಷಧಿ ನೀಡುತ್ತಿದ್ದರು. ಬಹಳಷ್ಟು ಹೆಸರು ಗಳಿಸಿದ್ದರು. ಕ್ರಮೇಣ ವಿಜ್ಞಾನ ಹಾಗೂ ತಂತ್ರಜ್ಞಾನ ಬೆಳೆದಂತೆಲ್ಲಾ ಚಿಕಿತ್ಸೆ ಸುಲಭವಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.